ಮಂಗಳವಾರ, ಜನವರಿ 25, 2022
28 °C
ಜಿಲ್ಲೆಯಲ್ಲಿ ಮೊದಲ ಬಾರಿಗೆ ವಿನೂತನ ಯೋಜನೆ ಜಾರಿ

ನಾಗರಹೊಳೆ ಅರಣ್ಯ; ಲಂಟಾನ ತೆರವಿಗೆ ನರೇಗಾ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಾಗರಹೊಳೆ ಅರಣ್ಯದಲ್ಲಿ ದಟ್ಟವಾಗಿ ಬೆಳೆದಿರುವ ಲಂಟಾನ ಕಳೆ ತೆಗೆಯಲು ಜಿಲ್ಲಾ ಪಂಚಾಯಿತಿಯು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದ್ದರಿಂದ 26 ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶ ಇದೀಗ ಲಂಟಾನಮುಕ್ತವಾಗಿದೆ. ಒಟ್ಟು 50 ಹೆಕ್ಟೇರ್‌ ಪ್ರದೇಶದಲ್ಲಿರುವ ಲಂಟಾನ ತೆಗೆಯುವ ಗುರಿ ಇದೆ.

ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲಾ ಪಂಚಾಯಿತಿಯು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಅರಣ್ಯ ವಲಯದ ಹೆಬ್ಬಾಳ ಬ್ರಿಡ್ಜ್‌ಪಾಯಿಂಟ್‌ನ 2 ಕಡೆ ಕಾಮಗಾರಿಯನ್ನು ಭರದಿಂದ ನಡೆಯುತ್ತಿದೆ. ಶೇ 50ರಷ್ಟು ಪೂರ್ಣಗೊಂಡಿದೆ.

ಅಂತರಸಂತೆ ವನ್ಯಜೀವಿ ಅರಣ್ಯವಲಯವು 7,484 ಹೆಕ್ಟೇರ್‌ ವಿಸ್ತೀರ್ಣದ ಭೌಗೋಳಿಕ ಪ್ರದೇಶವನ್ನು ಹೊಂದಿದೆ. ಇಲ್ಲಿ ಮುಳ್ಳು ಜಾತಿಯ ಸಸ್ಯಪ್ರಭೇದ ಲಂಟಾನ ವೇಗವಾಗಿ ಬೆಳೆದು ಇಡೀ ಕಾಡನ್ನೆ ಆವರಿಸಿದೆ. ಇದು ನೈಸರ್ಗಿಕ ಹುಲ್ಲಿನ ಬೆಳವಣಿಗೆಗೆ ತಡೆ ಒಡ್ಡಿದೆ. ಸೂರ್ಯನ ಬೆಳಕು ಬೀಳದೆ ಹುಲ್ಲಿನ ಬೆಳವಣಿಗೆ ನಿಂತೇ ಹೋಗಿದೆ. ಅದರಿಂದ ಜಿಂಕೆ ಸೇರಿದಂತೆ ಮತ್ತಿತರ ಪ್ರಾಣಿಗಳ ಮೇವಿಗೂ ತೊಂದರೆಯಾಗಿದೆ.

ಸಾವಿರಕ್ಕೂ ಅಧಿಕ ಮಂದಿಗೆ ಕೆಲಸ
ಅಂತರಸಂತೆ ಗ್ರಾಮ ‍ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 861 ಮಂದಿಗೆ ಯೋಜನೆಯಿಂದ ಕೆಲಸ ದೊರಕಿದೆ. ಅವರಲ್ಲಿ 398 ಪುರುಷರು, 463 ಮಹಿಳೆಯರಿದ್ದಾರೆ. 1,668 ಮಾನವ ದಿನಗಳು ಸೃಜನೆಯಾಗಿದ್ದು, ಒಟ್ಟು ₹ 4.82 ಲಕ್ಷ ಕೂಲಿ ಹಣ ಪಾವತಿಯಾಗಿದೆ. ಹುಣಸೇಕುಪ್ಪೆ ಎ ಹಾಡಿ, ಹುಣಸೇಕುಪ್ಪೆ ಬಿ ಹಾಡಿ, ದಮ್ಮನಕಟ್ಟೆ ಹಾಡಿ ಹಾಗೂ ಹೊನ್ನಮ್ಮನಕಟ್ಟೆ ಜನ ಲಂಟಾನ ಕಳೆ ತೆರವು ಮಾಡುತ್ತಿದ್ದಾರೆ.

ಹಾಡಿ ಜನರು ಈಗ ಉದ್ಯೋಗಕ್ಕಾಗಿ ಕೇರಳ, ತಮಿಳುನಾಡು ಹಾಗೂ ಕೊಡಗಿಗೆ ವಲಸೆ ಹೋಗುವುದು ಕೂಡ ತಪ್ಪಿದೆ. ವಿಶೇಷವಾಗಿ ಅಂತರಸಂತೆ, ಎನ್.ಬೆಳ್ತೂರು ಹಾಗೂ ಹೊಸಹೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿ ಮತ್ತು ಸಾಮಾನ್ಯ ವರ್ಗದ ಜನರಿಗೆ ಉದ್ಯೋಗ ದೊರೆತು, ಕೋವಿಡ್ ಸಂಕಷ್ಟದಲ್ಲಿ ನೆರವಾಗಿದೆ.

ಲಂಟಾನ ತೆರವುಗೊಂಡಿದ್ದರಿಂದ ಅಂತರಸಂತೆ ದಮ್ಮನಕಟ್ಟೆ ವನ್ಯಜೀವಿ ಅರಣ್ಯವಲಯದಲ್ಲಿ ಸಫಾರಿಗೆ ಬರುವ ಪ್ರವಾಸಿಗರಿಗೆ ಪ್ರಾಣಿಗಳ ವೀಕ್ಷಣೆಗೆ ಅನುಕೂಲವಾಗಿದೆ. ಅರಣ್ಯವು ಸ್ವಚ್ಛ ಹಾಗೂ ಇನ್ನಷ್ಟು ಸುಂದರವಾಗಿ ಕಾಣುವಂತಾಗಿದೆ. ವನ್ಯಜೀವಿಗಳಿಗೆ ಮೇವಿನ ಕೊರತೆ ನೀಗಿದೆ.

ಚಾಮರಾಜನಗರದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯದಲ್ಲಿಯೂ ಲಂಟಾನ ತೆರವಿಗೆ ಕಳೆದ ವರ್ಷ ಜೂನ್‌ ತಿಂಗಳಿನಲ್ಲಿ ನರೇಗಾ ಯೋಜನೆಯನ್ನು ಬಳಕೆ ಮಾಡಲಾಗಿತ್ತು.

ಕೆಲಸಗಾರರಿಗೆ ಭದ್ರತೆ, ಊಟದ ವ್ಯವಸ್ಥೆ
ನಾಗರಹೊಳೆಯ ಹುಲಿ ಸಂರಕ್ಷಿತ ಪ್ರದೇಶದೊಳಗೆ ಲಂಟಾನ ತೆರವು ಕಾರ್ಯ ಸುಲಭವಲ್ಲ. ಯಾವ ಸಮಯದಲ್ಲಾದರೂ ವನ್ಯಜೀವಿಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಆದಿವಾಸಿಗಳೂ ಇಂತಹ ಕಾರ್ಯಕ್ಕೆ ಸುಲಭದಲ್ಲಿ ಒಪ್ಪುವುದಿಲ್ಲ. ಆದರೆ, ಜಿಲ್ಲಾ ಪಂಚಾಯಿತಿ ಮತ್ತು ಅರಣ್ಯ ಇಲಾಖೆಯು ಜಂಟಿಯಾಗಿ ಮಧ್ಯಾಹ್ನದ ಊಟವನ್ನು ಒದಗಿಸುವ ಮೂಲಕ ಆದಿವಾಸಿಗಳನ್ನು ಕೆಲಸಕ್ಕೆ ಬರುವಂತೆ ಪ್ರೇರೇಪಿಸಿತು. ಜತೆಗೆ, ವನ್ಯಜೀವಿಗಳಿಂದ ಸಂಭವಿಸಬಹುದಾದ ಉಪಟಳ ನಿವಾರಿಸಲು ಸೂಕ್ತ ರಕ್ಷಣೆಯನ್ನು ಒದಗಿಸಿದೆ. ಆದಿವಾಸಿಗಳು ಇರುವ ಜಾಗದಿಂದ ಕಾಡಿನವರೆಗೆ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಲಂಟಾನ ತೆರವಿನ ಸುತ್ತಮುತ್ತ
ಅಂದಾಜುವೆಚ್ಚ
– ₹ 20.48 ಲಕ್ಷ
ಸೃಜನೆಯಾಗಿರುವ ಮಾನವ ದಿನಗಳು– 1,648
ಕೆಲಸಕ್ಕೆ ಬಂದವರು 861 ಮಂದಿ
ಲಂಟಾನ ತೆರವಿನ ಗುರಿ 50 ಹೆಕ್ಟೇರ್‌
ಈವರೆಗೆ ತೆರವುಗೊಳಿಸಿದ್ದು 26 ಹೆಕ್ಟೇರ್
ಅಂತರಸಂತೆ ವನ್ಯಜೀವಿ ಅರಣ್ಯವಲಯದ ವಿಸ್ತೀರ್ಣ 7,484 ಹೆಕ್ಟೇರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.