ಗುರುವಾರ , ಆಗಸ್ಟ್ 11, 2022
26 °C

ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅಗತ್ಯ: ಸಿಐಟಿಯು ಕಾರ್ಯದರ್ಶಿ ರಾಮಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಗ್ರಾಮ‍ ಪಂಚಾಯಿತಿ ನೌಕರರನ್ನು ಒಡೆದು ಆಳುವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಇದನ್ನು ಅರಿತು ಸಂಘಟಿತರಾಗಿ ಹೋರಾಡಿದರೆ ಮಾತ್ರ ಹಕ್ಕುಗಳನ್ನು ಪಡೆದುಕೊಳ್ಳಬಹುದು. ಇಲ್ಲದಿದ್ದರೆ ಕ್ರಮೇಣ ಕೆಲಸ ಕಳೆದುಕೊಳ್ಳಬೇಕಾಗುತ್ತದೆ’ ಎಂದು ರಾಜ್ಯ ಗ್ರಾಮ‌ ಪಂಚಾಯಿತಿ‌‌ ನೌಕರರ ಸಂಘ(ಸಿಐಟಿಯು)ದ ಪ್ರಧಾನ ಕಾರ್ಯದರ್ಶಿ ಜಿ. ರಾಮಕೃಷ್ಣ ಎಚ್ಚರಿಸಿದರು.

ಸಂಘದಿಂದ ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡ ವಿಭಾಗಮಟ್ಟದ ಸಂಘಟನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಪ್ರತಿ ನಡೆಯೂ‌ ನಮ್ಮ ವಿರುದ್ಧವಾಗಿಯೇ ಇದೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತದೆ. ಬೆನ್ನಿಗೆ ಚೂರಿ ಹಾಕುತ್ತದೆ. ಹೀಗಾಗಿ, ಶತ್ರುಗಳು ಯಾರು ಎಂಬುದನ್ನು ತಿಳಿದುಕೊಳ್ಳದಿದ್ದರೆ ಹೋರಾಟ ಬಹಳ ಕಷ್ಟವಾಗುತ್ತದೆ’ ಎಂದು ತಿಳಿಸಿದರು.

‘‌ಪೊಲೀಸರು, ಸಿಇಒ, ಪಿಡಿಒ, ರಾಜಕಾರಣಿಗಳನ್ನು ಬಳಸಿಕೊಂಡು‌ ಹೋರಾಟ ಹತ್ತಿಕ್ಕಲು ಯತ್ನಿಸುತ್ತದೆ. ಸವಾಲುಗಳ ನಡುವೆಯೂ ನಾವು ಹೋರಾಡುತ್ತಿದ್ದು, ನೌಕರರು ಸಹಕಾರ ಕೊಡಬೇಕು. ಒಗ್ಗಟ್ಟಾಗಿರಬೇಕು. ಒಡಕಿನ ಧ್ವನಿಗೆ ಅವಕಾಶ ನೀಡಬಾರದು’ ಎಂದು ಹೇಳಿದರು.

ಆದೇಶವಾಗುವಂತೆ ನೋಡಿಕೊಳ್ಳಬೇಕು:

‘ಸತತ ನಾಲ್ಕು ‌ವರ್ಷಗಳ‌‌ ಹೋರಾಟದ ಪರಿಣಾಮ, ಪಂಚಾಯಿತಿ ನೌಕರರ ವೇತನಕ್ಕಾಗಿ ಸರ್ಕಾರವು ಬಜೆಟ್‌ನಲ್ಲಿ ಹಣ ಇಟ್ಟಿದೆ. ಸಂಘಟಿತ ಹೋರಾಟದ ಪರಿಣಾಮ, ಕೆಲ ಪ್ರಮುಖ ಬೇಡಿಕೆ ಈಡೇರಿಕೆ ಆಗುವಂತೆ ಮಾಡಿದ್ದೇವೆ. ಅವು ಆದೇಶವಾಗಲು ಹೋರಾಟ ಮುಂದುವರಿಸಬೇಕು. ಇಲ್ಲದಿದ್ದರೆ ಸರ್ಕಾರ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂಬುದರ ಅರಿವಿರಲಿ’ ಎಂದರು.

‘ಮನೆಗಳಿಗೆ ನೇರವಾಗಿ ನೀರು ಪೂರೈಸುವ ಜಲಜೀವನ ಮಿಷನ್ ಅನುಷ್ಠಾನವಾದರೆ ನೀರುಗಂಟಿಗಳು ಯಾಕೆ ಬೇಕು ಎಂಬ ಪ್ರಶ್ನೆ ಬರುತ್ತದೆ. ಕರ ವಸೂಲಾತಿಯನ್ನು ಸ್ತ್ರೀಶಕ್ತಿ ಸಂಘಗಳಿಗೆ ವಹಿಸಿ ಬಿಲ್ ಕಲೆಕ್ಟರ್‌ಗಳನ್ನು ತೆಗೆಯಲು ಹುನ್ನಾರ ನಡೆದಿದೆ. ನೌಕರರಿಗೆ ಕಂಪ್ಯೂಟರ್ ಜ್ಞಾನ ಬೇಕು ಅಗತ್ಯ ಎಂದು ತಿಳಿಸಲಾಗುತ್ತಿದೆ. ಸ್ವಚ್ಛತಾ ಕಾರ್ಮಿಕರು ಮತ್ತು ಕಂಪ್ಯೂಟರ್ ಆಪರೇಟರ್‌ಗಳ ಕೆಲಸಕ್ಕೂ ಭದ್ರತೆ ಇಲ್ಲದಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಎಲ್ಲರೂ ಒಗ್ಟಟ್ಟಾಗಿ ಹೋರಾಡಿದರೆ ಮಾತ್ರ 60ಸಾವಿರ‌ ನೌಕರರ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳಬೇಕು. ಕನಿಷ್ಠ ಕೂಲಿಗೆ ಆಯೋಗವು ದಿನಕ್ಕೆ ₹ 179 ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದೆ. ಇದು ಜಾರಿಯಾದರೆ ಗತಿ ಏನು?’ ಎಂದು ಕೇಳಿದರು. ‘ನೌಕರರು ಅನ್ನಕ್ಕೆ ವಿಷ ಹಾಕುವವರ ಜೊತೆಗಿರದೆ, ಬದುಕು ಸುಧಾರಿಸಲು ಹೋರಾಡುತ್ತಿರುವವರ ಜೊತೆಗಿರಬೇಕು’ ಎಂದರು.

ಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಕೆ. ಬಸವರಾಜ್, ರಾಜ್ಯ ಸಮಿತಿಯ ಖಜಾಂಚಿ ಆರ್.ಎಸ್. ಬಸವರಾಜ್, ಪದಾಧಿಕಾರಿಗಳಾದ ಶಿವಕುಮಾರ್, ಸಿದ್ದರಾಜು,‌ ಚಾಮರಾಜನಗರ ಜಿಲ್ಲಾ ಸಮಿತಿ ಅಧ್ಯಕ್ಷ ಮಹದೇವಸ್ವಾಮಿ, ಮುಖಂಡ ಜಗದೀಶ ಸೂರ್ಯ, ರಾಜ್ಯ ಸಮಿತಿ ಸದಸ್ಯ ಲೋಕೇಶ್ ಪಾಲ್ಗೊಂಡಿದ್ದರು. ದಿನೇಶ್ ಸ್ವಾಗತಿಸಿದರು.

ಹುನ್ನಾರ ತಡೆಯಲು...

ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ.ಬಿ. ನಾಡಗೌಡ, ‘ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ, ಕಾರ್ಯದರ್ಶಿ ಹಾಗೂ ಅಕೌಂಟೆಂಟ್ ಹುದ್ದೆ ಮಾತ್ರ ಸಾಕು ಎಂಬ ಉದ್ದೇಶವಿದೆ. ಇದು ಅನುಷ್ಠಾನಕ್ಕೆ ಬಂದರೆ ಉಳಿದ ನೌಕರರ ಕತೆ ಏನು, ಅವರ ಕುಟುಂಬಗಳು ಏನಾಗಬೇಕು? 31ಸಾವಿರ ನೀರುಗಂಟಿಗಳನ್ನು ಮನೆಗೆ ಕಳುಹಿಸಲೆಂದೇ ಜಲ ಜೀವನ ಮಿಷನ್ ತಂದಿದ್ದಾರೆ. ಬಿಲ್‌ಕಲೆಕ್ಟರ್ ಕೆಲಸವನ್ನೂ ಹೊರಗುತ್ತಿಗೆ ಕೊಡಲು ಉದ್ದೇಶಿಸಿದೆ. ಇದೆಕ್ಕವನ್ನೂ ತಡೆಯಲು ಚಳವಳಿ ಮುಂದುವರಿಸಲೇಬೇಕು’ ಎಂದು ಹೇಳಿದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು