ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಗತ್ತಿನ ಏಕೈಕ ಕಿಡಿಗೇಡಿ ಮನುಷ್ಯ’

ನೀರಿನ ಕೊರತೆ ಆತಂಕ ವ್ಯಕ್ತಪಡಿಸಿದ ಮನೋವೈದ್ಯ
Last Updated 23 ಮೇ 2022, 3:55 IST
ಅಕ್ಷರ ಗಾತ್ರ

ಮೈಸೂರು: ‘ಸೊಗಸಾದ ಈ ಪ್ರಕೃತಿಯಲ್ಲಿರುವ ಏಕೈಕ ಕಿಡಿಗೇಡಿ ಎಂದರೆ ಮನುಷ್ಯ’ ಎಂದು ಕೆ.ಆರ್.ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್.ರವೀಶ್ ತಿಳಿಸಿದರು.

ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್, ನೇಗಿಲಯೋಗಿ ವಿದ್ಯಾವರ್ಧಕ ಸ್ಪರ್ಧಾ ಕೇಂದ್ರವು ಭಾನುವಾರ ಏರ್ಪಡಿಸಿದ್ದ ‘ಎಸ್ಸೆಸ್ಸೆಲ್ಸಿ ನಂತರ ಮುಂದೇನು?’ ಉಚಿತ ಕಾರ್ಯಾಗಾರ ಉದ್ಘಾಟಿಸಿದ ಅವರು ಮಾತನಾಡಿದರು.

‘ಮುಂಚೆ ಬೆಂಗಳೂರಿನಿಂದ ಮೈಸೂರಿಗೆ ಬರುವಾಗ ಇಕ್ಕೆಲಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದವು. ಆದರೆ, ಈಗ ಅವೆಲ್ಲವೂ ನಿವೇಶನಗಳಾಗಿವೆ. ರೈತರೇ ದೇಶದ ಬೆನ್ನುಲುಬು ಎಂದು ಹೇಳುತ್ತಲೇ ಅವರ ಬೆನ್ನಿಗೆ ಹೊಡೆಯುವ ಕೆಲಸವಾಗುತ್ತಿದೆ. ರೈತರ ಮಕ್ಕಳು ಪೆಟ್ರೋಲ್‌ ಬಂಕ್‌ಗಳಲ್ಲಿ, ಕೊರಿಯರ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಆಹಾರ ಮತ್ತು ನೀರಿನ ಕೊರತೆ ಎದುರಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೌಶಲ ಇಲ್ಲದಿದ್ದರೆ ಉತ್ತಮವಾದ ಕೆಲಸ ಸಿಗುವುದು ಕಷ್ಟ. ಪದವಿ ಪಡೆಯು ವುದರ ಜತೆಗೆ ಕೌಶಲ ಅಭಿವೃದ್ಧಿಯ ಕಡೆಗೂ ಗಮನ ಕೊಡಬೇಕು’ ಎಂದು ಕಿವಿಮಾತು ಹೇಳಿದರು.

‘ಮನೋವೈದ್ಯಕೀಯ ವಿಭಾಗ ದಲ್ಲಿ 26 ವರ್ಷದ ಅನುಭವ ಇದೆ. ಮೊದಲಿಗೂ ಇಂದಿಗೂ ಮನೋ ರೋಗಿಗಳ ಸಂಖ್ಯೆಯನ್ನು ಗಮನಿಸಿದರೆ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಭಯವಾಗುತ್ತಿದೆ’ ಎಂದರು.

ಮೈಸೂರು ವಿಶ್ವವಿದ್ಯಾಲಯದ ವೃತ್ತಿ ಕೇಂದ್ರದ ಸಲಹೆಗಾರ ಡಿ.ರವಿಕುಮಾರ್ ಮಾತನಾಡಿ ‘ಇದು ಜೀವನದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಬೇಕಾದ ಹೊತ್ತು. ಎಸ್ಸೆಸ್ಸೆಲ್ಸಿಯ ನಂತರ ಏನು ಮಾಡಬೇಕೆಂದು ಯೋಚಿಸಿ ಹೆಜ್ಜೆ ಇಡ ಬೇಕು. ಒಂದು ವೇಳೆ ಇಲ್ಲಿ ಎಡವಿದರೆ ಜೀವನ ಪರ್ಯಂತ ಕೊರಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪಿಯುಸಿ, ಐಐಟಿ, ಡಿಪ್ಲೊಮಾ, ಜಿಟಿಟಿಸಿ, ಸಿಪೆಟ್ ಮೊದಲಾದ ಕೋರ್ಸ್‌ಗಳ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳು ನೀಡಿದರು.

ಟ್ರಸ್ಟ್‌ನ ಗೌರವ ಅಧ್ಯಕ್ಷ ಪ್ರೊ.ಕೆ.ಆರ್.ರಂಗಯ್ಯ, ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಜೆಟಿಒ ಜಿ.ಎನ್.ಪ್ರಸನ್ನ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಉಪನ್ಯಾಸಕ ಪರಮೇಶ್ವರ, ಸಿಪೆಟ್‌ನ ವ್ಯವಸ್ಥಾಪಕಿ ಎಸ್.ಭಾರತಿ, ಜಿಟಿಟಿಸಿ ಎಂಜಿನಿಯರ್ ಅರವಿಂದ್, ಟ್ರಸ್ಟ್‌ನ ಖಜಾಂಚಿ ವೈ.ಆರ್.ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT