ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಘನತೆಯನ್ನು ಎತ್ತಿ ಹಿಡಿಯುವೆ: ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

Last Updated 6 ಜೂನ್ 2021, 14:11 IST
ಅಕ್ಷರ ಗಾತ್ರ

ಮೈಸೂರು: ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಅನುಪಸ್ಥಿತಿಯಲ್ಲಿ ನೂತನ ಜಿಲ್ಲಾಧಿಕಾರಿಯಾಗಿ ಡಾ.ಬಗಾದಿ ಗೌತಮ್ ಭಾನುವಾರ ಇಲ್ಲಿ ಅಧಿಕಾರ ಸ್ವೀಕರಿಸಿದರು.

ಸಂಜೆ 4 ಗಂಟೆಯ ಹೊತ್ತಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದ ಇವರನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು. ಈ ವೇಳೆ ರೋಹಿಣಿ ಸಿಂಧೂರಿ ಗೈರಾಗಿದ್ದರು.

ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಲ್ಲಿಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದು ಅನಿರೀಕ್ಷಿತ, ಕೋವಿಡ್ ಪರಿಸ್ಥಿತಿಯಲ್ಲಿ ಇದು ದೊಡ್ಡ ಸವಾಲು. ಸರ್ಕಾರದ ಘನತೆಯನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ’ ಎಂದು ತಿಳಿಸಿದರು.

‘ಈ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ನಾಗರಿಕ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಯಾವುದೇ ಜಿಲ್ಲೆಯಾಗಿದ್ದರೂ, ಆಡಳಿತದಲ್ಲಿ ಕ್ಲಿಷ್ಟ ವಿಷಯ ಇರುತ್ತದೆ. ಮೈಸೂರು ಪಾರಂಪರಿಕ ಹಾಗೂ ದೊಡ್ಡ ನಗರವಾಗಿರುವುದರಿಂದ ಸ್ವಲ್ಪ ಹೆಚ್ಚು ಸಮಸ್ಯೆ ಇರಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪಾರದರ್ಶಕತೆ, ಜನಸ್ನೇಹಿ, ಉತ್ತರದಾಯಿತ್ವ ಹಾಗೂಸ್ವಚ್ಛ ಆಡಳಿತ ನನ್ನ ಗುರಿ. ಸದ್ಯದ ಮಟ್ಟಿಗೆ, ಕೋವಿಡ್ ನಿಯಂತ್ರಣವೇ ಮೊದಲ ಆದ್ಯತೆ. ಎಲ್ಲರ ಸಲಹೆಗಳನ್ನೂ ಮುಕ್ತಕಂಠದಿಂದ ಸ್ವಾಗತಿಸುತ್ತೇನೆ. ಹಾಗೆಂದು,ಒಂದೆರಡು ದಿನಗಳಲ್ಲಿ ದೊಡ್ಡ ಬದಲಾವಣೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.

ಹಿಂದಿನ ಜಿಲ್ಲಾಧಿಕಾರಿ, ಹಿಂದಿನ ಪಾಲಿಕೆ ಆಯುಕ್ತರು, ಹೀಗಿನ ಹೊಸ ಆಯುಕ್ತರು, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೊಂದಿಗೆ ಈಗಾಗಲೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದರು.

‘ನಾನೊಬ್ಬ ‘ಲೋಪ್ರೊಫೈಲ್’ ಅಧಿಕಾರಿ. ಪ್ರಾಮಾಣಿಕತೆಯಿಂದ ಪಾರದರ್ಶಕವಾಗಿ ನನ್ನ ಕೆಲಸವನ್ನು ಮಾಡಿಕೊಂಡು ಹೋಗುತ್ತೇನೆ. ಈ ರೀತಿ ಮಾಡಿದರೆ ಎಲ್ಲರ ಬೆಂಬಲವೂ ದೊರೆಯುತ್ತದೆ. ಎಲ್ಲೆಡೆ ಎಲ್ಲರಿಂದ ಒಳ್ಳೆಯ ಸಹಕಾರ ಸಿಕ್ಕಿದೆ’ ಎಂದು ತಿಳಿಸಿದರು.

ಹಿಂದೆ ಇಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅಭಿರಾಂ ಜಿ ಶಂಕರ್ ಅವರನ್ನು ಒಮ್ಮೆ ಇಲ್ಲಿ ಭೇಟಿಯಾಗಿದ್ದೆ. ಆಡಳಿತ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದೆ ಎಂದು ನೆನಪಿಸಿಕೊಂಡರು.

2009ರ ಐಎಎಸ್‌ ಬ್ಯಾಚ್‌ ಆಗಿರುವ ಬಗಾದಿ ಗೌತಮ್‌, ರಾಯಚೂರು, ಚಿಕ್ಕಮಗಳೂರು, ದಾವಣಗೆರೆ ಜಿಲ್ಲಾಧಿಕಾರಿಯಾಗಿ, ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT