ಮಂಗಳವಾರ, ಜೂನ್ 15, 2021
21 °C
ಹುಣಸೂರು ನಗರದ ಮೆಕ್ಯಾನಿಕ್‌ ಸೈಯದ್ ಅನ್ವರ್ ಪಾಷಾ ಅವರ ಕೈಚಳಕ

ಹಳೆಯ 200 ಬೈಕ್‌ಗಳಿಗೆ ಮರು ಜೀವ

ಎಚ್‌.ಎಸ್.ಸಚ್ಚಿತ್ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಎಪ್ಪತ್ತರ ದಶಕದ ಜಾವಾ, ಯಜ್ಡಿ ಬೈಕ್‌ಗಳು ಸದ್ದು ಮಾಡುತ್ತಾ ರಸ್ತೆಯಲ್ಲಿ ಹೋಗುತ್ತಿದ್ದರೆ ಒಂದು ಕ್ಷಣ ಪಾದಚಾರಿಗಳು ಬೆಚ್ಚಿಬೀಳದೇ ಇರುವುದಿಲ್ಲ, ಅಷ್ಟೊಂದು ಶಬ್ದ ಹೊಮ್ಮಿಸುತ್ತವೆ. ಹಾಗೆಯೇ ಈ ವಿಂಟೇಜ್ ಬೈಕ್‌ಗಳನ್ನು ಈಗಲೂ ಜತನದಿಂದ ಕಾಪಾಡಿಕೊಂಡು ಬಂದವರೂ ಇದ್ದಾರೆ.

ಹಳೆಯ ಬೈಕ್‌ಗಳ ರಿಪೇರಿ ಮಾಡುವ ಮೆಕ್ಯಾನಿಕ್‌ಗಳೂ ಈಗಲೂ ಅಲ್ಲಲ್ಲಿ ಸಿಗುತ್ತಾರೆ.
ಇವರು ಆ್ಯಂಟಿಕ್‌ ಬೈಕ್‌ಗಳಿಗೆ ಜೀವಕಳೆ ತರುತ್ತಾರೆ. ಅಂಥವರ ಸಾಲಿನಲ್ಲಿ ಹುಣಸೂರು ನಗರದ ಸೈಯದ್ ಅನ್ವರ್ ಪಾಷಾ ಕೂಡ ಒಬ್ಬರು.

ಚಾಮರಾಜನಗರ ಮೂಲದ 55 ವರ್ಷದ ಪಾಷಾ, 10 ವರ್ಷಗಳಿಂದ 200 ಹಳೆಯ ಬೈಕ್‌ಗಳಿಗೆ ಹೊಸ ರೂಪ ಕೊಟ್ಟಿದ್ದಾರೆ.

‘ಗುಜರಿಗೆ ಹಾಕುವ ಹಂತಕ್ಕೆ ಬಂದ ಬೈಕ್‌ಗಳನ್ನು ಖರೀದಿಸಿ, ಕೆಲ ಹೊಸ ಬಿಡಿ ಭಾಗಗಳನ್ನು ತಂದು ಸೇರಿಸಿ ಸಿದ್ಧಪಡಿಸುತ್ತೇನೆ. ಕೊಳ್ಳುವವರಿದ್ದರೆ ಅವರಿಗೆ ಮಾರುತ್ತೇನೆ’ ಎನ್ನುತ್ತಾರೆ ಪಾಷಾ.

‘ಮೈಸೂರಿನ ಜಾವಾ ಕಾರ್ಖಾನೆ ನಿವೃತ್ತ ನೌಕರ ರಾವಿ ಎಂಬುವವರ ವರ್ಕ್‌ಶಾಪ್‌ನಲ್ಲಿ 10 ವರ್ಷ ಬೈಕ್‌ ರಿಪೇರಿ ತರಬೇತಿ ಪಡೆದೆ. ಪುರಸಭೆ ಮಾಜಿ ಅಧ್ಯಕ್ಷ ಶಿವರಾಂ, ಎಚ್.ಎಸ್.ಶಿವಯ್ಯ ಅವರ ನೆರವಿನಿಂದ ಹುಣಸೂರಿನಲ್ಲಿ ನೆಲೆಸಿದೆ. ಜೀವನಕ್ಕಾಗಿ ಬೈಕ್ ರಿಪೇರಿ ಮಾಡುವುದನ್ನು ಮುಂದುವರೆಸಿದೆ. ಚಿಕ್ಕ ವರ್ಕ್‌ಶಾಪ್‌ಅನ್ನು ಇಟ್ಟು ಕೊಂಡಿದ್ದೇನೆ’ ಎಂದು ಪಾಷಾ
ಹೇಳುತ್ತಾರೆ.

‘ಬೈಕ್‌ ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಒಂದು ಬೈಕ್ ಸಿದ್ಧಪಡಿಸಲು ಕನಿಷ್ಠ 3 ತಿಂಗಳು ಬೇಕಾಗುತ್ತದೆ.
ಭವಿಷ್ಯದ ತಲೆಮಾರಿಗೆ ದೇಸಿ ಬೈಕ್ ಕುರಿತು ಒಂದಿಷ್ಟು ಮಾಹಿತಿ ತಿಳಿಸಿ, ಪರಂಪರೆ ಉಳಿಸುವ ಕೆಲಸ ಮಾಡುತ್ತೇನೆ’ ಎನ್ನುತ್ತಾರೆ ಸೈಯದ್ ಅನ್ವರ್ ಪಾಷಾ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.