ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಾಕ್‌ಡೌನ್‌: ನಡೆಯದ ಖರೀದಿ- ಸಿಗದ ನೆಮ್ಮದಿ

ತರಕಾರಿ–ಹಣ್ಣು–ಹೂವು ಬೆಳೆಗಾರರಿಗೆ ತಪ್ಪದ ಸಂಕಷ್ಟ
Last Updated 8 ಜೂನ್ 2021, 7:38 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದಾದ್ಯಂತ ಮತ್ತೊಂದು ವಾರ (ಜೂನ್‌ 14ರವರೆಗೂ) ಲಾಕ್‌ಡೌನ್‌ ವಿಸ್ತರಣೆಯಾಗಿದೆ. ಕೋವಿಡ್‌ ಸಾಂಕ್ರಾಮಿಕ ಸೋಂಕು ತೋಟಗಾರಿಕೆ ಬೆಳೆಗಾರರ ಬದುಕಿಗೂ ಕಂಟಕವಾಗಿ ಕಾಡುತ್ತಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ಬಾರಿಯ ಪರಿಸ್ಥಿತಿ ಕೊಂಚ ಪರವಾಗಿಲ್ಲ ಎಂದರೂ; ಅಸಂಖ್ಯಾತ ಬೆಳೆಗಾರರು ತಾವು ಬೆಳೆದ ತೋಟಗಾರಿಕೆ ಉತ್ಪನ್ನಗಳನ್ನು ಸಕಾಲಕ್ಕೆ ಮಾರಾಟ ಮಾಡಲಾಗದೆ ನಷ್ಟ ಅನುಭವಿಸುವುದು ಇಂದಿಗೂ ಮುಂದುವರೆದಿದೆ. ಕೆಲವರು ಹತಾಶರಾಗಿ ರಸ್ತೆಗೆ ಸುರಿದು ಪ್ರತಿಭಟಿಸಿದ್ದು ನಡೆದಿದೆ.

ತೋಟಗಾರಿಕೆ ಇಲಾಖೆ ಸಹಾಯವಾಣಿ ಆರಂಭಿಸಿದರೂ ಬಹುತೇಕ ಬೆಳೆಗಾರರಿಗೆ ಪ್ರಯೋಜನವಾಗದಾಗಿದೆ. ತಾವು ಬೆಳೆದ ತರಕಾರಿ, ಹಣ್ಣು, ಹೂವನ್ನು ಸಕಾಲಕ್ಕೆ ಮಾರಾಟ ಮಾಡಲಾಗದೆ ಕೆಲವರು ಹೊಲದಲ್ಲೇ ಬಿಟ್ಟಿದ್ದಾರೆ. ತಮ್ಮ ಆಪ್ತೇಷ್ಟರು, ಊರವರು, ನೆರೆಹೊರೆಯವರಿಗೆ ಉಚಿತವಾಗಿ ವಿತರಿಸಿದ್ದಾರೆ. ಬೆರಳೆಣಿಕೆಯ ಬೆಳೆಗಾರರು ತಾವು ಬೆಳೆದಿದ್ದ ಸಮೃದ್ಧ ಫಸಲನ್ನು ಉಳುಮೆ ಮಾಡುವ ಮೂಲಕ ಭೂ ತಾಯಿಯ ಮಡಿಲಿಗೆ ಸೇರಿಸಿದ್ದಾರೆ.

ಮೈಸೂರು ಹೊರ ವಲಯದ ಹಂಚ್ಯಾ ಗ್ರಾಮದಲ್ಲಿ ಪುಷ್ಪ ಕೃಷಿ ನಡೆಸಿದ್ದ ಕೃಷಿಕರೊಬ್ಬರು, ಕೊಯ್ಲು ಮಾಡಿದ ಹೂವನ್ನು ಕೋವಿಡ್‌ನಿಂದ ಮಾರಾಟ ಮಾಡಲಿಕ್ಕಾಗದಿದ್ದಕ್ಕೆ, ಕೂಲಿ ಕೊಟ್ಟು ಕೊಯ್ಲು ಮಾಡಿಸೋದು ಬೇಡ, ನಷ್ಟ ಅನುಭವಿಸೋದು ಬೇಡ ಎಂದು ಹೂವಿನ ಗಿಡಗಳನ್ನು ಉಳುಮೆ ಮೂಲಕ ಕಿತ್ತು ಹಾಕಿದ್ದಾರೆ.

‘ಬೇಸಿಗೆಯಲ್ಲಿ ಒಳ್ಳೆಯ ಧಾರಣೆ ಸಿಗಬಹುದು ಎಂದು ಬೆಂಡೆ ಬೆಳೆದಿದ್ದೆ. ಫಸಲು ಕೊಯ್ಲಿಗೆ ಬಂದ ದಿನದಿಂದ ಎಪಿಎಂಸಿಯಲ್ಲಿ ಬೆಂಡೆಕಾಯಿ ಧಾರಣೆ 1 ಕೆ.ಜಿ.ಗೆ ₹ 5 ದಾಟಲಿಲ್ಲ. ಕೊಯ್ಲಿನ ಕೂಲಿ ಸಿಗಲ್ಲ ಎಂದು ಗಿಡಗಳ ಆರೈಕೆಯನ್ನೇ ನಿಲ್ಲಿಸಿದೆ. ಸಹಸ್ರ, ಸಹಸ್ರ ರೂಪಾಯಿ ನಷ್ಟ ಅನುಭವಿಸುವ ಮೂಲಕ ಕೈ ಸುಟ್ಟುಕೊಂಡೆ. ಆದರೆ ಸೋಮವಾರ 1 ಕೆ.ಜಿ. ಧಾರಣೆ ₹ 17 ಇದೆ. ವಾರದ ಅವಧಿಯಲ್ಲೇ ಸಾಕಷ್ಟು ವ್ಯತ್ಯಾಸವಾಗಿದೆ. ಇದರಿಂದ ನನಗೆ ಭರಿಸಲಾಗದ ನಷ್ಟವುಂಟಾಗಿದೆ’ ಎಂದು ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿಯ ಯುವ ಕೃಷಿಕ ಪ್ರಭಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹಿಂದಿನ ವರ್ಷದಂತೆಯೇ ಈ ಬಾರಿಯೂ ಮೈಸೂರು ತಾಲ್ಲೂಕಿನ ವೀಳ್ಯದೆಲೆ ಬೆಳೆಗಾರರಿಗೆ ಸಂಕಷ್ಟ ತಪ್ಪದಾಗಿದೆ. ಬಳ್ಳಿಯಲ್ಲಿನ ಎಲೆಯನ್ನು ಕೊಯ್ಲು ಮಾಡದಿದ್ದರೆ, ಹೊಸ ಎಲೆ ಚಿಗುರಲ್ಲ. ಕೊಯ್ಲು ಮಾಡಿದರೆ ಮಾರಾಟ ಮಾಡಲು ಅವಕಾಶವೇ ಇಲ್ಲ. ಸಾಲ ಮಾಡಿಕೊಂಡು ಬಳ್ಳಿಯಲ್ಲಿನ ಎಲೆ ಕೊಯ್ಯಿಸುತ್ತಿದ್ದೇವೆ. ಕೊಯ್ದ ಎಲೆಗಳನ್ನು ಬಳ್ಳಿಯ ಬುಡಕ್ಕೆ ಹಾಕಿದ್ದೇವೆ. ಇಂತಹ ಸಂಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸದಿದ್ದರೆ, ಸರ್ಕಾರವಿದ್ದರೇನು? ಇಲ್ಲದಿದ್ದರೇನು? ಎಂಬ ಆಕ್ರೋಶದ ನುಡಿ ಉದ್ಬೂರಿನ ವೀಳ್ಯದ ಎಲೆ ಬೆಳೆಗಾರ ಗಣೇಶ್‌ ಅವರದ್ದು.

ಹೊಲದಲ್ಲೇ ಹೂಕೋಸು

- ಎಚ್‌.ಎಸ್.ಸಚ್ಚಿತ್

ಹುಣಸೂರು: ಕೋವಿಡ್‌ನ ಹೊಡೆತಕ್ಕೆ ತಾಲ್ಲೂಕಿನ ಸಣ್ಣ ಹಿಡುವಳಿದಾರರು ತತ್ತರಿಸಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದ್ದಾರೆ.

ತಾಲ್ಲೂಕಿನ 2500 ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ, ಹಣ್ಣು, ಹೂವಿನ ಬೇಸಾಯವಿದೆ.

ಅಗ್ರಹಾರದ ಪ್ರವೀಣ್‌ ಒಂದು ಎಕರೆಯಲ್ಲಿ ಮೆಣಸಿನಕಾಯಿ, ಎರಡು ಎಕರೆಯಲ್ಲಿ ಹೂಕೋಸು ಬೆಳೆದಿದ್ದಾರೆ. ಅಲ್ಪಾವಧಿ ಬೆಳೆಗೆ ಬ್ಯಾಂಕ್‌ ಸಾಲ ಸಿಗದಿದ್ದರಿಂದ ಬೇಸಾಯಕ್ಕಾಗಿಯೇ ₹ 80 ಸಾವಿರ ಕೈ ಸಾಲ ಮಾಡಿಕೊಂಡಿದ್ದಾರೆ. ಸಮೃದ್ಧ ಫಸಲು ಬಂದಿದೆ. ಆದರೆ ಕೋವಿಡ್‌ನಿಂದ ಮಾರುಕಟ್ಟೆ ಇಲ್ಲದಿರುವುದರಿಂದ ಕೊಯ್ಲು ಮಾಡಿಲ್ಲ. ಹೊಲದಲ್ಲೇ ಬಿಟ್ಟಿದ್ದಾರೆ.

ಈಗಲ್ಲ, 15 ತಿಂಗಳಿನಿಂದ ತರಕಾರಿ ಬೆಳೆಯುತ್ತಿದ್ದರೂ, ಕೊಳ್ಳುವವರೇ ಇಲ್ಲ. ಹೊಲದಲ್ಲೇ ಕೊಳೆಯುತ್ತಿದೆ ಎಂದು ಪ್ರವೀಣ್‌ ಗದ್ಗದಿತರಾದರು.

ಇದೇ ಗ್ರಾಮದ ಬಸವರಾಜೇಗೌಡ ಬೆಳೆದ ಟೊಮೊಟೊ, ಗೋಪಾಲೇಗೌಡ ಬೆಳೆದಿರುವ ಹೂಕೋಸು ಮತ್ತು ಟೊಮೊಟೊ ಹೊಲದಲ್ಲೇ ಉಳಿದಿದೆ.

***

ಕಲ್ಲಂಗಡಿ ಕೇಳುವವರೇ ಇಲ್ಲ

- ಪ್ರಸನ್ನಕುಮಾರ್

ಬೆಟ್ಟದಪುರ: ಇಲ್ಲಿಗೆ ಸಮೀಪದ ಹಲಗನಹಳ್ಳಿ ಗ್ರಾಮದ ಅತ್ತರ್‌ಮತೀನ್ ತಮ್ಮ ಆರು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ.

ಲಾಕ್‌ಡೌನ್‌ನಿಂದ ಯಾವೊಬ್ಬ ಖರೀದಿದಾರರು ಬಾರದಿದ್ದರಿಂದ, ಹಣ್ಣುಗಳು ಬಿಕರಿಯಾಗದೆ ಜಮೀನಲ್ಲಿಯೇ ಕೊಳೆಯುತ್ತಿವೆ. ಇದರಿಂದ ಬೆಳೆಗಾರನಿಗೆ ಭರಿಸಲಾಗದ ನಷ್ಟವುಂಟಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ₹ 7 ಲಕ್ಷ ಖರ್ಚು ಮಾಡಿ ವಿಶೇಷ ತಳಿಯ ಕಲ್ಲಂಗಡಿ ಬೆಳೆ ಬೆಳೆದಿದ್ದಾರೆ ಅತ್ತರ್‌. ಬಂಪರ್‌ ಫಸಲು ಬಂದಿದೆ. ಆದರೆ ಸ್ಥಳೀಯ ವ್ಯಾಪಾರಿಗಳು ಖರೀದಿಗೆ ಮುಂದಾಗದಿರುವುದರಿಂದ ಭಾರಿ ನಷ್ಟ ಅನುಭವಿಸಿದ್ದಾರೆ.

ಹೊಲದಲ್ಲಿಯೇ ಹಣ್ಣುಗಳನ್ನು ಬಿಟ್ಟಿದ್ದು, ಸಂಬಂಧಿಕರು, ಪರಿಚಯಸ್ಥರಿಗೆ ಉಚಿತವಾಗಿ ಕೊಡುತ್ತಿದ್ದಾರೆ. ಇಂತಹ ಸಂಕಷ್ಟ, ನಿಕೃಷ್ಟ ಪರಿಸ್ಥಿತಿ ಯಾವೊಬ್ಬ ರೈತನಿಗೂ ಬರಬಾರದು. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಸೂಕ್ತ ಪರಿಹಾರ ಒದಗಿಸಬೇಕು ಎಂಬ ಮನವಿ ಅತ್ತರ್‌ಮತೀನ್‌ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT