ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಬೀದಿಯಲ್ಲಿ ವಿಷ್ಣು ಪುತ್ಥಳಿ ಬೇಡ: ಭಾರತಿ ವಿಷ್ಣುವರ್ಧನ್

ಉದ್ಬೂರಿನ ಹಾಲಾಳು ಬಳಿ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಭಾರತಿ ವಿಷ್ಣುವರ್ಧನ್
Last Updated 30 ಡಿಸೆಂಬರ್ 2020, 14:21 IST
ಅಕ್ಷರ ಗಾತ್ರ

ಮೈಸೂರು: ನಟ ವಿಷ್ಣುವರ್ಧನ್ ಅವರ ‍‍ಪುತ್ಥಳಿಯನ್ನು ಬೀದಿಬೀದಿಯಲ್ಲಿ ಇಡುವುದನ್ನುಇಷ್ಟಪಡುವುದಿಲ್ಲ ಎಂದು ನಟಿ ಭಾರತಿವಿಷ್ಣುವರ್ಧನ್ ತಿಳಿಸಿದರು.

ಉದ್ಬೂರು ಬಳಿ ನಿರ್ಮಾಣವಾಗುತ್ತಿರುವ ‘ವಿಷ್ಣು ಸ್ಮಾರಕ’ಕ್ಕೆ ಬುಧವಾರ ಪೂಜೆ ಸಲ್ಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬೀದಿಬೀದಿಯಲ್ಲಿ ಪ್ರತಿಮೆ ಇಡುವುದು ವಿಷ್ಣುವರ್ಧನ್ ಅವರಿಗೂ ಇಷ್ಟ ಇರಲಿಲ್ಲ. ಅಭಿಮಾನದಿಂದ ಪ್ರತಿಮೆ ಸ್ಥಾಪಿಸುತ್ತೇವೆ ಎನ್ನುವುದಾದರೆ ಅದನ್ನು ಸಮರ್ಪಕವಾಗಿ ಮಾಡಬೇಕು. ಪುತ್ಥಳಿ ಧ್ವಂಸವನ್ನು ಅವಮಾನ ಎಂದುಕೊಳ್ಳದೇ ಆಶೀರ್ವಾದ ಎಂದುಕೊಳ್ಳಬೇಕು. ಧ್ವಂಸ ಮಾಡಿದವರ ವಿರುದ್ಧ ಮಾತನಾಡದಿರುವುದೇ ಉತ್ತಮ’ ಎಂದು ಹೇಳಿದರು.

‘ಯಾರ ಯಾರ ಮನಸ್ಸಿನಲ್ಲಿ ಏನೇನು ಇದೆಯೋ ಅದು ನಮಗೆ ಗೊತ್ತಾಗುವುದಿಲ್ಲ. ಅವರಿಗೆ ಅನಿಸಿದ್ದನ್ನು ಅವರು ಮಾಡುತ್ತಾರೆ. ವಿಷ್ಣುವರ್ಧನ್ ಕುರಿತು ಏನೇ ಹೇಳಿದರೂ ಅದು ಜನಪ್ರಿಯತೆ ತಂದುಕೊಡುತ್ತದೆ ಎಂದು ಕೆಲವರು ಭಾವಿಸಿದ್ದಾರೆ’ಎಂದು ತಿಳಿಸಿದರು.

‘ನಟ ವಿಷ್ಣುವರ್ಧನ್ ಅವರು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ಪ್ರತ್ಯಕ್ಷವಾಗಿ ಇಲ್ಲದೇ ಇದ್ದರೂ ಪರೋಕ್ಷವಾಗಿ ಅವರು ಇಲ್ಲೇ ನಮ್ಮೊಂದಿಗೆ ಇದ್ದಾರೆ. ಎಲ್ಲರ ಹೃದಯದಲ್ಲೂ ಇದ್ದಾರೆ’ ಎಂದು ತಿಳಿಸಿದರು.

ಇನ್ನೊಂದು ವರ್ಷದಲ್ಲಿ ಇಲ್ಲಿ ವಿಷ್ಣು ಸ್ಮಾರಕ ನಿರ್ಮಾಣವಾಗಲಿದೆ ಎಂಬ ಭರವಸೆ ಸಿಕ್ಕಿದೆ. ಈಗ ಸ್ಮಾರಕದ ಕೆಲಸವೂ ಆರಂಭವಾಗಿದೆ. ಇದನ್ನು ಪೂರ್ಣಗೊಳಿಸಿ ಎಲ್ಲರಿಗೂ ಸಮರ್ಪಣೆ ಮಾಡಬೇಕಿದೆ ಎಂದರು.

ಪುತ್ರಿ ಕೀರ್ತಿ ವಿಷ್ಣುವರ್ಧನ್ ಪ್ರತಿಕ್ರಿಯಿಸಿ, ‘ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ. ಅಪ್ಪನ ಬಗ್ಗೆ ಯಾರು ಏನೇ ಅಂದ್ರು, ಏನೇ ಮಾಡಿದರೂ ಅವರ ಹೆಸರನ್ನು ಅಳಿಸಲು ಸಾಧ್ಯವಾಗುವುದಿಲ್ಲ. ಅವರ ಮೇಲಿನ ಅಭಿಮಾನ ಕಡಿಮೆ ಕಡಿಮೆಯಾಗುವುದಿಲ್ಲ’ ಎಂದರು.

ನಗರದಲ್ಲಿ ಹಲವೆಡೆ ಪುಣ್ಯಸ್ಮರಣೆ

ಕರುಣಾಮಯಿ ವಿಷ್ಣು ಅಭಿಮಾನಿಗಳ ಬಳಗ, ವಿಷ್ಣು ಸೇನಾ ಸಮಿತಿ ಸೇರಿದಂತೆ ಹಲವು ಸಂಘಟನೆಗಳ ವತಿಯಿಂದ ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂಭಾಗ ಇರುವ ವಿಷ್ಣುವರ್ಧನ್ ಉದ್ಯಾನದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ‘ವಿಷ್ಣುವರ್ಧನ್ ಅವರು ಮೇರುನಟ. ಅನೇಕ ಕಲಾವಿದರಿಗೆ ಅವರು ಸ್ಫೂರ್ತಿಯಾಗಿದ್ದರು. ಇಂತಹ ನಟನ ಸ್ಮರಣೆಯನ್ನು ಸರ್ಕಾರವೇ ಆಚರಿಸಬೇಕು’ ಎಂದು ಒತ್ತಾಯಿಸಿದರು.

ಅವರು ಕೇವಲ ನಟನೆಯಲ್ಲಿ ಮಾತ್ರವಲ್ಲ ಸರಳತೆಯಲ್ಲೂ ಇತರರಿಗೆ ಮಾದರಿಯಾಗಿದ್ದರು. ಮಹಿಳೆಯರಿಗೆ ಅಪಾರವಾದ ಗೌರವ ನೀಡುತ್ತಿದ್ದರು. ಸರ್ಕಾರ ಅವರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಬೇಕು ಎಂದರು.

ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ ಮಾತನಾಡಿ, ‘ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪದ ಉದ್ಯಾನಕ್ಕೆ ವಿಷ್ಣುವರ್ಧನ್ ಅವರ ಹೆಸರನ್ನು ನಾಮಕರಣ ಮಾಡಬೇಕು ಹಾಗೂ ಅಲ್ಲಿ ವಿಷ್ಣುವರ್ಧನ್ ಪ್ರತಿಮೆ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

ಬಳಿಕ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮುಖಂಡರಾದ ಭೈರಪ್ಪ, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎನ್.ರಾಜೇಶ್, ಲಲಿತಾದ್ರಿಪುರ ವಿಷ್ಣು ಅಭಿಮಾನಿಗಳ ಸಂಘದ ಅಧ್ಯಕ್ಷ ಬಸವಣ್ಣ, ಉಪಾಧ್ಯಕ್ಷ ಮಂಜು, ಮಹದೇವ್, ಮೈಸೂರಿನ ಗಾಂಧಿ ವೃತ್ತ ವಿಷ್ಣು ಸಂಘದ ಅಧ್ಯಕ್ಷ ಮುಬಾರಕ್, ಉಪಾಧ್ಯಕ್ಷ ವಾಲಿ ಕುಮಾರ್ ಸೇರಿದಂತೆ ಹಲವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT