ಸೋಮವಾರ, ಜೂನ್ 27, 2022
28 °C
ಅನುಮತಿ ಪಡೆದಿಲ್ಲ

ರೋಹಿಣಿ ಸೂಚನೆಯಂತೆಯೇ ಈಜುಕೊಳ ನಿರ್ಮಾಣ; ಅಧಿಕಾರಿಗಳ ಸ್ಪಷ್ಟನೆ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪಾರಂಪರಿಕ ಕಟ್ಟಡವಾದ ಮೈಸೂರು ಜಿಲ್ಲಾಧಿಕಾರಿ ನಿವಾಸ ‘ಜಲಸನ್ನಿಧಿ’ಯ ಆವರಣದಲ್ಲಿ ಈಜುಕೊಳ ನಿರ್ಮಿಸಿಕೊಂಡಿದ್ದ ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಇದಕ್ಕೆ ಸಂಬಂಧಿಸಿದಂತೆ ಕೆಲ ವಿಷಯಗಳಲ್ಲಿ ಅನುಮತಿಯನ್ನೇ ಪಡೆದಿಲ್ಲ. ಪಾಲಿಸಬೇಕಿದ್ದ ಬಹುತೇಕ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿದುಬಂದಿದೆ.

ಈಜುಕೊಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಸೂಚನೆಯಂತೆ ತನಿಖೆ ನಡೆಸುತ್ತಿರುವ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಅವರಿಗೆ ಎರಡು ಪುಟದ ಪತ್ರ ಬರೆದಿದ್ದ ರೋಹಿಣಿ ಸಿಂಧೂರಿ, ‘ನಿಯಮ ಉಲ್ಲಂಘಿಸಿಲ್ಲ. ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.

ಆದರೆ, ಈ ವಿಷಯವಾಗಿ ನಿಯಮ ಪಾಲನೆಯೇ ಆಗಿಲ್ಲ ಎನ್ನುತ್ತಾರೆ, ಹೆಸರು ಬಹಿರಂಗ ಪಡಿಸಲು ಬಯಸದ ಕೆಲವು ಅಧಿಕಾರಿಗಳು. 

‘ರೋಹಿಣಿ ಸಿಂಧೂರಿ ಸೂಚನೆಯಂತೆಯೇ ಜಲಸನ್ನಿಧಿ ಆವರಣದಲ್ಲಿ ₹ 28.72 ಲಕ್ಷ ವೆಚ್ಚದಲ್ಲಿ, 650 ಚದರ ಅಡಿ ಜಾಗದಲ್ಲಿ, 60 ಸಾವಿರ ಲೀಟರ್‌ ನೀರಿನ ಸಾಮರ್ಥ್ಯದ ಈಜುಕೊಳ ನಿರ್ಮಿಸಿದ್ದೇವೆ. ಅತ್ಯಾಧುನಿಕ ಓಜೋನೈಸೇಷನ್‌ ತಂತ್ರಜ್ಞಾನ ಅಳವಡಿಸಿದ್ದೇವೆ. ಇದರಿಂದ ಪದೇ ಪದೇ ನೀರು ಬದಲಿಸುವ ಅಗತ್ಯವಿಲ್ಲ. ರೀ ಸೈಕ್ಲಿಂಗ್‌ ಆಗಲಿದೆ. ಕ್ಲೋರಿನೈಸೇಷನ್‌ ಸಹ ಮಾಡುವಂತಿಲ್ಲ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದರು.

‘ಮೇಲ್ಚಾವಣಿ ಇರುವುದರಿಂದ ನೀರು ಆವಿಯೂ ಆಗಲ್ಲ. ನಿರ್ಮಿತಿ ಕೇಂದ್ರದ ಆಡಳಿತಾತ್ಮಕ ವೆಚ್ಚದಲ್ಲಿ ಉಳಿತಾಯವಾಗಿದ್ದ ಅನುದಾನವನ್ನೇ ಈಜುಕೊಳ ನಿರ್ಮಾಣಕ್ಕೆ ಬಳಸಿಕೊಂಡಿದ್ದೇವೆ. ಜಿಲ್ಲಾಧಿಕಾರಿ ನಿವಾಸಕ್ಕೆ ಪೂರೈಕೆಯಾಗುವ ನೀರನ್ನೇ ಈಜುಕೊಳಕ್ಕೂ ತುಂಬಿಸಲಾಗಿದೆ’ ಎಂದು ಕೇಂದ್ರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅನುಮತಿ ಪಡೆದಿಲ್ಲ: ‘ಜಿಲ್ಲಾಧಿಕಾರಿ ನಿವಾಸ ಪಾರಂಪರಿಕ ಕಟ್ಟಡದ ಪಟ್ಟಿಯಲ್ಲಿದೆ. ಈಜುಕೊಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮತಿಗಾಗಿ ನಮಗೆ ಯಾವ ಕೋರಿಕೆಯೂ ಬಂದಿಲ್ಲ’ ಎಂದು ಪಾಲಿಕೆಯ ಯೋಜನಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

‘ಈಜುಕೊಳಕ್ಕೆ ನೀರಿನ ಬಳಕೆಗಾಗಿ ನಮಗೂ ಸಹ ಮನವಿ ಬಂದಿಲ್ಲ’ ಎಂದು ವಾಣಿವಿಲಾಸ ನೀರು ಸರಬರಾಜು ವಿಭಾಗದ ಹಾಲಿ ಅಧಿಕಾರಿಯೊಬ್ಬರು ತಿಳಿಸಿದರೆ, ನಿವೃತ್ತ ಅಧಿಕಾರಿಯೊಬ್ಬರು ‘ನನ್ನನ್ನು ಯಾರು ಕೇಳುತ್ತಾರೆ ಎಂಬ ಮನೋಭಾವನೆಯಿಂದ ಮಾಡಿ
ಕೊಂಡಿದ್ದಾರೆ. ಆಡಳಿತಾರೂಢರು, ಅಧಿಕಾರಸ್ಥರ ಕಾರ್ಯವೈಖರಿಯೇ ಹೀಗೆ. ಏನೂ ಮಾಡಕ್ಕಾಗಲ್ಲ’ ಎಂದು ಬೇಸರ ವ್ಯಕ್ತ‍ಪಡಿಸಿದರು.

ನಿಯಮ ಉಲ್ಲಂಘನೆ ಆಗಿದೆ: ‘ಅದು ಪಾರಂಪರಿಕ ಕಟ್ಟಡವಷ್ಟೇ ಅಲ್ಲ. ಆ ಕಟ್ಟಡದ ವ್ಯಾಪ್ತಿಯೂ ಸಂರಕ್ಷಣಾ ಪ್ರದೇಶ. ಹೊಸ ನಿಯಮದಂತೆ, ಪರಂಪರೆ ಇಲಾಖೆಯ ತಜ್ಞರ ವರದಿಯಂತೆಯೇ ಕಾಮಗಾರಿ ನಡೆಸಬೇಕು. ಈಜುಕೊಳ ನಿರ್ಮಾಣ ವಿಷಯದಲ್ಲಿ ನಿಯಮಾವಳಿ ಉಲ್ಲಂಘನೆಯಾಗಿರುವುದು ಸ್ಪಷ್ಟ’ ಎಂದು ಪಾರಂಪರಿಕ ಸಮಿತಿ ಸದಸ್ಯ, ಇತಿಹಾಸ ತಜ್ಞ ಪ್ರೊ.ಎನ್.ಎಸ್‌.ರಂಗರಾಜು ತಿಳಿಸಿದರು.

ರೋಹಿಣಿ ಅಮಾನತಿಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ

ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿಯಿಲ್ಲದೆ ‘ಜಲಸನ್ನಿಧಿ’ಯಲ್ಲಿ ₹ 16.35 ಲಕ್ಷ ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆಸಿ, ನೆಲಹಾಸಿಗೆ ವಿಟ್ರಿಫೈಡ್‌ ಟೈಲ್ಸ್‌ ಅಳವಡಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಜೂನ್‌ 5ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ನ್ಯಾಯಾಂಗ ತನಿಖೆ ನಡೆಸಿ: ಕಾಂಗ್ರೆಸ್‌

‘ಭೂ ಮಾಫಿಯಾ, ಮೆಡಿಕಲ್‌ ಮಾಫಿಯಾದಿಂದಲೇ ತಮ್ಮ ವರ್ಗಾವಣೆಯಾಗಿದ್ದಾಗಿ ರೋಹಿಣಿ ಸಿಂಧೂರಿ ಹೇಳಿದರೆ, ‘ಯಾರ ಮನೆಯಲ್ಲಿ ರಿಯಲ್‌ ಎಸ್ಟೇಟ್‌ ಡೀಲರ್ಸ್‌ ಮತ್ತು ಬ್ರೋಕರ್ಸ್ ಇದ್ದಾರೆ ಎಂಬುದು ತಮಗೆ ಗೊತ್ತಿರುವುದಾಗಿ’ ಶಿಲ್ಪಾನಾಗ್‌ ಹೇಳಿದ್ದಾರೆ. ತಮ್ಮ ಪ್ರತಿಭಟನೆ ಸಾರ್ಥಕವಾಯಿತು ಎಂದೂ ಹೇಳಿದ್ದಾರೆ. ಎತ್ತಂಗಡಿಯಾದ ಈ ಐಎಎಸ್‌ ಅಧಿಕಾರಿಗಳಿಬ್ಬರೂ ಪರಸ್ಪರ ಗಂಭೀರ ಆರೋಪಗಳನ್ನೇ ಮಾಡಿದ್ದು, ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

* 2020ರ ಹೆರಿಟೇಜ್‌ ರೆಗ್ಯುಲೇಷನ್‌ (ತಿದ್ದುಪಡಿ) ಅನ್ವಯ ಪಾರಂಪರಿಕ ಸಂರಕ್ಷಣಾ ಸಮಿತಿ ರಚಿಸುವಂತೆ ಮುಡಾ ಆಯುಕ್ತರಿಗೆ 3 ಪತ್ರ ಬರೆದಿರುವೆ. ಇನ್ನೂ ರಚನೆಯಾಗಿಲ್ಲ

-ಬಿ.ಆರ್.ಪೂರ್ಣಿಮಾ, ಆಯುಕ್ತರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ

* ಹೆರಿಟೇಜ್‌ ರೆಗ್ಯುಲೇಷನ್‌ನಿಂದ ಅಭಿವೃದ್ಧಿಗೆ ಅಡ್ಡಿಯಾಗಲಿದೆ. ಮೈಸೂರನ್ನು ಹೊರಗಿಡುವಂತೆ ಮನವಿ ಮಾಡಲಾಗುವುದು

-ಡಿ.ಬಿ.ನಟೇಶ್, ಮುಡಾ ಆಯುಕ್ತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು