ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ: ಬಡವರ ಬಂಧು ಸಾಲ ಯೋಜನೆಗೆ ಹಿನ್ನಡೆ

ಗುರಿ 1,620; ಸಿಕ್ಕಿದ್ದು ಒಬ್ಬರಿಗೆ!
Last Updated 23 ಮೇ 2020, 20:01 IST
ಅಕ್ಷರ ಗಾತ್ರ

ಮೈಸೂರು: ‘ಬಡವರ ಬಂಧು’ ಕಿರುಸಾಲ ಯೋಜನೆಯಡಿ 2019–20ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ 1,620 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಒಬ್ಬರಿಗೆ ಮಾತ್ರ ಸಾಲ ನೀಡಲಾಗಿದೆ.

ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಹಾಗೂ ಪಟ್ಟಣ ಬ್ಯಾಂಕ್‌ಗಳ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿದರದಲ್ಲಿ ಮೂರು ತಿಂಗಳ ಅವಧಿಗೆ ₹ 2ರಿಂದ 10 ಸಾವಿರ ಸಾಲ ಕೊಡಲಾಗುತ್ತದೆ. ವ್ಯಾಪಾರಿಗಳನ್ನು ಲೇವಾದೇವಿದಾರರ ವಿಷ ವರ್ತುಲದಿಂದ ರಕ್ಷಿಸುವ ಉದ್ದೇಶದಿಂದ ಈ ಯೋಜನೆ ಜಾರಿ ಮಾಡಲಾಗಿದೆ.

‘ಯೋಜನೆ ಆರಂಭವಾದ ವರ್ಷದಲ್ಲಿ ಸಾಲ ನೀಡಿದ್ದರು. ಆಮೇಲೆ ಅರ್ಜಿಗಳನ್ನೇ ಪರಿಗಣಿಸುತ್ತಿಲ್ಲ. ಕಳೆದ ಸಾಲಿನಲ್ಲಿ ನಾವೆಲ್ಲಾ ಒಮ್ಮೆಗೇ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದ್ದೆವು. ಸಾಲ ನೀಡಲು ಸಾಧ್ಯವಿಲ್ಲ ಎಂಬುದಾಗಿ ಬ್ಯಾಂಕ್‌ ಅಧಿಕಾರಿಗಳು ನೇರವಾಗಿ ಹೇಳುತ್ತಾರೆ’ ಎಂದು ಮೈಸೂರು ನಗರ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಆರ್‌.ಶಿವಲಿಂಗಸ್ವಾಮಿ ಸಮಸ್ಯೆ ಬಿಚ್ಚಿಟ್ಟರು.

ಮೈಸೂರು ವಿಭಾಗದ ಎಂಟು ಜಿಲ್ಲೆಗಳಲ್ಲಿ ಕಳೆದ ಸಾಲಿನಲ್ಲಿ 13,851 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ವಿತರಿಸುವ ಗುರಿ ಹೊಂದಲಾಗಿತ್ತು. ಆದರೆ, ಕೇವಲ 1,084 ಮಂದಿಗೆ ₹ 1.11 ಕೋಟಿ ಸಾಲ ವಿತರಣೆ ಮಾಡಲಾಗಿದೆ.

ಪ್ರಕಾಶ್ ರಾವ್

‘ಫಲಾನುಭವಿಗಳು ಬ್ಯಾಂಕ್‌ಗೆ ಬಂದು ವಿಳಾಸ ನೀಡಿ, ದೃಢೀಕರಣ ಮಾಡಿದರೆ ಅಧಿಕಾರಿಗಳು ಸಾಲ ಕೊಡುತ್ತಾರೆ. ಆದರೆ, ಈ ಸಾಲ ಪಡೆಯಲು ಒಲವು ತೋರುತ್ತಿಲ್ಲ. ನಾವೇ ಹುಡುಕಿಕೊಂಡು ಹೋಗಬೇಕಿದೆ. ಪಾಲಿಕೆ ಅಧಿಕಾರಿಗಳು ಗುರುತಿನ ಚೀಟಿ ನೀಡಿ ಸುಮ್ಮನಾಗುತ್ತಾರೆ. ಯೋಜನೆ ಬಗ್ಗೆ ಮಾಹಿತಿ ನೀಡುತ್ತಿಲ್ಲ’ ಎಂದು ಸಹಕಾರ ಸಂಘಗಳು ಜಂಟಿ ನಿಬಂಧಕ (ಮೈಸೂರು ವಿಭಾಗ) ಪ್ರಕಾಶ್‌ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಲೆಸುತ್ತಾರೆ: ‘ಬ್ಯಾಂಕ್‌ಗಳಲ್ಲಿ ಕೇಳಿದರೆ ಸರಿಯಾಗಿ ಮಾಹಿತಿಯನ್ನೇ ನೀಡುವುದಿಲ್ಲ. ₹ 10 ಸಾವಿರ ಕೊಡಲು ದಾಖಲೆಗಳನ್ನು ಕೇಳುತ್ತಾ ವಾರಗಟ್ಟಲೇ ಅಲೆಸುತ್ತಾರೆ’ ಎಂದು ಬೀದಿ ಬದಿ ವ್ಯಾಪಾರಿ ಬಸವರಾಜು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT