ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಡಿ.ಕೋಟೆ | ಒಕ್ಕಲಿಗ, ದಲಿತರ ನಡುವೆ ಘರ್ಷಣೆ: 20 ಮಂದಿ ವಿರುದ್ಧ ದೂರು

ಗ್ರಾಮದ ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ; ಸವರ್ಣೀಯರ ಹೊಲದಲ್ಲಿ ಗೊಬ್ಬರ ಹೇರಿದ ಟ್ರಾಕ್ಟರ್‌ ಸಾಗಿಸಿದ ನೆಪದಲ್ಲಿ ಗಲಾಟೆ
Last Updated 11 ಮಾರ್ಚ್ 2020, 19:34 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ತಾಲ್ಲೂಕಿನ ಬೊಪ್ಪನಹಳ್ಳಿಗ್ರಾಮದಲ್ಲಿ ದಲಿತ ಹಾಗೂ ಒಕ್ಕಲಿಗ ಸಮುದಾಯದ ಎರಡು ಗುಂಪುಗಳ ನಡುವೆ ಸೋಮವಾರ ರಾತ್ರಿ ಘರ್ಷಣೆ ನಡೆದಿದೆ.

ಒಕ್ಕಲಿಗ ಸಮುದಾಯದ 20 ಜನರ ವಿರುದ್ಧ ದೂರು ದಾಖಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಸೋಮವಾರ ರಾತ್ರಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ರಾಜಣ್ಣ ಎಂಬುವವರು ಟ್ರಾಕ್ಟರ್‌ನಲ್ಲಿ ಗೊಬ್ಬರ ಹೇರಿಕೊಂಡು ಒಕ್ಕಲಿಗ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರ ಜಮೀನಿನ ಮೇಲೆ ಹಾದು ಹೋದರು ಎಂಬ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ. ನಂತರ ಎರಡೂ ಸಮುದಾಯಕ್ಕೆ ಸೇರಿದವರು ಗುಂಪುಗೂಡಿ ದೊಣ್ಣೆ, ಮಚ್ಚು ಹಿಡಿದು ಗಲಾಟೆಗೆ ಇಳಿದಿದ್ದಾರೆ. ವಿಷಯ ತಿಳಿದ ಪೊಲೀಸರು, ಸ್ಥಳಕ್ಕೆ ಬಂದು ಎರಡೂ ಗುಂಪುಗಳನ್ನು ಚದುರಿಸಿದ್ದಾರೆ.

ದೇವಸ್ಥಾನ ಪ್ರವೇಶ ನಿರಾಕರಣೆ:ಗ್ರಾಮದ ಮಾರಮ್ಮನ ದೇವಸ್ಥಾನದ ಪ್ರವೇಶ ವಿಚಾರವಾಗಿ, ಕಳೆದ ಒಂದು ವರ್ಷದಿಂದ ಎರಡೂ ಸಮುದಾಯದವರ ನಡುವೆ ವೈಷಮ್ಯ ಇತ್ತು. ಇದೀಗ, ಗ್ರಾಮದಲ್ಲಿ ಮಾರಮ್ಮನ ಹಬ್ಬಕ್ಕಾಗಿ ತಯಾರಿ ನಡೆದಿತ್ತು. ಈ ಸಂದರ್ಭದಲ್ಲಿ, ದೇವಸ್ಥಾನಕ್ಕೆ ತಮಗೂ ಮುಕ್ತ ಪ್ರವೇಶ ಕಲ್ಪಿಸಬೇಕು ಎಂದು ಪರಿಶಿಷ್ಟ ಸಮುದಾಯದವರು ಆಗ್ರಹಿಸಿದ್ದರು. ಆದರೆ, ಗ್ರಾಮದಲ್ಲಿ ಅದಕ್ಕೆ ವಿರೋಧ ವ್ಯಕ್ತವಾಗಿತ್ತು. ನಂತರ, ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕಳೆದ ವಾರ ಸಭೆ ನಡೆದು, ‘ಎರಡೂ ಸಮುದಾಯದವರು ಒಮ್ಮತವಾಗಿ ಬಂದರೆ ಮಾತ್ರ ಹಬ್ಬ ಮಾಡಬೇಕು ಇಲ್ಲದಿದ್ದರೆ ಬೇಡ’ ಎಂದು ತೀರ್ಮಾನ ಮಾಡಿ ಕಳುಹಿಸಲಾಗಿತ್ತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಆರ್.ಮಂಜುನಾಥ್, ‘ಬೊಪ್ಪನಹಳ್ಳಿ ಗ್ರಾಮದಲ್ಲಿ ಮಾರಮ್ಮನ ಹಬ್ಬ ಮಾಡುವ ವಿಚಾರವಾಗಿ ಸಭೆ ನಡೆಸಿ ಎರಡು ಸಮುದಾಯದವರು ಒಮ್ಮತದ ಅಭಿಪ್ರಾಯಕ್ಕೆ ಬಂದರೆ ಮಾತ್ರ ಗ್ರಾಮದಲ್ಲಿ ಹಬ್ಬ ಮಾಡಬೇಕು. ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಿಸುವುದು ಕಾನೂನು ಪ್ರಕಾರ ತಪ್ಪು. ಅವರಿಗೆ ಪ್ರವೇಶ ನೀಡದಿದ್ದರೆ ಹಬ್ಬವನ್ನೂ ಮಾಡುವಂತಿಲ್ಲ ಎಂದು ಆದೇಶಿಸಲಾಗಿತ್ತು. ಅದಕ್ಕೆ ಗ್ರಾಮಸ್ಥರೂ ಒಪ್ಪಿಕೊಂಡಿದ್ದರು. ಈ ಮಧ್ಯೆ ಈ ಘರ್ಷಣೆ ನಡೆದಿದೆ. ಗಲಾಟೆ ನಡೆದಿರುವ ವಿಚಾರವಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT