ಶನಿವಾರ, ಅಕ್ಟೋಬರ್ 1, 2022
23 °C
ತಂಬೂರಿ ಗುರುರಾಜ್‌ಗೆ ಪ್ರಶಸ್ತಿ, 43 ವರ್ಷಗಳ ಸೇವೆಗೆ ಸಂದ ಗರಿ

ತಂಬೂರಿ ಗುರುರಾಜ್‌ಗೆ ಪ್ರಶಸ್ತಿ: ಅಪ್ಪಟ ’ಪರಂಪರೆ ನೀಲಗಾರ’

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕರ್ನಾಟಕ ಜಾನಪದ ಅಕಾಡೆಮಿಯಿಂದ 2022ನೇ ಸಾಲಿನಲ್ಲಿ ‘ತಂಬೂರಿ ಪದ’ ವಿಭಾಗದಿಂದ ಪ್ರಶಸ್ತಿಗೆ ಆಯ್ಕೆಯಾಗಿರುವ ಗುರುರಾಜ್‌ ಪರಂಪರೆ ನೀಲಗಾರರು. ಜಾನಪದವೇ ಅವರಿಗೆ ‘ಆರಂಭ’. 43 ವರ್ಷಗಳ ಸೇವೆಗೆ ಸರ್ಕಾರದಿಂದ ಗೌರವ ಸಂದಿದೆ.

ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿಯವರಾದ 56 ವರ್ಷದ ಗುರುರಾಜ್, ನಗರದ ಹಳೆ ಕೆಸರೆಯ ಐಶ್ವರ್ಯ ಬಡಾವಣೆ ನಿವಾಸಿ.

ಶಾಲೆಯ ಮೆಟ್ಟಿಲು ಹತ್ತದ ಅವರ ನಾಲಿಗೆಯ ಮೇಲೆ ಹಲವು ಜಾನಪದ ಕಥಾನಕಗಳು ನಲಿದಾಡುತ್ತವೆ. ಅವರ ಸ್ಮರಣ ಶಕ್ತಿಯು ಬೆರುಗು ಮೂಡಿಸುತ್ತದೆ. ತಮ್ಮ ಕಲೆಯ ಮೂಲಕ ಸಂಗೀತ ರಸಿಕರ ಮನ ಗೆದ್ದಿದ್ದಾರೆ.

7ನೇ ವಯಸ್ಸಿನಿಂದಲೇ ಕಲಾ ಸೆಳೆತ ಅವರಿಗಿತ್ತು. ತಂದೆ ದಿವಂಗತ ಮಳವಳ್ಳಿ ಗುರುಬಸವಯ್ಯ ಹಾಡುಗಳನ್ನು ಕೇಳಿ–ನೋಡಿ ಬೆಳೆದವರು. ತಾಯಿ ಚಾಮರಾಜನಗರದ ರಾಮಸಮುದ್ರದ ಮನೆಯಮ್ಮ. ಕುಟುಂಬದವರೆಲ್ಲಾ ನೀಲಗಾರರಾದ್ದರಿಂದ ಆ ಕಲೆ ಗುರುರಾಜ್ ಅವರಿಗೂ ಒಲಿದಿದೆ.

ಚಿಕ್ಕಂದಿನಿಂದಲೇ:

13 ವರ್ಷದವರಿದ್ದಾಗ ತಂದೆ ಕಳೆದುಕೊಂಡ ಅವರು, ದೊಡ್ಡಪ್ಪ ದಪ್ಪತಲೆ ಸಿದ್ದಪ್ಪ, ಚಿಕ್ಕಪ್ಪಂದಿರಾದ ಚಿಕ್ಕರಾಚಯ್ಯ, ಬೆಕ್ಕಲಪ್ಪ ಜೊತೆಯಲ್ಲಿ ಜೀವನ ನಿರ್ವಹಣೆಗಾಗಿ ಹಿಮ್ಮೇಳ ಹಾಡಲು ಹೋಗುತ್ತಿದ್ದವರು. 16ನೇ ವಯಸ್ಸಿಗೆ ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡಿದರು. 17ನೇ ವಯಸ್ಸಿಗೆ ಮೈಸೂರು ದಸರಾದಲ್ಲಿ ಅರಮನೆ ಮುಂಭಾಗದಲ್ಲಿ ಕಾರ್ಯಕ್ರಮ ಕೊಟ್ಟಿದ್ದರು. ನಂತರ, ಹಳ್ಳಿ, ಜಿಲ್ಲೆ, ರಾಜ್ಯ, ಅಂತರ ರಾಜ್ಯಗಳಲ್ಲಿ, ಸಿಂಗಾಪುರದಲ್ಲೂ ಕಾರ್ಯಕ್ರಮ ನೀಡಿದ್ದಾರೆ. ತಂಬೂರಿ ಕಲೆಯನ್ನು ಮೆರೆಸಿದ್ದಾರೆ.

ಅವರಿಗೆ ಸರ್ಕಾರದಿಂದ ಅಂಬೇಡ್ಕರ್‌ ಪ್ರಶಸ್ತಿ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ಸಂಘ–ಸಂಸ್ಥೆಗಳು, ‘ಜನಪದ ಗಂಧರ್ವ’, ‍‘ಪ್ರಜಾಭೂಷಣ’, ‘ನಾಡಚೇತನ’, ‘ಕರುನಾಡ ಕಲಾಶ್ರೀ’, ‘ಜಾನಪದ ಜಂಗಮ’, ‘ಜಾನಪದ ನಾದಜಂಗಮ’ ಮೊದಲಾದ ಬಿರುದು ನೀಡಿ ಸನ್ಮಾನಿಸಿವೆ.

ಗುರುತಿಸಿದ್ದು ದೊಡ್ಡತನ:

‘ಊಟಕ್ಕಾಗಿ ಊರೂರಿಗೆ ತಂಬೂರಿ ಹಿಡಿದು ಹೊರಟವ ನಾನು. ಅದರ ಫಲವಾಗಿ ಪ್ರಶಸ್ತಿ ಸಿಕ್ಕಿದೆ. ನನ್ನ ತಂಬೂರಿ ಕಲೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಹುಡುಕಿ ಗೌರವ ಕೊಟ್ಟಿದ್ದು ಅವರ ದೊಡ್ಡತನ. ಜಾನಪದ ಕಲಾವಿದನಾಗಿ 43 ವರ್ಷದ ಸೇವೆ ಸಾರ್ಥಕ ಎನಿಸುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

‘ತಾಯಿ–ಅಣ್ಣ ನನ್ನನ್ನು ಬೆಳೆಸಿದವರು. ಜಿ.ಶಂ.ಪರಮಶಿವಯ್ಯ, ತಿಪ್ಪೇಸ್ವಾಮಿ, ಹನೂರು ಕೃಷ್ಣಮೂರ್ತಿ, ಡಾ.ಪಿ.ಕೆ.ರಾಜಶೇಖರ್, ಡಾ.ಹಿ.ಶಿ.ರಾಮಚಂದ್ರೇಗೌಡ, ಕಾಳೇಗೌಡ ನಾಗವಾರ, ಪ್ರೊ.ಗೋವಿಂದಯ್ಯ, ಉಗ್ರ ನರಸಿಂಹೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗಿದೆ’ ಎಂದು ಸ್ಮರಿಸುತ್ತಾರೆ ಅವರು.

ಅವರ ತಂಡದಲ್ಲಿ 8 ಮಂದಿ ಇದ್ದಾರೆ. ತಾವು ಬೆಳೆಯುವ ಜೊತೆಗೆ 7 ಮಂದಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದಾರೆ.

ನಿರರ್ಗಳವಾಗಿ...

ತಂಬೂರಿ ಕಥೆಗಳನ್ನು ನಿರರ್ಗಳವಾಗಿ ಹಾಡುವ ಕಲೆ ಗುರುರಾಜ್‌ ಅವರಿಗೆ ಸಿದ್ಧಿಸಿದೆ. ಮಂಟೇಸ್ವಾಮಿ, ಮಲೆಮಹದೇಶ್ವರ, ಸಿದ್ದಪ್ಪಾಜಿ, ಮೈದಾಳ ರಾಮ, ಚನ್ನಿಗರಾಮ, ಗಣಪತರಾಜ, ಕಲ್ಯಾಣ ಬಸವಣ್ಣ, ಮಡಿವಾಳ ಮಾಚಯ್ಯ, ನಿಂಗರಾಜಮ್ಮ, ಮೇಲುಕೋಟೆ ಚೆಲುವನಾರಾಯಣ... ಮೊದಲಾದವರ ಮೊದಲಾದ ಕಥೆಗಳನ್ನು ಕಟ್ಟಿಕೊಡುತ್ತಾರೆ.

ತಿಂಗಳಲ್ಲಿ 18ರಿಂದ 20 ರಾತ್ರಿ ಕಾರ್ಯಕ್ರಮ ನೀಡುತ್ತಿದ್ದಾರೆ. ರಾತ್ರಿ 10ಕ್ಕೆ ಶುರುವಾದೆ ಬೆಳಿಗ್ಗೆ 6ರವರೆಗೆ ನಡೆಯುತ್ತದೆ. ಶ್ರಾವಣ–ಕಾರ್ತೀಕದಲ್ಲಿ ತಿಂಗಳಿಡೀ ಕಾರ್ಯಕ್ರಮ ಇರುತ್ತದೆ.

ಜಿ.ಎಂ.ತಂದಾನಿ (ಗುರುರಾಜ್ ಮೈಸೂರು ತಂಬೂರಿ ದಾರ್ಶನಿಕ ನೀಲಗಾರ) ಸಾಂಸ್ಕೃತಿಕ ಟ್ರಸ್ಟ್ ಸ್ಥಾಪಿಸಿ, ಆಸಕ್ತರಿಗೆ ತರಬೇತಿ ನೀಡುತ್ತಿದ್ದಾರೆ. ಅವರ ಬಳಿ ಕಲಿತು ಈಗ 9 ಮಂದಿ ಹಾಡುವ ಕಾಯಕದಲ್ಲಿ ತೊಡಗಿದ್ದಾರೆ. ಅವರಲ್ಲಿ ಜಗದೀಶ್, ಬಸವರಾಜ್, ಸಿ.ಬಸವರಾಜ್‌, ಗೌರಿಶಂಕರ್‌ ಪ್ರಮುಖರು.

ತಂಬೂರಿ ಕಥೆಗಳ ಟೆಲಿ ಸಿನಿಮಾ

ಗುರುರಾಜ್, ಆಕಾಶವಾಣಿಯಲ್ಲಿ ‘ಟಾಪ್‌ 1’ ಗ್ರೇಡ್ ಕಲಾವಿದ. ಅಲ್ಲಿ, ಹಾಡುವವರಿಗೆ ನಡೆಸುವ ಪರೀಕ್ಷೆಗಳಲ್ಲಿ ತೀರ್ಪುಗಾರರೂ ಹೌದು. 100ಕ್ಕೂ ಹೆಚ್ಚು ಕ್ಯಾಸೆಟ್, ಸಿಡಿಗಳಲ್ಲಿ ಹಾಡಿ, ಅಭಿನಯಿಸಿ ಹೊರತಂದಿದ್ದಾರೆ. ಮಂಟೇಸ್ವಾಮಿ, ಮಲೆಮಹದೇಶ್ವರ, ಮಡಿವಾಳ ಮಾಚಯ್ಯ, ಬಿಳಿಗಿರಿ ರಂಗಸ್ವಾಮಿ, ಅಹಲ್ಯ ಗೌತಮ, ಕಬ್ಬಾಳಮ್ಮ, ಶರಣೆ ಸಂಕಮ್ಮ ಅವರ ಬಗ್ಗೆ ಟೆಲಿ ಸಿನಿಮಾ ಮಾಡಿ ‘ಕಲಾ ಆಡಿಯೊ–ವಿಡಿಯೊ ಕಂಪನಿ’ ಮೂಲಕ ಮಾಡಿದ್ದಾರೆ. ತಂಬೂರಿ ಕಥೆಗಳನ್ನು ಟೆಲಿ ಸಿನಿಮಾ ಮಾಡಿ, ನಿರ್ದೇಶಿಸಿ, ಅಭಿನಯಿಸಿ ಹೊರ ತಂದಿದ್ದಾರೆ.

ಸಾಧನೆ ಗುರುತಿಸಬೇಕು

ಕಲೆಯನ್ನು ವಯಸ್ಸು, ‍ಪ್ರದೇಶದಿಂದ ಅಳೆಯಬಾರದು. ವಯಸ್ಸಿನ ಬದಲಿಗೆ ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಬೇಕು

–ಮೈಸೂರು ಗುರುರಾಜ್, ತಂಬೂರಿ ಕಲಾವಿದ

ಅರ್ಜಿ ಸಲ್ಲಿಸಿದವರಲ್ಲ

ಗುರುರಾಜ್‌ ಅವರು ಪ್ರಶಸ್ತಿಗೆ ಶಿಫಾರಸು ಪತ್ರ ಕೊಟ್ಟವರಲ್ಲ; ಅರ್ಜಿ ನೀಡಿರಲಿಲ್ಲ. ಅಂಥವರನ್ನು ಸರ್ಕಾರವು ಗುರುತಿಸಿದೆ.

–ಡಾ.ಎಂ.ಡಿ.ಸುದರ್ಶನ್‌, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು