ಬುಧವಾರ, ಜುಲೈ 28, 2021
29 °C
ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು

ಮೈಸೂರು | ಮದುವೆಯಾದ ವಾರಕ್ಕೇ ಕೆಲಸಕ್ಕೆ ಹಾಜರ್‌

ಎನ್‌. ನವೀನ್‌ ಕುಮಾರ್‌ Updated:

ಅಕ್ಷರ ಗಾತ್ರ : | |

prajavani

ಮೈಸೂರು: ಕೋವಿಡ್‌–19 ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರ ಕಾರ್ಯದಷ್ಟೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಕೆಲಸ ಅನನ್ಯವಾದದ್ದು. ಜಿಲ್ಲಾಡಳಿತ, ತಾಲ್ಲೂಕು ಆಡಳಿತ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ, ತಳಮಟ್ಟದಲ್ಲಿ ಕೊರೊನಾ ಸೋಂಕನ್ನು ತಡೆಗಟ್ಟುತ್ತಿರುವ ಇವರ ಕಾರ್ಯ ಗಮನಾರ್ಹ.

ಮನೆಯನ್ನು ಬಿಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ವಾಸ್ತವ್ಯ ಹೂಡಿ, ಸೋಂಕು ನಿವಾರಣೆ ಹಾಗೂ ಜನಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡ ಅನೇಕ ಪಿಡಿಒಗಳು ಇದ್ದಾರೆ. ವಾಹನ ಸೌಕರ್ಯ, ಊಟ, ವಸತಿ ಸಮಸ್ಯೆಯ ನಡುವೆಯೂ ಪಿಡಿಒಗಳು ಬದ್ಧತೆಯಿಂದ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಮದುವೆಯಾಗಿ ಒಂದು ವಾರ ಕಳೆಯುವ ಮುನ್ನವೇ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಇಳಿದ ಮಹಿಳಾ ಪಿಡಿಒ ಕೂಡ ನಮ್ಮ ಮುಂದಿದ್ದಾರೆ.

ಗ್ರಾಮಗಳಲ್ಲಿ ಕೋವಿಡ್‌ ಬಾಧಿತ ಅಥವಾ ಕೊರೊನಾ ಶಂಕಿತ ವ್ಯಕ್ತಿ ಕಂಡು ಬಂದರೆ, ಆತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡುವುದು, ಅವರನ್ನು ಹೋಂ ಕ್ವಾರಂಟೈನ್‌ ಮಾಡುವುದು, ಇಡೀ ಬೀದಿಯನ್ನು ಸೀಲ್‌ಡೌನ್‌ ಮಾಡುವುದು, ದಿನಸಿ ವಸ್ತುಗಳನ್ನು ಪೂರೈಸುವುದು ಸೇರಿದಂತೆ ಅನೇಕ ಕೆಲಸಗಳನ್ನು ಪಿಡಿಒಗಳು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಸಹಕಾರದೊಂದಿಗೆ ಮಾಡುತ್ತಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ ರಚಿಸಿ, ಅಗತ್ಯ ಕ್ರಮ ಕೈಗೊಳ್ಳುತ್ತಾರೆ.

ಕೆಲಸಕ್ಕೆ ಸೈ ಎಂದ ನವವಿವಾಹಿತೆ: ನಂಜನಗೂಡು ತಾಲ್ಲೂಕಿನ ತಾಂಡವಪುರ ಗ್ರಾಮ ಪಂಚಾಯಿತಿಯ ಪಿಡಿಒ ಜಿ.ಅಕ್ಷತಾ ಭಟ್‌, ಮಾರ್ಚ್‌ 2ನೇ ವಾರದಲ್ಲಿ ಮದುವೆಯಾದರು. ಪತಿ ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌. ಮಾರ್ಚ್‌ 24ರಂದು ಇಡೀ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ಅಕ್ಷತಾ ಅವರು ಅಂದು ರಾತ್ರಿ 11 ಗಂಟೆಗೆ ಮೈಸೂರಿಗೆ ಬರುತ್ತಾರೆ. ಅಂದಿನಿಂದ ಕೊರೊನಾ ಸೈನಿಕರಾಗಿ ಕೆಲಸ ಮಾಡುತ್ತಾರೆ.

‘ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಬಿರ್ಲಮಕ್ಕಿ ನಮ್ಮ ಊರು. ಮದುವೆಗಾಗಿ ಮೂರು ವಾರ ರಜೆ ಪಡೆದಿದ್ದೆ. ಒಂದು ವಾರ ಕಳೆಯುತ್ತಿದ್ದಂತೆ ಲಾಕ್‌ಡೌನ್‌ ಘೋಷಣೆಯಾಯಿತು. ಇದೇ ವೇಳೆಗೆ, ಜ್ಯುಬಿಲೆಂಟ್‌ನಲ್ಲಿ ಕೆಲಸ ಮಾಡುವ ತಾಂಡವಪುರ ಗ್ರಾ.ಪಂ ವ್ಯಾಪ್ತಿಯ ವ್ಯಕ್ತಿಯೊಬ್ಬರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಪಿಡಿಒ ಆಗಿ ನಾನೇ ಇಲ್ಲದಿದ್ದರೆ ಹೇಗೆ? ನನ್ನ ಉಪಸ್ಥಿತಿ ಇರಬೇಕು ಎಂಬ ಕಾರಣಕ್ಕೆ ಕೆಲಸಕ್ಕೆ ಹಾಜರಾದೆ’ ಎನ್ನುತ್ತಾರೆ ಅಕ್ಷತಾ.

‘ಮೈಸೂರು ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ, ಮೇ 13ರಂದು ಬೆಂಗಳೂರಿಗೆ ಹೋಗಿ ಕುಟುಂಬದ ಸದಸ್ಯರನ್ನು ಭೇಟಿಯಾದೆ’ ಎಂದು ವಿವರಿಸಿದರು.

ಸ್ವತಃ ಚಾಲಕನಾದ ಪಿಡಿಒ

ನಂಜನಗೂಡು ತಾಲ್ಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿಯು ಕೇರಳ ಗಡಿಭಾಗದಲ್ಲಿದೆ. ಕೇರಳದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಾಗ ಗಡಿಯನ್ನು ಬಂದ್ ಮಾಡಲಾಗಿತ್ತು. ಈ ವೇಳೆ, ಅಲ್ಲಿಂದ ಕರ್ನಾಟಕದೊಳಗೆ ನುಸುಳುವ ಜನರ ಮೇಲೆ ನಿಗಾ ವಹಿಸುವುದು, ತುರ್ತು ಸಂದರ್ಭಗಳಲ್ಲಿ ಜನರಿಗೆ ಸೇವೆ ಮಾಡುವ ಕಾರ್ಯದಲ್ಲಿ ಪಿಡಿಒ ಮಲ್ಕುಂಡಿ ಮಹದೇವಸ್ವಾಮಿ ತೊಡಗಿಸಿಕೊಂಡಿದ್ದರು.

‘ನನ್ನ ಮನೆ ಇರುವುದು ಮೈಸೂರಿನಲ್ಲಿ. ಆದರೆ, 34 ದಿನಗಳವರೆಗೆ ಮನೆಗೇ ಹೋಗಿರಲಿಲ್ಲ. ಕಚೇರಿಯಲ್ಲೇ ವಾಸ್ತವ್ಯ ಹೂಡಿದ್ದೆ. ಕಾಡಂಚಿನ ಗ್ರಾಮಗಳಾಗಿದ್ದರಿಂದ ತುರ್ತು ಸಂದರ್ಭಗಳಲ್ಲಿ ರೋಗಿಗಳು, ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯಲು ಕಷ್ಟವಾಗುತ್ತಿತ್ತು. ಕೃಷ್ಣಮೂರ್ತಿ, ಉದಯರವಿ ಎಂಬುವರು ಕಾರುಗಳನ್ನು ನೀಡಿದರು. ನನ್ನ ಕಾರು ಸೇರಿ 3 ಕಾರುಗಳನ್ನು ಆಂಬುಲೆನ್ಸ್‌ಗಳಾಗಿ ಪರಿವರ್ತಿಸಿದೆವು. ನಾನೇ ಚಾಲಕನಾಗಿ ಕೆಲಸ ಮಾಡಿದೆ’ ಎನ್ನುತ್ತಾರೆ ಮಹದೇವಸ್ವಾಮಿ.

ಅಮ್ಮನಿಂದ ದೂರವಿದ್ದ ಮಗ

ನಂಜನಗೂಡು ತಾಲ್ಲೂಕಿನ ದೇಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಜ್ಯುಬಿಲೆಂಟ್‌ ಔಷಧ ಕಾರ್ಖಾನೆ ಬರುತ್ತದೆ. ಕೊರೊನಾ ಹಾಟ್‌ಸ್ಪಾಟ್‌ ಆಗಿದ್ದ ಈ ಕಾರ್ಖಾನೆಯ ರೋಗಿಗಳು ವಿವಿಧ ಗ್ರಾಮಗಳಲ್ಲಿ ವಾಸವಾಗಿದ್ದರು. ಸೋಂಕು ದೃಢಪಡುತ್ತಿದ್ದಂತೆ 1,800 ಮಂದಿಯನ್ನು ಹೋಂ ಕ್ವಾರಂಟೈನ್‌ ಮಾಡಲಾಗಿತ್ತು. ಈ ಪೈಕಿ 220 ಮಂದಿ ದೇಬೂರು ಗ್ರಾ.ಪಂ.ಗೆ ಸಂಬಂಧಿಸಿದವರು. ಸೋಂಕಿತರು, ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡುವುದು ದೊಡ್ಡ ಸವಾಲಾಗಿತ್ತು ಎನ್ನುವ ಪಿಡಿಒ ಬಿ.ಕೆ.ಮನು, ಅವರಿಗೆ ಆ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸಿದ ಹೆಮ್ಮೆ ಇದೆ.

‘ಅಪ್ಪ 2019ರ ಆಗಸ್ಟ್‌ನಲ್ಲಿ ನಿಧನರಾದರು. ಅಮ್ಮ ಮೈಸೂರಿನ ಕುವೆಂಪುನಗರದ ಮನೆಯಲ್ಲಿ ಒಬ್ಬರೇ ಇದ್ದರು. ನಾನು ಮಹಡಿಯ ಮೇಲಿನ ಕೊಠಡಿಯಲ್ಲಿ ಉಳಿಯುತ್ತಿದ್ದೆ. ಅಮ್ಮ ಊಟ ತಂದು ಮೆಟ್ಟಿಲ ಮೇಲೆ ಇಡುತ್ತಿದ್ದಳು. ಆಕೆಯೊಂದಿಗೆ ಸರಿಯಾಗಿ ಮಾತನಾಡಲೂ ಸಾಧ್ಯವಾಗಿರಲಿಲ್ಲ. ಒಂದೂವರೆ ತಿಂಗಳು ಸ್ವಯಂ ಕ್ವಾರಂಟೈನ್‌ನಲ್ಲಿದ್ದೆ’ ಎಂದು ಸ್ಮರಿಸುತ್ತಾರೆ ಬಿ.ಕೆ.ಮನು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು