ಸೋಮವಾರ, ಸೆಪ್ಟೆಂಬರ್ 26, 2022
22 °C
ಅಧಿಕಾರಿಗಳದ್ದೇ ದರ್ಬಾರ್, ಮಾಹಿತಿಗೆ ಪ್ರವಾಸಿಗರ ಪರದಾಟ

ದಸರಾ: ನಡೆಯದ ನೇಮಕ, ಸಿದ್ಧವಾಗದ ಜಾಲತಾಣ!

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಅಧಿಕಾರಿಗಳದ್ದೇ ‘ದರ್ಬಾರ್‌’ ನಡೆಯುತ್ತಿದೆ. ಅಧಿಕಾರೇತರ ಸಮಿತಿಯನ್ನು ರಚಿಸಿ, ಸಾರ್ವಜನಿಕರ ಸಹಭಾಗಿತ್ವ ಪಡೆದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ.

ಮಹೋತ್ಸವಕ್ಕೆ ಸೆ.26ರಂದು ಚಾಲನೆ ದೊರೆಯಲಿದೆ. ಹೀಗೆ ನೋಡಿದರೆ, ಬಹಳ ದಿನಗಳೇನೂ ಉಳಿದಿಲ್ಲ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲ ಕಾರ್ಯಕ್ರಮಗಳ ಪಟ್ಟಿಗಳೂ ಸಿದ್ಧವಾಗಬೇಕು. ಹೊರ ಜಿಲ್ಲೆ, ರಾಜ್ಯ ಮತ್ತು ದೇಶಗಳ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಚಟುವಟಿಕೆಗಳನ್ನು ಕೈಗೊಳ್ಳುವಾಗ ಎಲ್ಲರನ್ನೂ ಒಳಗೊಳ್ಳುವ ಸಮಿತಿಗಳನ್ನು ರಚಿಸುವ ಕಾರ್ಯವಾಗಿಲ್ಲ.

ಮಹೋತ್ಸವದ ಉಪ ಸಮಿತಿಗಳಿಗೆ ಉಪ‌ ವಿಶೇಷಾಧಿಕಾರಿ,‌ ಕಾರ್ಯಾಧ್ಯಕ್ಷರು ಹಾಗೂ‌ ಕಾರ್ಯದರ್ಶಿಗಳನ್ನು ಆ.6ರಂದು ನೇಮಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಅವುಗಳಿಗೆ ಅಧಿಕಾರೇತರರನ್ನು ತ್ವರಿತವಾಗಿ ನೇಮಿಸಬೇಕು, ಈ ಮೂಲಕ ಅಧಿಕಾರಿಗಳ ದರ್ಬಾರ್‌ಗೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಜನಪ್ರತಿನಿಧಿಗಳಿಂದ ಕೇಳಿಬಂದಿತ್ತು. ಈ ಬಾರಿಯೂ ನೇಮಕಾತಿಯಲ್ಲಿ ವಿಳಂಬ ಆಗುತ್ತಿರುವುದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ.

ಯಾವ್ಯಾವ ಸಮಿತಿಗಳು?:

ಸ್ವಾಗತ, ಆಮಂತ್ರಣ ಮತ್ತು ಸ್ಥಳಾವಕಾಶ, ಮೆರವಣಿಗೆ ಮತ್ತು ಪಂಜಿನ ಕವಾಯತು, ಸ್ತಬ್ಧಚಿತ್ರ, ರೈತ (ಗ್ರಾಮೀಣ ದಸರಾ), ಕ್ರೀಡೆ, ಸಾಂಸ್ಕೃತಿಕ ದಸರಾ, ಲಲಿತಕಲೆ, ದೀಪಾಲಂಕಾರ, ಕವಿಗೋಷ್ಠಿ, ಯೋಗ ದಸರಾ, ಯುವ ಸಂಭ್ರಮ/ಯುವ ದಸರಾ, ಮಹಿಳಾ, ಮಕ್ಕಳ ದಸರಾ, ಆಹಾರ ಮೇಳ, ಸ್ವಚ್ಛತೆ ಮತ್ತು ವ್ಯವಸ್ಥೆ, ಚಲನಚಿತ್ರ, ಕುಸ್ತಿ ಉಪಸಮಿತಿಗಳನ್ನು ರಚಿಸಲಾಗಿದೆ. ಅವುಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಬಾರಿ ಕೈಗಾರಿಕಾ ದಸರಾ ಹೊಸ ಸೇರ್ಪಡೆಯಾಗಿದೆ.

ಕಳೆದ ಎರಡು ವರ್ಷಗಳು ಕೋವಿಡ್ ಹಿನ್ನೆಲೆಯಲ್ಲಿ ಉತ್ಸವವನ್ನು ಸರಳವಾಗಿ ಹಾಗೂ ಜಂಬೂಸವಾರಿಯನ್ನು ಮೈಸೂರು ಅರಮನೆ ಆವರಣಕ್ಕೆ ಸೀಮಿತಗೊಳಿಸಿ ನಡೆಸಲಾಗಿತ್ತು. ಆದರೆ, ಈ ಬಾರಿ ಅದ್ಧೂರಿ ಹಾಗೂ ವಿಜೃಂಭಣೆಯಿಂದ ನಡೆಸುತ್ತಿರುವುದರಿಂದ ಅಧಿಕಾರೇತರ ಸಮಿತಿಗಳಿಗೆ ಅಧ್ಯಕ್ಷರು, ಸದಸ್ಯರಾಗಲು ಬಹಳ ಬೇಡಿಕೆ ಬಂದಿದೆ. ವಿಶೇಷವಾಗಿ, ಆಡಳಿತಾರೂಢ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಹೆಚ್ಚಿನ ಲಾಬಿ ನಡೆಸುತ್ತಿದ್ದಾರೆ. ಚುನಾವಣಾ ವರ್ಷವಾದ್ದರಿಂದ ಬಿಜೆಪಿಯವರಿಗೇ ಹೆಚ್ಚಿನ ಮಣೆ ಹಾಕುವ ಸಾಧ್ಯತೆಯೂ ಇದೆ.

ಸಮಿತಿಗಳಿಗೆ ಆಯಾ ಕ್ಷೇತ್ರದ ಪರಿಣತರು, ಕಾಂಗ್ರೆಸ್ ಹಾಗೂ ಜೆಡಿಎಸ್‌ ಮುಖಂಡರನ್ನೂ ಒಳಗೊಳಿಸಿಕೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಬೇಗ ನಡೆದರೆ ಅನುಕೂಲ:

‘ಈ ಬಾರಿಯಾದರೂ ನೇಮಕ ಪ್ರಕ್ರಿಯೆಯನ್ನು ಬೇಗ ಮುಗಿಸಿದರೆ ಅನುಕೂಲವಾಗುತ್ತದೆ. ಯಾವುದೇ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ಮುನ್ನ ಜನರ ಅಭಿ‍ಪ್ರಾಯಗಳನ್ನು ನಾವು ಮಂಡಿಸುವುದಕ್ಕೆ ಸಹಕಾರಿಯಾಗುತ್ತದೆ. ಇಲ್ಲದಿದ್ದರೆ ಹೆಸರಿಗಷ್ಟೆ ಅಧಿಕಾರಿಗಳು, ಸದಸ್ಯರು ಎಂದುಕೊಳ್ಳಬೇಕಾಗುತ್ತದೆ’ ಎಂದು ಬಿಜೆಪಿ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

ಚರ್ಚಿಸಿ ನಿರ್ಧಾರ

   ದಸರಾ ಉಪ ಸಮಿತಿಗಳಿಗೆ ಅಧಿಕಾರೇತರ ಸದಸ್ಯರನ್ನು ನೇಮಕದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮುಂದಿನ ಸಭೆಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.

– ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

ಸಚಿವರನ್ನು ಕೋರಿದ್ದೇನೆ

   ನಾಡಹಬ್ಬದಲ್ಲಿ ಎಲ್ಲರನ್ನೂ ಒಳಗೊಳಿಸಿಕೊಳ್ಳಲು ಬಿಜೆಪಿಯೊಂದಿಗೆ ಇತರ ಪಕ್ಷದವರನ್ನೂ ಸಮಿತಿಗಳಿಗೆ ನೇಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಕೋರಿದ್ದೇನೆ.

– ಸಾ.ರಾ.ಮಹೇಶ್, ಜೆಡಿಎಸ್ ಶಾಸಕ

ಸೆಳೆಯಬಹುದು

   ದಸರಾದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಈಗಿನಿಂದಲೇ ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಬೇಕು. ಆಗ, ಪ್ರವಾಸಿಗರನ್ನು ಸೆಳೆಯಬಹುದು.

–ಬಿ.ಎಸ್.ಪ್ರಶಾಂತ್, ಅಧ್ಯಕ್ಷ, ಮೈಸೂರು ಸಂಘ–ಸಂಸ್ಥೆಗಳ ಒಕ್ಕೂಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು