ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕೋವಿಡ್‌ಗೆ ಜಿಲ್ಲೆಯಲ್ಲಿ 4ನೇ ಸಾವು

ಮತ್ತೆ 17 ಮಂದಿಗೆ ಸೋಂಕು–ಏರುತ್ತಲೇ ಇದೆ ಪ್ರಕರಣ
Last Updated 3 ಜುಲೈ 2020, 5:34 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮತ್ತೊಬ್ಬರು ಮೃತಪಟ್ಟಿದ್ದು, ಗುರುವಾರ 17 ಮಂದಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ.‌

ತೀವ್ರ ಉಸಿರಾಟ ಸಮಸ್ಯೆಯಿಂದ (ಎಸ್‌ಎಆರ್‌ಐ) ಬಳಲುತ್ತಿದ್ದ 60 ವರ್ಷದ ವೃದ್ಧೆ ಕೆ.ಆರ್‌.ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಲ್ಲಿ ಸೋಂಕು ಇರುವುದು ಗೊತ್ತಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ತಿಳಿಸಿದ್ದಾರೆ.

ಇವರು ತಿ.ನರಸೀಪುರ ತಾಲ್ಲೂಕಿನವರು ಎಂಬುದು ತಿಳಿದುಬಂದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 4ಕ್ಕೇರಿದೆ. ಇದುವರೆಗೆ ದಾಖಲಾದ ಪ‍್ರಕರಣಗಳ ಸಂಖ್ಯೆ 338ಕ್ಕೇರಿದ್ದು, ಗುರುವಾರ 9 ಮಂದಿ ಗುಣಮುಖರಾಗಿದ್ದಾರೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 8 ಮಂದಿಗೆ ಕೋವಿಡ್‌ ತಟ್ಟಿದೆ. ಇಬ್ಬರು ಪೊಲೀಸ್‌, ಒಬ್ಬ ಗರ್ಭಿಣಿ, ಶೀತ ಜ್ವರ ಮಾದರಿಯ ಅನಾರೋಗ್ಯ ಲಕ್ಷಣದಿಂದ (ಐಎಲ್‌ಐ) ಬಳಲುತ್ತಿರುವ ಇಬ್ಬರು, ಹೊರರಾಜ್ಯದಿಂದ ಬಂದಿರುವ ಮೂವರು ಹಾಗೂ ಬೇರೆ ಜಿಲ್ಲೆಯಿಂದ ಬಂದಿರುವ ಒಬ್ಬರಲ್ಲಿ ಕೋವಿಡ್‌ ಇರುವುದು ಪತ್ತೆಯಾಗಿದೆ.

ಮೈಸೂರು ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಹಾಗೂ ಜಯಪುರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಾಲಿಗ್ರಾಮದ ಪಟ್ಟಣದ ಯುವಕನಿಗೆ ಸೋಂಕು ಹರಡಿದೆ.

ಜಿಲ್ಲೆಯಲ್ಲಿ 3,003 ಮಂದಿಯನ್ನು 14 ದಿನಗಳ ಹೋಂ ಕ್ವಾರಂಟೈನ್‌ ಹಾಗೂ 154 ಮಂದಿಯನ್ನು 7 ದಿನಗಳ ಫೆಸಿಲಿಟಿ ಕ್ವಾರಂಟೈನ್‌ ಮಾಡಲಾಗಿದೆ.

ಸೀಲ್‌ಡೌನ್‌: ಹುಣಸೂರಿನ ದಲ್ಲಾಳುಕೊಪ್ಪಲು, ಚಾಮರಾಜ ಮೊಹಲ್ಲಾದ 6ನೇ ಕ್ರಾಸ್‌, ಸಾಯಿಬಾಬ ದೇಗುಲದ ಬಳಿ (ತ್ಯಾಗರಾಜ ರಸ್ತೆ), ಕಾವೇರಿ ವೃತ್ತ, ಹೂಟಗಳ್ಳಿಯ ವಾಟರ್‌ ಟ್ಯಾಂಕ್‌ ರಸ್ತೆ, ಲಲಿತಮಹಲ್‌ ನಗರದ ಬ್ರಿಗೇಡ್ ಸಾಲಿಟರಿ ಅಪಾರ್ಟ್‌ಮೆಂಟ್‌ ಬಳಿ, ತಿ.ನರಸೀಪುರದ ಕೇತುಪುರದ ಕೆಲ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಲಾಗಿದೆ.

ಉಲ್ಲಂಘನೆ: ವಿಜಯನಗರದಲ್ಲಿರುವ ಆಧಾರ್‌ ಕೇಂದ್ರದ ಬಳಿಯ ರಸ್ತೆ ಸೀಲ್‌ಡೌನ್‌ ಆಗಿದ್ದರೂ ಕಚೇರಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ರಸ್ತೆಗೆ ಬ್ಯಾರಿಕೇಡ್‌ ಅಳವಡಿಸಿದ್ದರೂ, ಅದನ್ನು ಲೆಕ್ಕಿಸದೆ ಜನರು ಈ ಕೇಂದ್ರಕ್ಕೆ ಬರುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಂಕಿ ಅಂಶ

338; ಜಿಲ್ಲೆಯಲ್ಲಿ ಒಟ್ಟು ಕೋವಿಡ್‌ ಪ್ರಕರಣ

200; ಇದುವರೆಗೆ ಗುಣಮುಖರಾದವರು

134; ಸಕ್ರಿಯ ಪ್ರಕರಣಗಳು

7; ಗುರುವಾರ ಘೋಷಿತ ಕಂಟೈನ್‌ಮೆಂಟ್‌ ವಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT