ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೆ ಪಾಲಿಕೆ ತಿಳಿವಳಿಕೆ ಪತ್ರ!

ಪೊಲೀಸರಿಂದಲೇ ಕಾನೂನು ಉಲ್ಲಂಘನೆ?
Last Updated 5 ಏಪ್ರಿಲ್ 2019, 6:45 IST
ಅಕ್ಷರ ಗಾತ್ರ

ಮೈಸೂರು: ಕಾನೂನು ಪಾಲಿಸುವಂತೆ ಬುದ್ಧಿ ಹೇಳುವ ಪೊಲೀಸರೇ ಪಾಲಿಕೆಯಿಂದ ಬುದ್ಧಿ ಹೇಳಿಸಿಕೊಂಡಿದ್ದಾರೆ. ಕಾನೂನು ಪರಿಪಾಲಿಸುವಂತೆ ಪಾಲಿಕೆಯು ಪೊಲೀಸ್ ಇಲಾಖೆಗೆ ಕಳೆದ ವಾರವಷ್ಟೇ ತಿಳಿವಳಿಕೆ ಪತ್ರ ಬರೆದಿದೆ.

ಏನಿದು ಘಟನೆ?:

ಪೊಲೀಸ್ ಕಮಿಷನರ್‌ ಕಚೇರಿಯ ಹೊಸ ಕಟ್ಟಡವನ್ನು ನಜರ್‌ಬಾದ್‌ನಲ್ಲಿ ವೈಭವೋಪೇತವಾಗಿ ಕಟ್ಟಲಾಗುತ್ತಿದೆ. ಇದಕ್ಕೆ 2014–15ರಲ್ಲಿ ಪಡೆದ ಕಟ್ಟಡ ರಹದಾರಿ ಅವಧಿ 2018ರ ಡಿಸೆಂಬರ್ 6ಕ್ಕೆ ಮುಕ್ತಾಯವಾಗಿದೆ. ಆದರೆ, ಇದರ ನವೀಕರಣಕ್ಕೆ ಪೊಲೀಸ್ ಇಲಾಖೆ ಯತ್ನಿಸಿಲ್ಲ. ನವೀಕರಣ ಪಡೆಯುವವರೆಗೂ ಕಾಮಗಾರಿ ನಿಲ್ಲಿಸುವಂತೆ ಪಾಲಿಕೆ ತನ್ನ ತಿಳಿವಳಿಕೆ ಪತ್ರದಲ್ಲಿ ಸೂಚಿಸಿದೆ.

ಈ ಸಂಬಂಧ ಎಂ.ಆರ್.ಅಶೋಕ್‌ಕುಮಾರ್ ಎಂಬುವವರು ಜನವರಿ 8 ಮತ್ತು ಫೆಬ್ರುವರಿ 18ರಂದು ಪಾಲಿಕೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪಾಲಿಕೆಯ ವಲಯ ಕಚೇರಿ 1ರ ಆಯುಕ್ತ ಕುಬೇರಪ್ಪ ಅವರು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಅವರಿಗೆ ಮಾರ್ಚ್ 26ರಂದು ತಿಳಿವಳಿಕೆ ಪತ್ರ ಬರೆದಿದ್ದಾರೆ.

ಕಟ್ಟಡ ರಹದಾರಿ ಮತ್ತು ಮಂಜೂರಾದ ನಕ್ಷೆಯನ್ನು ನವೀಕರಿಸದೇ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ. ಪಾಲಿಕೆಯ ನಗರ ಯೋಜನಾ ಶಾಖೆಯಿಂದ ನಕ್ಷೆಯನ್ನು ಮಂಜೂರು ಮಾಡಿಸಿಕೊಂಡು ಕೆಲಸ ಮಾಡಿಸಿರುವುದು ಸರಿ. ಆದರೆ, ಮಂಜೂರಾಗಿರುವ ಕಟ್ಟಡ ರಹದಾರಿ ಅವಧಿ 2018ರ ಡಿಸೆಂಬರ್ 6ಕ್ಕೆ ಮುಗಿದಿದ್ದರೂ ಈವರೆಗೆ ನವೀಕರಣ ಮಾಡಿಸಿಕೊಂಡಿಲ್ಲ. ನವೀಕರಣವಾಗುವವರೆಗೂ ಕಾಮಗಾರಿ ನಿಲ್ಲಿಸಬೇಕು. ಒಂದು ವೇಳೆ ನಿಯಮ ಪಾಲನೆ ಮಾಡದೇ ಇದ್ದರೆ ಕೆಎಂಸಿ ಕಾಯ್ದೆ 1976ರ ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾಲಿಕೆಯ ವಲಯ ಕಚೇರಿ 1ರ ವಲಯ ಆಯುಕ್ತ ಕುಬೇರಪ್ಪ, ‘ಕಾನೂನು ಎಂಬುದು ಕಮಿಷನರ್‌ಗೂ ಒಂದೇ, ಜನಸಾಮಾನ್ಯರಿಗೂ ಒಂದೇ. ಸಾರ್ವಜನಿಕರೊಬ್ಬರು ನೀಡಿದ ದೂರನ್ನು ಪರಿಗಣಿಸಿ ಪರಿವೀಕ್ಷಣೆ ಮಾಡಿದಾಗ ನವೀಕರಣ ಆಗದೇ ಇರುವುದು ದೃಢಪಟ್ಟಿದೆ. ಹಾಗಾಗಿ, ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ದೂರುದಾರ ಎಂ.ಆರ್.ಅಶೋಕಕುಮಾರ್, ‘ಕೆಎಂಸಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪಾಲಿಕೆ ಪತ್ರ ಬರೆದ ಮೇಲೂ ಕಾಮಗಾರಿ ನಡೆಯುತ್ತಿದೆ. ಮಾರ್ಚ್ 4ರಂದು ಕಾಮಗಾರಿ ನಡೆಯುತ್ತಿರುವುದು ಕಂಡು ಬಂದಿದೆ’ ಎಂದು ಅವರು ದೂರಿದ್ದಾರೆ.

ನವೀಕರಣ ಅರ್ಜಿ ಸಲ್ಲಿಸಲಾಗಿದೆ– ಇಲಾಖೆ

ವಿವಾದ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು, ಕಟ್ಟಡ ರಹದಾರಿ ಮತ್ತು ಮಂಜೂರಾದ ನಕ್ಷೆಯ ನವೀಕರಣಕ್ಕೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ಸಲ್ಲಿಕೆಯಾದ 20 ದಿನಗಳ ನಂತರ ವಲಯ ಕಚೇರಿಯಿಂದ ನಮಗೆ ನೋಟಿಸ್ ಬರುತ್ತದೆ. ವಲಯ ಆಯುಕ್ತರಿಗೆ ಈ ಕುರಿತು ಮಾಹಿತಿ ಇಲ್ಲ. ಸದ್ಯ, ಪಾಲಿಕೆ ಪರವಾನಗಿ ನವೀಕರಿಸಬೇಕಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT