ಮೈಸೂರು: ‘ದಿನ ಬಳಕೆಯ ಅವಶ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಬಡವರು–ಮಧ್ಯಮ ವರ್ಗದವರು ಬದುಕು ನಡೆಸೋದೇ ದುರ್ಬರವಾಗಿದೆ. ದೇಶ ದಿವಾಳಿಯತ್ತ ಸಾಗಿದೆ’ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಕೆ.ಟಿ.ಚೆಲುವೇಗೌಡ ಸೋಮವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
‘ಬ್ರಿಟಿಷರ ಆಳ್ವಿಕೆಯೇ ಎಷ್ಟೋ ಚೆನ್ನಾಗಿತ್ತು ಎಂಬ ಭಾವನೆ ಜನರದ್ದಾಗಿದೆ. ಬ್ರಿಟಿಷರಿಗಿಂತ ಬಿಜೆಪಿಯವರು ದೇಶವನ್ನು ಹೆಚ್ಚು ಹಾಳು ಮಾಡಿದ್ದಾರೆ. ಮಾತಿನಿಂದಲೇ ಜನರನ್ನು ಮರಳು ಮಾಡಿ; ಬದುಕದಂತೆ ಮಾಡಿದ್ದಾರೆ’ ಎಂದು ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಕಿಡಿಕಾರಿದರು.
‘ಬಿಜೆಪಿ ತೈಲ ಕಂಪನಿಗಳಿಗೆ ದೇಶವನ್ನು ಅಡ ಇಟ್ಟಿದೆ. ಏಳು ವರ್ಷದ ಹಿಂದೆ ಹೇಳಿದಂತೆ ಪ್ರತಿಯೊಬ್ಬರ ಖಾತೆಗೆ ಕಪ್ಪು ಹಣ ಜಮೆ ಮಾಡಲಿಲ್ಲ. ಯುವಕರಿಗೆ ಉದ್ಯೋಗವನ್ನು ಕೊಡಲಿಲ್ಲ. ಬೆಲೆ ಏರಿಕೆಯ ಬಗ್ಗೆ ಧ್ವನಿ ಎತ್ತಿ, ಅಧಿಕಾರಕ್ಕೆ ಬಂದ ಬಿಜೆಪಿ, ಇದೀಗ ತನ್ನ ಆಡಳಿತದ ಅವಧಿಯಲ್ಲಿ ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾಗಿದೆ’ ಎಂದು ಚೆಲುವೇಗೌಡ ಹರಿಹಾಯ್ದರು.
‘ಕೋವಿಡ್ ಹೆಸರಿನಲ್ಲಿ ದೇಶವನ್ನು ಲೂಟಿ ಹೊಡೆಯಲಾಗಿದೆ. ದೇಶ ಪತನಗೊಳ್ಳುತ್ತಿದೆ. ಈರುಳ್ಳಿ ಬೆಲೆ ಹೆಚ್ಚಾಗಿದ್ದಕ್ಕೆ ಎಷ್ಟು ಸರ್ಕಾರ ಉರುಳಿವೆ ಎಂಬುದು ಗೊತ್ತಿರಲಿ. ಜನರನ್ನು ಇನ್ನೂ ಎಷ್ಟು ದಿನ ಕುರಿಗಳನ್ನಾಗಿಸುತ್ತೀರಿ’ ಎಂದು ಜೆಡಿಎಸ್ ಅಧ್ಯಕ್ಷರು ವಾಗ್ದಾಳಿ ನಡೆಸಿದರು.
ವೋಟಿಗಾಗಿ ಜಾತಿ ರಾಜಕಾರಣ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೂತರೇ ಎದ್ದೇಳಲಾಗಲ್ಲ. ಎದ್ದರೇ ಕೂರಲಾಗಲ್ಲ. ಜನ ಸತ್ತರೂ ಚಿಂತೆ ಇಲ್ಲ ಇವರಿಗೆ. ಲಿಂಗಾಯತರ ವೋಟು ಬೇಕಿವೆಯಷ್ಟೇ. ಅದಕ್ಕಾಗಿ ಸಿಎಂ ಬದಲಾಯಿಸುತ್ತಿಲ್ಲ’ ಎಂದು ಚೆಲುವೇಗೌಡ ಕಿಡಿಕಾರಿದರು.
‘ವಿರೋಧ ಪಕ್ಷ ಕಾಂಗ್ರೆಸ್ ಸರಿಯಿಲ್ಲ. ತನ್ನ ಜವಾಬ್ದಾರಿಯನ್ನೇ ನಿಭಾಯಿಸದಾಗಿದೆ. ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತದಾಗಿದೆ. ಇದೀಗ ಸೈಕಲ್ ಜಾಥಾ ಅಂತ ಮುಖಂಡರು ಬೀದಿಗಿಳಿದಿದ್ದಾರೆ. ಅದೂ ಜನರ ಪರವಾಗಲ್ಲ. ತಾನೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳೋದಕ್ಕೆ. ಮುಖ್ಯಮಂತ್ರಿಯಾಗೋದಕ್ಕೂ ಮುನ್ನ ಗೆಲ್ಲಬೇಕಲ್ಲವೇ?’ ಎಂದು ಅವರು ಕಾಂಗ್ರೆಸ್ ವಿರುದ್ಧವೂ ಚಾಟಿ ಬೀಸಿದರು.
‘ಕೇಂದ್ರ ಸರ್ಕಾರ ತೈಲ ಬೆಲೆ ಸೇರಿದಂತೆ, ಅವಶ್ಯ ವಸ್ತುಗಳ ಬೆಲೆ ಇಳಿಸಿ, ಜನರನ್ನು ಉಳಿಸದಿದ್ದರೆ, ರಾಜ್ಯದಾದ್ಯಂತ ಜೆಡಿಎಸ್ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಅಧ್ಯಕ್ಷರು ಗುಡುಗಿದರು.
ಮಾಜಿ ಮೇಯರ್ ಆರ್.ಲಿಂಗಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಎಸ್.ಪ್ರೇಮಾ ಮಾತನಾಡಿದರು. ಮಾಜಿ ಉಪ ಮೇಯರ್ ವಿ.ಶೈಲೇಂದ್ರ, ಪಾಲಿಕೆ ಸದಸ್ಯ ಎಂ.ಶಿವಣ್ಣ, ಪಿ.ಮಂಜುನಾಥ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.