ಬುಧವಾರ, ಅಕ್ಟೋಬರ್ 21, 2020
25 °C

ಯೋಗಿ ಸರ್ಕಾರ ವಜಾಕ್ಕೆ ಆಗ್ರಹ: ಹಾಥರಸ್ ಅತ್ಯಾಚಾರ ಘಟನೆ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ನಗರದಲ್ಲಿ ಭಾನುವಾರವೂ ಪ್ರತಿಭಟನೆಗಳು ನಡೆದವು.

ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್‌ ವತಿಯಿಂದ ಎಫ್‌ಟಿಎಸ್‌ ವೃತ್ತದ ಬಳಿ ಬೆಳಿಗ್ಗೆ ಪ್ರತಿಭಟನೆ ನಡೆಯಿತು.

ದೇಶದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿರುವುದಕ್ಕೆ ಈ ಘಟನೆಯೇ ಸಾಕ್ಷಿ. ಘಟನೆ ನಡೆದು 15 ದಿನಗಳ ಬಳಿಕ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ. ಸರ್ಕಾರಕ್ಕೆ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗದವರ ಮೇಲೆ ಇರುವ ಕಾಳಜಿ ಏನು ಎಂಬುದನ್ನು ಇದು ತೋರಿಸುತ್ತದೆ ಎಂದು ದೂರಿದರು.

‘ನನ್ನ ಮೇಲೆ ಅತ್ಯಾಚಾರ ನಡೆದಿದೆ’ ಎಂಬ ಹೇಳಿಕೆಯನ್ನು ಯುವತಿ ಸಾಯುವ ಮುನ್ನ ನೀಡಿದ್ದಳು. ಆದರೆ ಉತ್ತರ ಪ್ರದೇಶ ಸರ್ಕಾರ ಅತ್ಯಾಚಾರ ನಡೆದಿಲ್ಲ ಎಂದು ಸುಳ್ಳು ಹೇಳುತ್ತಿದೆ. ಪೊಲೀಸರು ಕುಟುಂಬದ ಸದಸ್ಯರ ಅಭಿಪ್ರಾಯ ಪಡೆಯದೆಯೇ ಶವ ಸುಟ್ಟುಹಾಕಿದ್ದಾರೆ. ಈ ಮೂಲಕ ಸಾಕ್ಷ್ಯಾಧಾರಗಳು ಸಿಗದ ಹಾಗೆ ಮಾಡಿದ್ದಾರೆ ಎಂದು ಟೀಕಿಸಿದರು.

ಉತ್ತರ ಪ್ರದೇಶದಲ್ಲಿ ಗೂಂಡಾ ಸರ್ಕಾರ ಇದೆ. ಯೋಗಿ ಆದಿತ್ಯನಾಥ್‌ ಅವರು ಜನಸಾಮಾನ್ಯರಿಗೆ ಭದ್ರತೆ ನೀಡುವಲ್ಲಿ ವಿಫಲರಾಗಿದ್ದಾರೆ. ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದ್ದು, ಭಯದಿಂದ ಬದುಕುವಂತಾಗಿದೆ. ‍ ಪ್ರಧಾನಿ ಮಧ್ಯಪ್ರವೇಶಿಸಿ ಮಹಿಳೆಯರ ರಕ್ಷಣೆಗೆ ಕ್ರಮವಹಿಸಬೇಕು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ಯುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಘವೇಂದ್ರ, ಎಸ್‌ಸಿ ಘಟಕದ ಅಧ್ಯಕ್ಷ ಸುನಂದ್‌ಕುಮಾರ್, ಜಗದೀಶ್‌, ಉದಯಕುಮಾರ್‌, ರಾಜು, ಎಸ್.ರಾಜೇಶ್‌, ನಂಜುಂಡ, ಪ್ರಕಾಶ್‌ ಮತ್ತಿತರರು ಪಾಲ್ಗೊಂಡಿದ್ದರು.

ಕರ್ನಾಟಕ ಪ್ರಜಾ ಪಾರ್ಟಿ ವತಿಯಿಂದ ಗಾಂಧಿ ಚೌಕದಲ್ಲಿ ಪ್ರತಿಭಟನೆ ನಡೆಯಿತು. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಯೋಗಿ ಆದಿತ್ಯನಾಥ್‌ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಅತ್ಯಾಚಾರಿಗಳನ್ನು ಬಂಧಿಸಿ, ಗಲ್ಲಿಗೇರಿಸಬೇಕು. ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ರಾಜ್ಯಾಧ್ಯಕ್ಷ ಡಾ.ಬಿ.ಶಿವಣ್ಣ, ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಆರ್‌.ಲೋಕೇಶ್, ಮೈಸೂರು ನಗರ ಅಧ್ಯಕ್ಷ ಎನ್‌.ಹರೀಶ್ ಇತರರು ಭಾಗವಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು