ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಕ್ವಾರಿ ತ್ಯಾಜ್ಯ ಕೆರೆಯ ಒಡಲಿಗೆ

ಅಲ್ಲಲ್ಲಿ ನಡೆಯುತ್ತಿದೆ ಕೆರೆ ಮುಚ್ಚುವ, ಕೆರೆ ಒತ್ತುವರಿ ಕಾರ್ಯ
Last Updated 10 ಸೆಪ್ಟೆಂಬರ್ 2021, 4:25 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಕೆರೆಯಂ ಕಟ್ಟಿಸು, ದೇವಾಗಾರಮಂ ಮಾಡಿಸಿ, ಅನ್ನ ಸತ್ರವಂ ನಿರ್ಮಿಸು....’ ಎಂಬುದು ಶಾಸನಗಳಲ್ಲಿ ದಾಖಲಾಗಿರುವ ರಾಜೋಕ್ತಿ. ಆದರೆ, ಇರುವ ಕೆರೆಗಳನ್ನು ಮುಚ್ಚುವ, ಕೆರೆಗಳನ್ನು ಒತ್ತುವರಿ ಮಾಡುವ ಕೆಲಸವೂ ಅಲ್ಲಲ್ಲಿ ನಡೆಯುತ್ತಿದೆ.

ತಾಲ್ಲೂಕಿನ ಟಿ.ಎಂ. ಹೊಸೂರು ಬಳಿ ಜೋಡಿ ಕೆರೆಗಳ ಒಡಲಿಗೆ ಕಲ್ಲು ಕ್ವಾರಿ ನಡೆಸುವವರು ಕಲ್ಲು, ಮಣ್ಣು ಇತರ ತ್ಯಾಜ್ಯವನ್ನು ತುಂಬುತ್ತಿದ್ದಾರೆ. 2 ಎಕರೆ 2 ಗುಂಟೆ ವಿಸ್ತೀರ್ಣದ ಹಳೆ ಕೆರೆಯ ಏರಿಗೇ ಡೈನಮೈಟ್‌ ಇಟ್ಟು ಸಿಡಿಸುವ ಪ್ರಯತ್ನವೂ ನಡೆದಿದೆ. ಇದಕ್ಕೆ ಹೊಂದಿಕೊಂಡಿರುವ 1 ಎಕರೆ 28 ಗುಂಟೆ ವಿಸ್ತೀರ್ಣದ ಹೊಸಕೆರೆಗೆ ಕಲ್ಲು ಗಣಿಗಾರಿಕೆ ನಡೆಸುವವರು ಬೆಟ್ಟದ ಮಣ್ಣು ಸುರಿಯುತ್ತಿದ್ದಾರೆ.

ತಾಲ್ಲೂಕಿನ ನೇರಲಕೆರೆಯ ಮರಿಯಮ್ಮನ ಕೆರೆಯಲ್ಲಿ ಇದುವರೆಗೆ ಮೂರು ಬಾರಿ ಹೂಳೆತ್ತಲಾಗಿದೆ. 30 ಎಕರೆಗೂ ಹೆಚ್ಚು ವಿಸ್ತೀರ್ಣದ ಈ ಕೆರೆಯಲ್ಲಿ ಶೇ 30ರಷ್ಟೂ ಹೂಳು ತೆಗೆದಿಲ್ಲ. ಅಲ್ಲಲ್ಲಿ ಗುಂಡಿ ತೆಗೆದಂತೆ ಮಾಡಿ ಕೈ ಬಿಟ್ಟಿದ್ದಾರೆ. ಹಾಗಾಗಿ ಹೆಚ್ಚು ನೀರು ಸಂಗ್ರಹ ಆಗುತ್ತಿಲ್ಲ. ಈ ಕೆರೆಗೆ ವಿಸಿ ಸಂಪರ್ಕ ನಾಲೆಯಿಂದ ನೀರು ತುಂಬಿಸುವ ಯೋಜನೆ ಇದ್ದರೂ ಕೆರೆಯಲ್ಲಿ ನೀರಿಗಿಂತ ಕಳೆ ಗಿಡಗಳೇ ಹೆಚ್ಚಿದೆ.

ತಾಲ್ಲೂಕಿನಲ್ಲೇ ದೊಡ್ಡದಾದ ಕೆರೆ ಎಂಬ ಹೆಗ್ಗಳಿಕೆ ಅರಕೆರೆ ಗ್ರಾಮದ ಕೆರೆಗಿದೆ. ಒಟ್ಟು 234 ಎಕರೆ 29 ಗುಂಟೆ ವಿಸ್ತೀರ್ಣದ ಈ ಕೆರೆ ಅರಕೆರೆ ತುದಿಯಿಂದ ಬಳ್ಳೇಕೆರೆವರೆಗೆ ಚಾಚಿಕೊಂಡಿದೆ. ಬೇಸಿಗೆಯಲ್ಲೂ ಈ ಕೆರೆಯಲ್ಲಿ ನೀರು ಬತ್ತುವುದಿಲ್ಲ. ಆದರೆ, ಕೆರೆಯ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಒತ್ತುವರಿ ನಡೆಯುತ್ತಿದೆ. ಉಳ್ಳವರೇ ಕೆರೆಯ ಜಾಗವನ್ನು ಅತಿಕ್ರಮಿಸಿ ತೋಟ ಮಾಡಿಕೊಂಡಿದ್ದಾರೆ ಎಂಬ ಆರೋಪವೂ ಇದೆ.

ತಾಲ್ಲೂಕಿನ ಹುಲಿಕೆರೆ ಗ್ರಾಮದ ಪುರಾತನ ಕೋಡಿಗುಂಡಿ ಕೆರೆಯೂ ಒತ್ತುವರಿಯಾಗಿದೆ. ಏಳೆಂಟು ಎಕರೆ ವಿಸ್ತೀರ್ಣದ ಕೆರೆ ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತಿದೆ. ಮೀನುಗಾರಿಕೆ ನಡೆಸಲು ಟೆಂಡರ್‌ ಪಡೆದಿರುವವರು ಕೆರೆಯ ಗೋಡು ಮಣ್ಣನ್ನು ಲಕ್ಷಾಂತರ ರೂಪಾಯಿಗೆ ಇಟ್ಟಿಗೆ ಕಾರ್ಖಾನೆಗಳಿಗೆ ಮಾರಿಕೊಳ್ಳುತ್ತಿದ್ದಾರೆ. ಕೆರೆಯ ಏರಿಯನ್ನೇ ಬಗೆದು ಹಾಕಿದ್ದಾರೆ ಎಂಬುದು ಗ್ರಾಮಸ್ಥರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT