ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಧಾರ್ಮಿಕ ಕಟ್ಟಡ ತೆರವು: ಸಾಮರಸ್ಯ ರಕ್ಷಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಯು ರಾಜ್ಯದಾದ್ಯಂತ ಸಂಚಲನೆಯನ್ನು ಮೂಡಿಸಿದೆ.

’ತೆರವು ಕಾರ್ಯಾಚರಣೆಯಲ್ಲಿ ಹಿಂದೂ ದೇವಸ್ಥಾನಗಳನ್ನಷ್ಟೇ ಗುರಿಯಾಗಿಸಿಕೊಂಡು ಜಿಲ್ಲಾಡಳಿತ ತಾರತಮ್ಯ ಮಾಡುತ್ತಿದೆ’ ಎಂದು ಸಂಸದ ಪ್ರತಾಪಸಿಂಹ ಅವರು ಆರೋಪಿಸಿ ಅಸಮಾಧಾನ ವ್ಯಕ್ತಪಡಿಸಿದ ಬಳಿಕ, ವಿವಿಧ ಸಂಘಟನೆಗಳು ದೇವಾಲಯ ಉಳಿಸಿ ಆಂದೋಲನವನ್ನು ಆರಂಭಿಸಿದ್ದವು. ಸಂಸದರ ಹೇಳಿಕೆಗೆ ಶಾಸಕ ತನ್ವೀರ್‌ ಸೇಟ್‌ ಪ್ರತಿ ಹೇಳಿಕೆ ನೀಡಿ, ‘ಸಂಸದರು ಕೋಮುದ್ವೇಷವನ್ನು ಪ್ರಚೋದಿಸುತ್ತಿದ್ದಾರೆ’ ಎಂದೂ ದೂರಿದ್ದರು. ಈ ಕುರಿತು ‘ಪ್ರಜಾವಾಣಿ’ ಮಂಗಳವಾರ ನಡೆಸಿದ ಫೇಸ್‌ಬುಕ್‌ ಲೈವ್‌ ಸಂವಾದದಲ್ಲಿ ಪಾಲ್ಗೊಂಡವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಇಲ್ಲಿವೆ.

**
ಕೋರ್ಟ್‌ ಆದೇಶ ಪಾಲಿಸಲಿ: 2009ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಆದೇಶವನ್ನು ಪಾಲಿಸದೇ ಇದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂಬುದು ಸ್ಪಷ್ಟ. ಅನಧಿಕೃತ ಧಾರ್ಮಿಕ ಕಟ್ಟಡಗಳು ಜನರಿಗೆ ತೊಂದರೆ ಕೊಡುವಂತಿದ್ದರೆ ಅದನ್ನು ಸ್ಥಳಾಂತರಿಸಬೇಕು. ತೊಂದರೆದಾಯಕವಾಗಿಲ್ಲದಿದ್ದರೆ ಸಕ್ರಮಗೊಳಿಸಬಹುದು. ಅನಿವಾರ್ಯವಾದರೆ ಮಾತ್ರ ತೆರವುಗೊಳಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಆದರೆ, ಸ್ಥಳೀಯ ಆಡಳಿತಗಳು ಸ್ಥಳಾಂತರ ಮತ್ತು ಸಕ್ರಮಗೊಳಿಸುವ ಪ್ರಯತ್ನವನ್ನು ಮಾಡದೇ, ಧ್ವಂಸಗೊಳಿಸುವುದಕ್ಕೇ ಆದ್ಯತೆ ನೀಡುತ್ತಿವೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕಟ್ಟಡವಿರುವ ಸ್ಥಳ, ಸನ್ನಿವೇಶವನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಸಂಬಂಧಿಸಿದವರೆಲ್ಲರೊಂದಿಗೂ ಚರ್ಚಿಸಿ ಸರಿಯಾದ ತೀರ್ಮಾನ ಕೈಗೊಳ್ಳಬೇಕು. ವಿರೋಧಿಸುತ್ತಿರುವ ಬಿಜೆಪಿ ಮುಖಂಡರು ತಮ್ಮ ಸರ್ಕಾರದ ವಿರುದ್ಧ ಮೊದಲು ಹೋರಾಟ ಮಾಡಬೇಕು  
–ಬಿ.ಶಿವಣ್ಣ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ

**
ಬಿಜೆಪಿಯೇ ಅಧಿಕಾರದಲ್ಲಿದ್ದರೂ ತೆರವು ಹೇಗೆ?: ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ನಂಜನಗೂಡಿನಲ್ಲೂ ಬಿಜೆಪಿ ಶಾಸಕರೇ ಇದ್ದಾರೆ. ಆದರೂ, ಉಚ್ಚಗಣಿಯ ಮಹದೇವಮ್ಮ ದೇವಾಲಯ ಧ್ವಂಸವಾಗಿದ್ದಾದರೂ ಹೇಗೆ?

ಧ್ವಂಸ ಕಾರ್ಯಾಚರಣೆಗೂ ಮುನ್ನ ನಡೆದ ಸಭೆಯಲ್ಲಿ ಸಂಸದ ಪ್ರತಾಪಸಿಂಹ, ನಂಜನಗೂಡು ಶಾಸಕ ಬಿ.ಹರ್ಷವರ್ಧನ್‌ ಅವರೂ ಪಾಲ್ಗೊಂಡಿದ್ದರು. ಅಲ್ಲಿಯೇ ತೆರವು ಕಾರ್ಯಾಚರಣೆಯನ್ನು ವಿರೋಧಿಸಬೇಕಾಗಿತ್ತು. ಆದರೆ ಹಾಗೆ ಮಾಡದೆ, ದೇವಾಲಯ ಧ್ವಂಸವಾದ ಬಳಿಕ ವಿರೋಧಿಸುವುದು ಸರಿಯಲ್ಲ

ಹಿಂದುತ್ವವನ್ನು ಯಾರೂ ಬಿಜೆಪಿಗೆ ಗುತ್ತಿಗೆ ಕೊಟ್ಟಿಲ್ಲ. ದೇವಾಲಯ ಧ್ವಂಸವನ್ನು ವಿರೋಧಿಸಿದ ಮಾತ್ರಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹಿಂದುತ್ವದ ಪರ ಎನ್ನುವುದು ಸರಿಯಲ್ಲ.  
 -ಎಂ.ಲಕ್ಷ್ಮಣ, ಕೆಪಿಸಿಸಿ ವಕ್ತಾರ

**
ಕೋಮುದ್ವೇಷ ಬಿತ್ತಬಾರದು: ನಾನು ಮುಸ್ಲಿಮನಾಗಿದ್ದರೂ, ನನ್ನ ಜನ್ಮದಿನದಂದು ಬೆಂಬಲಿಗರು ಹಿಂದೂ ದೇವಾಲಯಗಳಿಗೆ ಕರೆದೊಯ್ದು ‍ಪೂಜೆ ಮಾಡಿಸುತ್ತಾರೆ. ನಾನು ಎಲ್ಲ ಜಾತಿ, ಧರ್ಮದವರೊಂದಿಗೂ ಭೇದ ಮರೆತು ಬೆರೆತು ಬದುಕುತ್ತಿದ್ದೇನೆ. 1969ರಿಂದ ಇಲ್ಲಿವರೆಗೆ ಮೈಸೂರಿನಲ್ಲಿ ಕೋಮುಗಲಭೆ ನಡೆದಿಲ್ಲ. ಆದರೆ ಸಂಸದ ಪ್ರತಾಪಸಿಂಹ ಅವರು ಮಸೀದಿ, ದರ್ಗಾಗಳನ್ನೂ ತೆರವುಗೊಳಿಸಿ ಎನ್ನುವ ಮೂಲಕ ಅದಕ್ಕೆ ಪ್ರಚೋದನೆ ನೀಡುತ್ತಿದ್ದಾರೆ.

ಯಾವುದೇ ದರ್ಗಾ, ಮಸೀದಿಗಳನ್ನು ಅನಧಿಕೃತವಾಗಿ ಕಟ್ಟುವುದಿಲ್ಲ. ಹಾಗೆ ಕಟ್ಟಿದ ಬಳಿಕ ಅಲ್ಲಿ ಪ್ರಾರ್ಥನೆ ಮಾಡಿದರೆ ಏಳ್ಗೆ ಕಾಣುವುದಿಲ್ಲ ಎಂಬ ಬಲವಾದ ನಂಬಿಕೆಯುಳ್ಳವರು ನಾವು. ನಿಯಮ ಮೀರಿ ನಿರ್ಮಿಸಿದ್ದರೆ ಯಾವುದೇ ಧರ್ಮದ್ದಾದರೂ ಸರಿ ಒಡೆದುಹಾಕಲಿ.  –ಅಬ್ದುಲ್‌ ಅಜೀಜ್‌, ಜೆಡಿಎಸ್‌ ಮುಖಂಡ

**
ಹಿಂದೂ ಭಾವನೆಗಳಿಗೆ ಧಕ್ಕೆಯಾಗಿದೆ: ಉಚ್ಚಗಣಿಯ ಮಹದೇವಮ್ಮ ದೇವಾಲಯ ಧ್ವಂಸವಾಗಿದ್ದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆ ಬಂದಿದೆ. 

ರಾಜ್ಯ ಹೆದ್ದಾರಿ ಪಕ್ಕದಲ್ಲೇ ಇರುವುದರಿಂದ ಧ್ವಂಸ ಮಾಡಲಾಗಿದೆ ಎನ್ನುತ್ತಿರುವ ಜಿಲ್ಲಾಡ ಳಿತವು, ಅದೇ ಸಾಲಿನಲ್ಲಿರುವ ಇನ್ನಿತರ ಅನಧಿಕೃತ ಕಟ್ಟಡಗಳನ್ನು ಕೆಡವದೆ ಏಕೆ ಸುಮ್ಮನಿದೆ? ಮಸೀದಿಯಾಗಲಿ, ದರ್ಗಾ ಆಗಲಿ, ಚರ್ಚ್‌ ಆಗಲಿ, ಯಾವುದೇ ಧರ್ಮದ್ದಾಗಲಿ, ಅನಧಿಕೃತವಾಗಿದ್ದರೆ ಕೆಡವಬೇಕು. ಹಿಂದೂ ದೇವಾಲಯಗಳನ್ನೇ ಏಕೆ ಗುರಿಯಾಗಿಸಿಕೊಳ್ಳಬೇಕು?

ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತರದೆ ಇಂಥ ಕಾರ್ಯಾಚರಣೆ ಮಾಡಿದ್ದಾರೆ. ಕಾರ್ಯಾಚರಣೆಗೂ ಮುನ್ನವೇ ಗಮನಕ್ಕೆ ತರಬೇಕಾಗಿತ್ತು. ದೇವಾಲಯವಿರುವ ಪ್ರದೇಶದಲ್ಲಿ ಸದ್ಯ ಹೆದ್ದಾರಿ ನಿರ್ಮಾಣ ಕಾರ್ಯವೇ ನಡೆಯುತ್ತಿಲ್ಲ.

ಸಂಸದರ ಹೇಳಿಕೆಯನ್ನು ವಿರೋಧಿಸುವ ಭರದಲ್ಲಿ ಶಾಸಕ ತನ್ವೀರ್‌ ಸೇಟ್‌ ಅವರು, ಮಹಿಳೆಯರಿಗೆ ಅಗೌರವ ತರುವಂಥ ಮಾತನ್ನು ಆಡಿರುವುದು ವಿಷಾದನೀಯ
–ಮಂಗಳಾ ಸೋಮಶೇಖರ್‌, ಬಿಜೆಪಿ ಮೈಸೂರು ಗ್ರಾಮಾಂತರ ಅಧ್ಯಕ್ಷೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು