ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ಕಟ್ಟಲಾಗ್ತಿಲ್ಲ; ಮನೆಗೆ ಏನೂ ಒಯ್ದಿಲ್ಲ

ಮುಂದುವರಿದ ಸಾರಿಗೆ ನೌಕರರ ಮುಷ್ಕರ: ಕಂಗಾಲಾದ ಆಟೊ ಚಾಲಕರು
Last Updated 10 ಏಪ್ರಿಲ್ 2021, 4:44 IST
ಅಕ್ಷರ ಗಾತ್ರ

ಮೈಸೂರು: ಸಾರಿಗೆ ನೌಕರರ ಮುಷ್ಕರ ಮುಂದುವರಿದಿದೆ. ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಸಿಲುಕುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಒಳಭಾಗದಲ್ಲಿ ದುಬಾರಿ ಬಾಡಿಗೆಗೆ ಅಂಗಡಿ ಮಳಿಗೆ ಹೊಂದಿರುವವರು, ಸುತ್ತಮುತ್ತಲಿನ ವಾಣಿಜ್ಯ ಕಾಂಪ್ಲೆಕ್ಸ್‌ನಲ್ಲಿ ಅಂಗಡಿ, ಹೋಟೆಲ್‌ ಹೊಂದಿರುವವರು, ಆಟೊ ಚಾಲಕರು ಸಹ ವಹಿವಾಟಿಲ್ಲದೆ ಕಂಗಾಲಾಗಿದ್ದಾರೆ.

‘40 ವರ್ಷದಿಂದ ಆಟೊ ಓಡಿಸುತ್ತಿರುವೆ. ಸ್ವಂತ ಆಟೊ ಇಲ್ಲ. ಇಂದಿಗೂ ಬಾಡಿಗೆ ಆಟೊನೇ ನನಗೆ ಆಸರೆ. ದಿನವೂ ₹120 ಬಾಡಿಗೆ ಕೊಡಬೇಕು. ಡೀಸೆಲ್‌, ಓಡಾಟದ ನಡುವಿನ ಊಟ–ತಿಂಡಿಯ ಖರ್ಚು ಬೇರೆ. ಎರಡ್ಮೂರು ದಿನದಿಂದ ಬಾಡಿಗೆಯ ದುಡ್ಡು ಸಹ ಹುಟ್ಟಿಲ್ಲ’ ಎಂದು ಜೆ.ಪಿ. ನಗರದ ಆಟೊ ಚಾಲಕ ಬಾಬು ‘ಪ್ರಜಾವಾಣಿ’ ಬಳಿ ಕಣ್ಣೀರಿಟ್ಟರು.

‘ನಿತ್ಯ ದುಡಿದರಷ್ಟೇ ಮನೆ ನಡೆಯೋದು. ಮೂರು ದಿನವೂ ಎಂದಿನಂತೆ ಬಾಡಿಗೆಗೆ ಆಟೊ ತಂದಿರುವೆ. ಸಂಪಾದನೆಯೇ ಆಗ್ತಿಲ್ಲ. ಸಾಲ ಮಾಡೋದು ತಪ್ಪದಾಗಿದೆ. ಇನ್ನೆಷ್ಟು ದಿನ ಮುಷ್ಕರ ನಡೆಯುತ್ತೋ? ನಮ್ಮ ಸಂಕಷ್ಟ ಎಂದು ತಪ್ಪುತ್ತೋ?’ ಎಂದು ಅವರು ಗೋಳಾಡಿದರು.

‘ಮೂರು ದಿನದಿಂದ ಮುಷ್ಕರ ನಡೆದಿದ್ದು, ಜನರ ಸಂಚಾರವೇ ಇಲ್ಲದಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡಿದರೆ ಮಾತ್ರ ಜನದಟ್ಟಣೆ ಹೆಚ್ಚಿರಲಿದೆ. ಆಟೊಗೆ ಪ್ರಯಾಣಿಕರು ಹೆಚ್ಚಿರುತ್ತಾರೆ. ಆದರೆ, ಇದೀಗ ದಿನಕ್ಕೊಂದು–ಎರಡು ಬಾಡಿಗೆ ಸಿಕ್ಕರೆ ಹೆಚ್ಚು ಎನ್ನುವಂತಹ ಸ್ಥಿತಿಯಿದೆ’ ಎಂದು ನಗರದ ಸಬರ್‌ಬನ್‌ ಬಸ್‌ ನಿಲ್ದಾಣದ ಬಳಿಯಿರುವ ಆಟೊ ನಿಲ್ದಾಣದಲ್ಲಿನ ಆಟೊ ಚಾಲಕರು ಅಲವತ್ತುಕೊಂಡರು.

‘ಲಾಕ್‌ಡೌನ್‌ನಲ್ಲಿನ ಕಠಿಣ ಪರಿಸ್ಥಿತಿಯೇ ಮತ್ತೊಮ್ಮೆ ನಿರ್ಮಾಣವಾಗಿದೆ ಎನಿಸಲಾರಂಭಿಸಿದೆ. ಸಾರಿಗೆ ನೌಕರರ ಮುಷ್ಕರದಿಂದ ಸಹಸ್ರ, ಸಹಸ್ರ ಸಂಖ್ಯೆಯ ಆಟೊ ಚಾಲಕರ ಬದುಕಿನ ಹಳಿ ತಪ್ಪಿದೆ. ಮೂರು ದಿನದಿಂದ ಮನೆಗೆ ಏನನ್ನೂ ಒಯ್ಯಲಾಗಿಲ್ಲ.’

‘ಹೆಂಡತಿ–ಮಕ್ಕಳು ಎದುರಿಸುತ್ತಿರುವ ಸಂಕಷ್ಟದ ಕತೆ ಹೇಳಿಕೊಳ್ಳಲಾಗಲ್ಲ. ದಿನವಿಡೀ ಮನೆಯಿಂದ ಹೊರಗೆ ಇದ್ದರೂ; ಎರಡ್ಮೂರು ಬಾಡಿಗೆ ಸಿಗದಾಗಿದೆ. ಒಟ್ಟಾರೆ ದುಡಿಮೆಯೇ ಇಲ್ಲವಾಗಿದೆ. ಒಪ್ಪೊತ್ತಿನ ಊಟದ ಖರ್ಚಿಗಾದರೂ ಸಾಕು ಎನಿಸಿದೆ. ದಿಕ್ಕು ತೋಚದ ಸ್ಥಿತಿ ನಮ್ಮದಾಗಿದೆ. ಇದು ನನ್ನೊಬ್ಬನ ವ್ಯಥೆಯಲ್ಲ. ಅಸಂಖ್ಯಾತ ಆಟೊ ಚಾಲಕರು ಎದುರಿಸುತ್ತಿರುವ ಪರಿಸ್ಥಿತಿಯಿದು’ ಎಂದು ಆಟೊ ಚಾಲಕ ಓಂಕಾರ್‌, ತಮ್ಮ ಬಳಗದ ಸಂಕಷ್ಟದ ಸರಮಾಲೆಯನ್ನೇ ಬಿಚ್ಚಿಟ್ಟರು. ಜೊತೆಯಲ್ಲಿದ್ದವರು ಒಬ್ಬೊಬ್ಬರದ್ದು ಒಂದೊಂದು ವಿಭಿನ್ನ ಕತೆ ಎಂದು ಧ್ವನಿಗೂಡಿಸಿದರು.

ಊಟಕ್ಕೂ ಸಾಲ

‘ತಿಂಗಳಿಗೆ ನಮ್ಮ ಮಳಿಗೆಗೆ ₹1 ಲಕ್ಷ ಬಾಡಿಗೆಯಿದೆ. ವಿದ್ಯುತ್‌, ಇತರೆ ನಿರ್ವಹಣೆಯ ಖರ್ಚಿಗಾಗಿಯೇ ದಿನಕ್ಕೆ ₹4 ಸಾವಿರ ಲಾಭ ಸಿಕ್ಕರೆ ವಹಿವಾಟಿಗೆ ಸಹಕಾರಿಯಾಗಲಿದೆ. ಆದರೆ, ಮೂರು ದಿನದಿಂದ ಬಸ್‌ ಸಂಚಾರವೇ ಇಲ್ಲ. ನಗರ ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಸಂಚಾರವೂ ಬೆರಳೆಣಿಕೆ. ಜನರೇ ಬರದಿದ್ದರೇ ನಮ್ಮ ವ್ಯಾಪಾರ ನಡೆಯೋದಾದರೂ ಹೆಂಗೆ?’ ಎಂದು ನಗರ ಬಸ್‌ ನಿಲ್ದಾಣದೊಳಗೆ ಮಳಿಗೆ ಹೊಂದಿರುವ ವ್ಯಾಪಾರಿ ಪವನ್‌ ‘ಪ್ರಜಾವಾಣಿ’ ಬಳಿ ಅಲವತ್ತುಕೊಂಡರು.

‘ದಿನವಿಡೀ ₹500 ವ್ಯಾಪಾರವಾದರೆ ನಮ್ಮ ಪುಣ್ಯ. ಅಂಗಡಿಯ ಹುಡುಗರ ಊಟದ ಖರ್ಚಿಗೆ ಸಾಲ ಪಡೆಯಬೇಕಾದ ಪರಿಸ್ಥಿತಿ ನಮ್ಮದಾಗಿದೆ’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT