ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ಸೈಕಸ್‌ ಸ್ವಾಮಿಐ’ಗೆ ಸಂತಾನೋತ್ಪತ್ತಿ ಸಂಭ್ರಮ

ಯುವರಾಜ ಕಾಲೇಜಿನ ಸಸ್ಯೋದ್ಯಾನದಲ್ಲಿ ಸಸ್ಯ; ಬಿ.ಜಿ.ಎಲ್. ಸ್ವಾಮಿ ಸ್ಮರಣಾರ್ಥ ‘ಸೈಕಸ್‌ ಸ್ವಾಮಿಐ’ ಹೆಸರು
Last Updated 6 ಜೂನ್ 2021, 2:42 IST
ಅಕ್ಷರ ಗಾತ್ರ

ಮೈಸೂರು: ನಗ್ನಬೀಜ ಸಸ್ಯಗಳ ಗುಂಪಿಗೆ ಸೇರಿದ ಸೈಕಸ್‌ ಪ್ರಭೇದದ ‘ಸೈಕಸ್‌ ಸ್ವಾಮಿಐ’ ಎಂಬುದು ದಕ್ಷಿಣ ಕರ್ನಾಟಕದ ಪೂರ್ವಭಾಗದಲ್ಲಿರುವ ಅಪರೂಪದ ಸಸ್ಯ ತಿಳಿ. ಮೈಸೂರಿನ ಯುವರಾಜ ಕಾಲೇಜಿನ ಸಸ್ಯೋದ್ಯಾನ ದಲ್ಲಿರುವ ಈ ತಳಿಯ ಸಸ್ಯವು ಸುಮಾರು 25 ವರ್ಷಗಳ ಬಳಿಕ ಪುಷ್ಪವತಿಯಾಗಿ, ಕಾಯಾಗಿ, ಹಣ್ಣಾಗಿ ಸಂಭ್ರಮಿಸುತ್ತಿದೆ.

ಡೈನೋಸಾರ್‌ಗಳಿದ್ದ ಜುರಾಸಿಕ್‌ ಯುಗದಿಂದಲೂ ಈ ಸಸ್ಯಗಳು ಅಸ್ತಿತ್ವದ ಲ್ಲಿದ್ದು, ಬೃಹದಾಕಾರ ಮರಗಳಾಗಿದ್ದವು. ಆದರೆ, ವಿಕಾಸದ ಹಂತದಲ್ಲಿ ಕಾಲನ ಕೈಗೆ ಸಿಕ್ಕಿ, ನಲುಗಿ ಕುಬ್ಜವಾಗಿ ಈಗ ನಮ್ಮೆಲ್ಲರ ಹೂದೋಟ, ಉದ್ಯಾನಗಳಲ್ಲಿ ಆಲಂಕಾರಿಕ ಸಸ್ಯಗಳಾಗಿ ನೆಲೆ ನಿಂತಿವೆ. ಭಾರತದಲ್ಲಿ ಸೈಕಸ್‌ ಪ್ರಭೇದಕ್ಕೆ ಸೇರಿದ ಸುಮಾರು 15 ತಳಿಗಳಿದ್ದು, ಕರ್ನಾಟಕದಲ್ಲಿ 9 ತಳಿಗಳಿರುವುದನ್ನು ಸಸ್ಯವಿಜ್ಞಾನಿಗಳು ಗುರುತಿಸಿದ್ದಾರೆ.

ಯುವರಾಜ ಕಾಲೇಜಿನ ಸಸ್ಯೋದ್ಯಾನದಲ್ಲಿ ‘ಸೈಕಸ್‌ ಸ್ವಾಮಿಐ’ ತಳಿಯ 4 ಗಂಡು ಗಿಡ ಹಾಗೂ ಒಂದು ಹೆಣ್ಣು ಗಿಡ ಇವೆ. ಗಂಡು ಗಿಡವು ಪರಾಗುರೇಣುಗಳನ್ನು ಕೋನ್‌ನಲ್ಲಿ ಹಾಗೂ ಹೆಣ್ಣು ಗಿಡಗಳು ಬೀಜಗಳನ್ನು ‘ಮೆಗಾಸ್ಪೋರೋಫಿಲ್‌’ ಎಂಬ ವಿಶೇಷ ಎಲೆಗಳ ಮೇಲೆ ಉತ್ಪತ್ತಿ ಮಾಡುತ್ತವೆ. ಇಲ್ಲಿರುವ ಹೆಣ್ಣು ಗಿಡವು ಕಳೆದ ಆರು ತಿಂಗಳ ಹಿಂದೆ ಬೀಜೋತ್ಪತ್ತಿ ಆರಂಭಿಸಿದ್ದು, ಈಗ ಹಣ್ಣಾಗಿ ಉದುರುವ ಹಂತಕ್ಕೆ ಬಂದಿದೆ.

ಯುವರಾಜ ಕಾಲೇಜಿನ ಸಸ್ಯವಿಜ್ಞಾನ ವಿಭಾಗದ ಉಪನ್ಯಾಸಕಿ ರೇಣು ಪ್ರಿಯದರ್ಶಿನಿ ಅವರು ಈ ಸಸ್ಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಹೂವು ಬಿಡಲು ಆರಂಭಿಸಿದ ದಿನದಿಂದಲೂ ಅದರ ವಿವಿಧ ಹಂತಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅಲ್ಲದೆ, ಛಾಯಾಚಿತ್ರಗಳನ್ನೂ ಸೆರೆ ಹಿಡಿದಿದ್ದಾರೆ.

‘ಮೈಸೂರು, ಹಾಸನ, ಮಂಡ್ಯ, ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ಕಂಡುಬಂದಿರುವ ಈ ಸಸ್ಯವು ನಮ್ಮ ನಾಡಿನ ಹಿರಿಮೆ. ಸೈಕಸ್ ತಳಿಯ ಜನ್ಮಾಂತರವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ, ಹೆಸರಾಂತ ಸಸ್ಯವಿಜ್ಞಾನಿ ಪ್ರೊ.ಬಿ.ಜಿ.ಎಲ್. ಸ್ವಾಮಿ ಅವರಿಗೆ ಸಲ್ಲುತ್ತದೆ. ಅವರು ಹಾಸನ ಜಿಲ್ಲೆಯಲ್ಲಿ 3 ಚದರ ಮೈಲಿಗಳಲ್ಲಿ ಮರಳುಗಲ್ಲು ಮತ್ತು ಬೆಣಚುಗಲ್ಲಿನ ಚಿಕ್ಕ ಗುಡ್ಡದ ನಡುವೆ ವಿಶಾಲವಾಗಿ ಹರಡಿದ್ದ ಸೈಕಸ್ ಗಿಡಗಳ ಬಗ್ಗೆ ಅಧ್ಯಯನ ಮಾಡಿದ್ದರು. ಇದು ಬೇರೆ ತಳಿಗಳಿಗಿಂತ ಭಿನ್ನವಾಗಿರುವುದನ್ನು ಕಂಡುಕೊಂಡರು. ಈ ಸಸ್ಯದ ಟಿಸಿಲೊಡೆಯುವಿಕೆ, ಸಂತಾನ ವೃದ್ಧಿ ವೇಳೆಯಲ್ಲಿ ಎಲೆ ಉದುರಿಸುವ ಪ್ರಕ್ರಿಯೆ ಅಪರೂಪವಾಗಿದ್ದು, ಬೇರೆ ತಳಿಗಿಂತ ಪ್ರತ್ಯೇಕವಾಗಿರುವುದೆಂದು ಸಾಬೀತುಪಡಿಸಿದ್ದರು’ ಎಂದು ರೇಣು ಪ್ರಿಯದರ್ಶಿನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ವಾಭಾವಿಕವಾಗಿ ಬೆಳೆಯುವ ಸಸ್ಯ’

‘ಸೈಕಸ್‌ ಸ್ವಾಮಿಐ’ ತಳಿಯು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಸಸ್ಯ. ಆದರೆ, ಈಗ ತನ್ನ ಮೂಲ ನೆಲೆಯಲ್ಲಿ ಇವು ಕಡಿಮೆ ಪ್ರಮಾಣದಲ್ಲಿವೆ. ನಗರ ಪ್ರದೇಶಗಳ ಉದ್ಯಾನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ ಎಂದು ಯುವರಾಜ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಕೆ.ಎ.ಶರ್ವಾಣಿ ತಿಳಿಸಿದರು.

‘ಈ ಸಸ್ಯದ ಬಗ್ಗೆ ಬಿ.ಜಿ.ಎಲ್. ಸ್ವಾಮಿ ಅವರು ಅಧ್ಯಯನ ನಡೆಸಿದ್ದರಿಂದ, ಅವರ ಸ್ಮರಣಾರ್ಥ 2008ರಲ್ಲಿ ಈ ಸಸ್ಯಕ್ಕೆ ‘ಸೈಕಸ್‌ ಸ್ವಾಮಿಐ’ ಎಂಬ ವೈಜ್ಞಾನಿಕ ಹೆಸರನ್ನು ಇಡಲಾಯಿತು’ ಎಂದರು.

***

ಇಂಟರ್‌ನ್ಯಾಷನಲ್‌ ಯೂನಿಯನ್‌ ಫಾರ್‌ ಕನ್ಸರ್ವೇಷನ್‌ ಪ್ರಕಾರ ‘ಸೈಕಸ್‌ ಸ್ವಾಮಿಐ’ ತಳಿ ಅಳಿವಿನಂಚಿನಲ್ಲಿದೆ. ಇದನ್ನು ಜತನದಿಂದ ಕಾಪಾಡಬೇಕಿದೆ.

–ರೇಣು ಪ್ರಿಯದರ್ಶಿನಿ, ಉಪನ್ಯಾಸಕಿ, ಯುವರಾಜ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT