ಮಂಗಳವಾರ, ಡಿಸೆಂಬರ್ 1, 2020
21 °C
ಇಳುವರಿ ಕುಸಿತದ ಭೀತಿ: ಗದ್ದೆಯಲ್ಲಿ ದುಡಿದ ಶ್ರಮದ ಕೂಲಿಯೂ ಸಿಗದ ಪರಿಸ್ಥಿತಿ...

ಮೈಸೂರು | ಭತ್ತಕ್ಕೆ ಬೆಂಕಿ ರೋಗ: ಬೆಳೆಗಾರ ಕಂಗಾಲು

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯಲ್ಲಿ ಭತ್ತದ ಬೆಳೆ ಸಮೃದ್ಧವಾಗಿದೆ. ಹೂವು ಬರುವ ಕಾಲವಿದು. ಇಂತಹ ಹೊತ್ತಲ್ಲೇ ಫಸಲಿಗೆ ವಿವಿಧ ಬಾಧೆ ಗೋಚರಿಸುತ್ತಿದೆ. ಇದು ಭತ್ತದ ಬೆಳೆಗಾರರನ್ನು ಕಂಗಾಲಾಗಿಸಿದೆ.

ತಿ.ನರಸೀಪುರ, ನಂಜನಗೂಡು, ಕೆ.ಆರ್‌.ನಗರ ಹಾಗೂ ಮೈಸೂರು ತಾಲ್ಲೂಕಿನ ಕೆಲವು ಭಾಗದಲ್ಲಿನ ಭತ್ತದ ಬೆಳೆಯಲ್ಲಿ ಹಳದಿ ಕಾಂಡ ಕೊರಕ, ಗರಿ ಸುತ್ತುವ ಹುಳು, ಬೆಂಕಿ ರೋಗ, ದುಂಡಾಣು ಅಂಗಮಾರಿ ರೋಗ, ಕೊಳವೆ ಹುಳು, ಎಲೆ ಕವಚ ರೋಗ ಮತ್ತು ಊದುಬತ್ತಿ ರೋಗವೂ ಕಾಣಿಸಿಕೊಂಡಿದ್ದು, ಕೃಷಿಕರ ಆತಂಕ ಹೆಚ್ಚಿಸಿದೆ.

‘ಗದ್ದೆಗಳಲ್ಲಿ ಇದೀಗ ಕೆಪಟೆ ಮಾರಿ (ಬೆಂಕಿ ರೋಗ) ಕಾಣಿಸಿಕೊಳ್ಳುತ್ತಿದೆ. ಪೈರಿನ ಗರಿಗಳು ಕೆಂಪಾಗಲಾರಂಭಿಸಿವೆ. ಸುರುಳಿ ಸುತ್ತಿಕೊಂಡು ಒಣಗುತ್ತಿವೆ. ಒಂದೆರಡು ದಿನಗಳಲ್ಲೇ ಸಸಿ ಸಾಯುತ್ತಿದೆ. ಹೂವಿನ ಹಂತದಲ್ಲೇ ಬೆಳೆ ರೋಗಕ್ಕೀಡಾಗುವುದರಿಂದ ನಿರೀಕ್ಷಿತ ಇಳುವರಿ ಸಿಗಲ್ಲ. ಇದರಿಂದ ಈ ಬಾರಿ ಹಾಕಿದ ಬಂಡವಾಳವೂ ಕೈಗೆ ಮರಳದ ಪರಿಸ್ಥಿತಿಯಿದೆ’ ಎಂದು ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದ ಭತ್ತದ ಬೆಳೆಗಾರ ರಘು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಮೋಡದ ವಾತಾವರಣ ಹೆಚ್ಚಿದ್ದುದರಿಂದ, ಮಳೆಯೂ ಹೆಚ್ಚಿಗೆ ಸುರಿದಿದ್ದರಿಂದ ರೋಗ ತುಸು ಜಾಸ್ತಿಯಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿಗಳು ಆಗಿರುವುದರಿಂದ, ಗದ್ದೆಗಳಿಗೆ ಭೇಟಿ ನೀಡುತ್ತಿಲ್ಲ. ಯಾವೊಂದು ಸಲಹೆಯನ್ನು ನೀಡುತ್ತಿಲ್ಲ. ಯೂರಿಯಾ ಕೊರತೆಯೂ ಕಾಡಿತು. ಇವೆಲ್ಲವೂ ಇಳುವರಿಗೆ ಹೊಡೆತ ನೀಡಲಿವೆ’ ಎಂದರು.

‘ಜ್ಯೋತಿ ತಳಿಯ ಭತ್ತಕ್ಕೆ ಕೆಪಟೆ ಮಾರಿ ಬಾಧಿಸುತ್ತಿದೆ. ಪ್ರತಿ ವರ್ಷವೂ ಈ ತಳಿ ರೋಗಕ್ಕೆ ತುತ್ತಾಗುತ್ತಿದ್ದರೂ, ಕೃಷಿ ಇಲಾಖೆಯ ಅಧಿಕಾರಿಗಳು ಮಾತ್ರ ಭತ್ತ ಕೃಷಿಕರಲ್ಲಿ ಪರ್ಯಾಯದ ಜಾಗೃತಿ ಮೂಡಿಸುವಲ್ಲಿ ವಿಫಲರಾಗುತ್ತಿದ್ದಾರೆ’ ಎನ್ನುತ್ತಾರೆ ತಿ.ನರಸೀಪುರ ತಾಲ್ಲೂಕಿನ ನೀಲಸೋಗೆಯ ಭತ್ತದ ಬೆಳೆಗಾರ ಕೆ.ಎನ್.ಸುಬ್ರಹ್ಮಣ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು