ಗುರುವಾರ , ಸೆಪ್ಟೆಂಬರ್ 23, 2021
23 °C

ಮೈಸೂರು | ಚಿಕಿತ್ಸೆ ವಿಳಂಬವಾದರೆ ಜೀವಕ್ಕೆ ಅಪಾಯ; ರೋಗ ಮುಚ್ಚಿಟ್ಟುಕೊಳ್ಳಬೇಡಿ

ಪುಟ್ಟಸ್ವಾಮಿ Updated:

ಅಕ್ಷರ ಗಾತ್ರ : | |

ಮೈಸೂರು: ಕೋವಿಡ್‌–19ನಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಮಕ್ಕಳು, ಗರ್ಭಿಣಿಯರು, ವಯಸ್ಸಾದವರು, ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮಾತ್ರ ಹೆಜ್ಜೆ ಹೆಜ್ಜೆಗೂ ಜಾಗರೂಕರಾಗಿರಬೇಕು.

ಕೊರೊನಾ ವೈರಸ್‌ ಸೋಂಕು ಯಾರಿಗೆ ಯಾವ ರೀತಿ ತಗುಲುತ್ತೆ ಎಂಬುದೇ ಗೊತ್ತಾಗಲ್ಲ. ನಿತ್ಯವೂ ಜನರಿಗೆ ಮೈಕ್ ಹಿಡಿದು ಜಾಗೃತಿಯ ಪಾಠ ಮಾಡುತ್ತಿದ್ದವ ನಾನು. ವೈದ್ಯರೂ ಸೇರಿದಂತೆ ಆರೋಗ್ಯ ಸೇವೆ ಒದಗಿಸುವ ಸಿಬ್ಬಂದಿಯೂ ಪೀಡಿತರಾಗಿದ್ದಾರೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದೇ ಇದಕ್ಕೆ ಸೂಕ್ತ ಮದ್ದು.

ಎಷ್ಟು ಜಾಗರೂಕರಾಗಿರುತ್ತೇವೆ ಅಷ್ಟು ಒಳ್ಳೆಯದು. ಹೊರಗೆ ಬಂದೊಡನೆ ಮಾಸ್ಕ್ ಧರಿಸಬೇಕು. ಜನರೊಟ್ಟಿಗೆ ಮಾತನಾಡುವಾಗ ಕನಿಷ್ಠ ಅಂತರ ಕಡ್ಡಾಯವಾಗಿರಲಿ. ಆಗಾಗ್ಗೆ ಸ್ಯಾನಿಟೈಸ್‌ನಿಂದ ಕೈ ಸ್ವಚ್ಛಗೊಳಿಸಿಕೊಳ್ಳಬೇಕು.

ಪೊಲೀಸ್ ವೃತ್ತಿಯಲ್ಲಿ 36 ವರ್ಷ ಸೇವೆ ಸಲ್ಲಿಸಿರುವೆ. ಕಾವೇರಿ ಗಲಾಟೆಯಲ್ಲೊಮ್ಮೆ ಕಲ್ಲೇಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದೆ. ಇದೀಗ ಕೋವಿಡ್‌ನಿಂದ ಆಸ್ಪತ್ರೆ ಮೆಟ್ಟಿಲು ಹತ್ತಿದ್ದು. 58 ವರ್ಷವಾದರೂ ಆರೋಗ್ಯವಾಗಿರುವೆ.

ಎಂದಿನಂತೆ ಕಚೇರಿಗೆ ಬೆಳಿಗ್ಗೆ 8.30ಕ್ಕೆ ಬರುತ್ತಿದ್ದೆ. ಮೆಟ್ಟಿಲು ಹತ್ತುವಷ್ಟರಲ್ಲೇ ಸುಸ್ತಾಯಿತು. ಉಪಹಾರ ಸೇವಿಸಿದವನು ನೇರವಾಗಿ, ಅನುಮಾನದಿಂದ ಆಸ್ಪತ್ರೆಗೆ ತೆರಳಿದೆ. ವೈದ್ಯರು ಪರೀಕ್ಷಿಸಿದರು. ಶುಗರ್ 350 ದಾಟಿತ್ತು. ಚಿಕಿತ್ಸೆ ನೀಡಿ ಸಮಸ್ಯೆಯಿಲ್ಲ ಎಂದರು. ಮರು ದಿನವೂ ಇದೇ ಸಮಸ್ಯೆ ಕಾಣಿಸಿಕೊಂಡಿತು. ಸರಗೂರಿನ ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಎಕ್ಸರೇ ಮಾಡಿಸಿಕೊಂಡೆ. ವೈದ್ಯರು ಅಡ್ಮಿಟ್ ಆಗಲು ಹೇಳಿದರು.

ಎಚ್‌.ಡಿ.ಕೋಟೆಯಲ್ಲಿ ಗಂಟಲು ದ್ರವದ ಮಾದರಿಯನ್ನು ಸ್ವಯಂ ಪ್ರೇರಿತನಾಗಿ ನೀಡಿ, ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸಂಜೆ ವೇಳೆಗೆ ದಾಖಲಾದೆ. ರಾತ್ರಿ 10 ಗಂಟೆ ವೇಳೆಗೆ ಪಾಸಿಟಿವ್ ಪತ್ತೆಯಾಯ್ತು. ನಮ್ಮಲ್ಲಿ ಚಿಕಿತ್ಸೆಯಿಲ್ಲ ಎಂದು ಆಸ್ಪತ್ರೆಯವರು ₹ 72 ಸಾವಿರ ಬಿಲ್ ಮಾಡಿ ಡಿಸ್ಚಾರ್ಜ್‌ ಮಾಡಿದರು.

ಕೋವಿಡ್ ಆಸ್ಪತ್ರೆಗೆ ದಾಖಲಾದೆ. ಚಿಕಿತ್ಸೆ ಸರಿ ಹೊಂದಲಿಲ್ಲ. ಜೆಎಸ್‌ಎಸ್‌ ಆಸ್ಪತ್ರೆ ಸೇರಿದೆ. ಆರಂಭದ ನಾಲ್ಕೈದು ದಿನ ಪ್ರಜ್ಞಾಹೀನನಾಗಿದ್ದೆ. ಪ್ರಜ್ಞೆ ಬಂದಾಗ ಏನಾಗುತ್ತಿದೆ ಎಂಬುದೇ ಅರಿವಾಗದಾಗಿತ್ತು. 84 ಕೆ.ಜಿ. ತೂಕವಿದ್ದ ನಾನು 65 ಕೆ.ಜಿ.ಗೆ ಇಳಿದಿದ್ದೆ. ವೈದ್ಯರ ಆರೈಕೆಯಿಂದ ಇದೀಗ ಗುಣಮುಖನಾಗಿರುವೆ. ತೂಕವೂ ಹೆಚ್ಚಿದೆ.

ಸೋಂಕಿನ ಲಕ್ಷಣ ಗೋಚರಿಸುತ್ತಿದ್ದಂತೆ ಪರೀಕ್ಷೆಗೊಳಪಡಬೇಕು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲು ವಿಳಂಬ ಮಾಡಬಾರದು. ಕೋವಿಡ್‌ ರೋಗವನ್ನು ಮುಚ್ಚಿಟ್ಟುಕೊಳ್ಳಬಾರದು. ಒಂದು ವೇಳೆ ಮುಚ್ಚಿಟ್ಟುಕೊಂಡರೇ ಜೀವಕ್ಕೆ ಅಪಾಯವಾಗಲಿದೆ.

ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ನಾನು ಇದೀಗ ಕ್ವಾರಂಟೈನ್‌ನಲ್ಲಿರುವೆ. ಮೂರ್ನಾಲ್ಕು ದಿನದಲ್ಲಿ ಕ್ವಾರಂಟೈನ್ ಅವಧಿಯೂ ಮುಗಿಯಲಿದೆ. ಎಂದಿನಂತೆ ನನ್ನ ಕರ್ತವ್ಯಕ್ಕೆ ಹಾಜರಾಗುವೆ.

ನಿರೂಪಣೆ: ಡಿ.ಬಿ.ನಾಗರಾಜ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು