ಶುಕ್ರವಾರ, ಫೆಬ್ರವರಿ 28, 2020
19 °C
ದೂರು ದಾಖಲಾದ ಮೂರೇ ಗಂಟೆಯಲ್ಲಿ ಕೆ.ಆರ್.ಠಾಣೆ ಸಿಬ್ಬಂದಿ ಕಾರ್ಯಾಚರಣೆ

ಪುಂಡರ ಗುಂಪನ್ನು ಸೆದೆ ಬಡಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದಲ್ಲಿ ಹೆಚ್ಚುತ್ತಿದ್ದ ಪುಂಡಾಟಿಕೆಯನ್ನು ನಿಯಂತ್ರಿಸಲು ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಕೆ.ಆರ್.ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಸುಲಿಗೆ ಮಾಡಿದ್ದ 7 ಮಂದಿ ಪುಂಡರನ್ನು ದೂರು ದಾಖಲಾದ ಕೇವಲ ಮೂರು ಗಂಟೆ ಸಮಯದಲ್ಲೇ ಬಂಧಿಸುವ ಮೂಲಕ ಪುಂಡರ ಗುಂಪುಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಕೃಷ್ಣಮೂರ್ತಿಪುರಂನ ನಿತಿನ್ (27), ಜಯಂತ್ (22), ಇಟ್ಟಿಗೆಗೂಡಿನ ಆಕಾಶ್ (25), ಸರಸ್ವತಿಪುರಂನ ಕೆ.ವಿ.ಮಂಜುನಾಥ್ (20), ಚಂದ್ರು, ಕೊಡಗು ಜಿಲ್ಲೆಯ ಸೋಮವಾರಪೇಟೆಯ ಭರತ್ (23) ಹಾಗೂ ನಂಜನಗೂಡು ತಾಲ್ಲೂಕಿನ ತಾಂಡವಪುರದ ಅಳಿದಿಡ್ಡಿ ಗ್ರಾಮದ ಎಸ್.ಚೇತನ್ (20) ಬಂಧಿತರು.

ಇವರು ಸುಲಿಗೆ ಮಾಡಿದ್ದ ₹4 ಸಾವಿರ ನಗದು, 1 ದ್ವಿಚಕ್ರ ವಾಹನ, 1 ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಸಿದ್ದ 1 ಕಾರು, 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಏನಿದು ಘಟನೆ?

ನಗರದ ಹೃದಯ ಭಾಗವಾದ ನಾರಾಯಣಶಾಸ್ತ್ರಿ ರಸ್ತೆಯ ತ್ರಿಲೋಕ ಬಾರ್ ಸಮೀಪ ಅನಿಲ್ ಎಂಬುವವರನ್ನು ನಿತಿನ್ ಎಂಬಾತ ಸಿಗರೇಟ್‌ಗಾಗಿ ಬೆಂಕಿ ಪೊಟ್ಟಣ ಕೇಳಿದ್ದಾನೆ. ಈ ವೇಳೆ ಉಂಟಾದ ಜಗಳದಿಂದ ನಿತಿನ್‌ ಅನಿಲ್‌ ಹಾಗೂ ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ನಿತಿನ್‌ ತನ್ನ ಜತೆ ಇತರೆ 6 ಮಂದಿಯನ್ನು ಸೇರಿಸಿಕೊಂಡು ಅನಿಲ್ ಚಾಲನೆ ಮಾಡುತ್ತಿದ್ದ ಸ್ಕೂಟರ್‌ಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕಾರಿಗೆ ಹಾನಿಯಾಗಿದ್ದು, ₹50 ಸಾವಿರ ನೀಡಬೇಕು ಎಂದು ಆತನನ್ನು ಸರಸ್ವತಿಪುರಂನ ವಸತಿಗೃಹವೊಂದರಲ್ಲಿ ಕೂಡಿ ಹಾಕಿದ್ದಾರೆ. ನಂತರ, ಇಲ್ಲಿಂದ ತಪ್ಪಿಸಿಕೊಂಡು ಬಂದ ಅನಿಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ಸಂಜೆ 6ಕ್ಕೆ ದೂರು ದಾಖಲಾಗುತ್ತಿದ್ದಂತೆ ಕೆ.ಆರ್.ಠಾಣೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ ರಾತ್ರಿ 9 ಗಂಟೆ ಹೊತ್ತಿಗೆ ಎಲ್ಲ 7 ಮಂದಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಇವರಲ್ಲಿ ಆಕಾಶ್ ಮೇಲೆ ಈಗಾಗಲೇ ನಜರ್‌ಬಾದ್ ಠಾಣೆಯಲ್ಲಿ ರೌಡಿ ಶೀಟರ್‌ ತೆರೆಯಲಾಗಿತ್ತು. ಜತೆಗೆ, ಲಷ್ಕರ್‌ ಠಾಣೆಯಲ್ಲೂ ಈತನ ವಿರುದ್ಧ ಹಲ್ಲೆ ಪ್ರಕರಣಗಳು ದಾಖಲಾಗಿದ್ದವು.

ಕೆ.ಆರ್.ಠಾಣೆ ಇನ್‌ಸ್ಪೆಕ್ಟರ್ ಎಲ್.ಶ್ರೀನಿವಾಸ್ ಅವರು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಎಎಸ್‌ಐ ಬಿ.ಸುರೇಶ್ ಸಿಬ್ಬಂದಿಯಾದ ಅನಿಲ್ ಶಂಕಪಾಲ್, ಮೊಖದ್ದರ್ ಷರೀಫ್, ರಮೇಶ್, ಮಧು, ಶಿವಕುಮಾರಸ್ವಾಮಿ, ಮಣಿಕಂಠ ಪ್ರಸಾದ್ ಕಾರ್ಯಾಚರಣೆ ತಂಡದಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು