ಮೈಸೂರು: ಮಂಜು ಮುಸುಕಿದ ಚಾಮುಂಡಿಬೆಟ್ಟದಲ್ಲಿ ಗುರುವಾರ ದಸರೆಯ ಬೆಳಗಿನ ಕಿರಣಗಳು ಹೊಳೆದವು.
ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೂ ನವರಾತ್ರಿಯ ಸರಳ, ಸಾಂಪ್ರದಾಯಿಕ ಆಚರಣೆಯ ಆರಂಭದ ಕ್ಷಣಗಳಿಗೆ ಬೆಟ್ಟದಲ್ಲಿ ನೆರೆದಿದ್ದ ನೂರಾರು ಗಣ್ಯರು, ಗ್ರಾಮಸ್ಥರು ಸಾಕ್ಷಿಯಾದರು.
ದೇವಸ್ಥಾನದ ಪ್ರಾಂಗಣದಲ್ಲಿ ಬೃಹತ್ ಪೆಂಡಾಲಿನ ಕೆಳಗೆ ರಚಿಸಿದ್ದ ವೇದಿಕೆಯ ಎಡಭಾಗದ ಮಂಟಪದಲ್ಲಿ ಇರಿಸಲಾಗಿದ್ದ ಬೆಳ್ಳಿ ಮಂಟಪದಲ್ಲಿದ್ದ ಚಾಮುಂಡೇಶ್ವರಿ ಮೂರ್ತಿಗೆ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಬೆಳಿಗ್ಗೆ 8.25ಕ್ಕೆ ಪುಷ್ಪ ನಮನ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.
ಊರುಗೋಲಿನ ನೆರವಿನೊಂದಿಗೆ ಉತ್ಸವ ಮೂರ್ತಿಯತ್ತ ನಿಧಾನವಾಗಿ ನಡೆದುಬಂದ ಅವರನ್ನು ಗಣ್ಯರೆಲ್ಲರೂ ಅನುಸರಿಸಿದರು. ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತರು ನೀಡಿದ ಮಂಗಳಾರತಿ ಹಿಡಿದು ಕೃಷ್ಣ ಚಾಮುಂಡೇಶ್ವರಿಗೆ ಬೆಳಗಿದರು. ನಂತರ ಪುಷ್ಪ ನಮನ ಸಲ್ಲಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಪತ್ನಿ ಚೆನ್ನಮ್ಮ ಜೊತೆಯಾದರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು.
ದೀಪಾಲಂಕಾರ ನೋಡಿ ಸಂತೋಷಪಡಿ!
ಕೋವಿಡ್ ಮಾರ್ಗಸೂಚಿ ಅನುಸರಿಸಿ ಉತ್ಸವವನ್ನು ಹಮ್ಮಿಕೊಳ್ಳಲಾಗಿರುವುದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜನರಿಗೆ ಪ್ರವೇಶ ನೀಡಿಲ್ಲ. ಆದರೆ ದೀಪಾಲಂಕಾರ ನೋಡಿ ಜನ ಸಂತೋಷಪಡಬಹುದು ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ ಹೇಳಿದರು.
ಸಂಸದ ಪ್ರತಾಪಸಿಂಹ, ಸಚಿವರಾದ, ವಿ.ಸುನೀಲ್ ಕುಮಾರ್, ಜೊಣ್ಣೆ ಶಶಿಕಲಾ ಜೊಲ್ಲೆ, ಆರ್.ಅಶೋಕ, ಶಿವರಾಮ ಹೆಬ್ಬಾರ್, ಬೈರತಿ ಬಸವರಾಜ, ಬಿ.ಸಿ.ಪಾಟೀಲ, ಡಾ.ಕೆ.ಸುಧಾಕರ, ಟಿ.ನಾರಾಯಣಗೌಡ, ಶಾಸಕರಾದ ಎಲ್.ನಾಗೇಂದ್ರ, ತನ್ವೀರ್ ಸೇಟ್, ಎಸ್.ಎ.ರಾಮದಾಸ್, ಅಡಗೂರು ಎಚ್.ವಿಶ್ವನಾಥ್, ಕೆ.ಮಹದೇವು, ಬಿ.ಹರ್ಷವರ್ಧನ, ಕೆ.ಟಿ.ಶ್ರೀಕಂಠೇಗೌಡ, ಮುನಿರಾಜೇಗೌಡ, ಅರವಿಂದ ಬೆಲ್ಲದ, ಸಿ.ಎಸ್.ಮಂಜುನಾಥ್, ಮೇಯರ್ ಸುನಂದಾ ಫಾಲನೇತ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಇದ್ದರು. ಜಿಲ್ಲಾಧಿಕಾರಿ ಬಗಾದಿ ಗೌತಮ್ ಸ್ವಾಗತಿಸಿದರು.
ಶ್ರೀ ಚಾಮುಂಡೇಶ್ವರಿ ಸ್ತುತಿ
ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಗಾಯಕಿಯರು ಪ್ರಸ್ತುತಪಡಿಸಿದ 'ಶ್ರೀ ಚಾಮುಂಡೇಶ್ವರಿ' ಸ್ತುತಿ ವಾತಾವರಣದಲ್ಲಿ ಭಕ್ತಿ ಭಾವವನ್ನು ಹರಡಿತ್ತು.
ಬಿಗಿಭದ್ರತೆ; ಚಾಮುಂಡಿ ಬೆಟ್ಟದ ತಪ್ಪಲಿನಿಂದ ಗುಡಿಯವರೆಗೂ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.