ಗುರುವಾರ , ಜೂನ್ 30, 2022
25 °C

ರಾಜಕಾಲುವೆ ಮೇಲೆ ಸಾ.ರಾ.ಚೌಲ್ಟ್ರಿ: ರೋಹಿಣಿ ಸಿಂಧೂರಿ ಭೂ ಮಾಫಿಯಾ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಭೂ ಮಾಫಿಯಾದಲ್ಲಿ ಭಾಗಿಯಾಗಿರುವವರೆಲ್ಲಾ ಸೇರಿ ತಮ್ಮನ್ನು ಮೈಸೂರಿನಿಂದ ವರ್ಗಾವಣೆ ಮಾಡಿಸಿದರು ಎಂದಿರುವ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ, ‘ಶಾಸಕ ಸಾ.ರಾ.ಮಹೇಶ್‌ ಅವರು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಮಾಫಿಯಾದಲ್ಲಿ ತೊಡಗಿದ್ದಾರೆ’ ಎಂದು ನೇರವಾಗಿ ಆರೋಪಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಮೈಸೂರು ನಗರದ ದಟ್ಟಗಳ್ಳಿಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಸಾ.ರಾ.ಚೌಲ್ಟ್ರಿ (ಕಲ್ಯಾಣ ಮಂಟಪ) ನಿರ್ಮಿಸಲಾಗಿದೆ. ಅದರ ಸಮೀಕ್ಷೆ ಕೂಡ ನಡೆಸಲಾಗುತ್ತಿದೆ. ಕೋವಿಡ್‌ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿದ್ದರಿಂದ ಅಕ್ರಮಗಳ ವಿಚಾರವಾಗಿ ಕ್ರಮ ಜರುಗಿಸಲು ಸಮಯಾವಕಾಶ ಸಿಗಲಿಲ್ಲ’ ಎಂದು ಹೇಳಿದರು.

‘ಸಾ.ರಾ.ಮಹೇಶ್‌ ಜೊತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಎಚ್‌.ವಿ.ರಾಜೀವ್‌ ಕೂಡ ಶಾಮೀಲಾಗಿದ್ದಾರೆ. ರಾಜಕಾರಣಿಗಳ ಜೊತೆ ಐಎಎಸ್ ಅಧಿಕಾರಿ ಶಿಲ್ಪಾನಾಗ್‌ ಕೂಡ ಕೈಜೋಡಿಸಿ ರಾಜೀನಾಮೆ ನಾಟಕವಾಡಿದರು’ ಎಂದು ಅವರು ಆಪಾದಿಸಿದರು.

ಭೂ ಒತ್ತುವರಿ, ಅಕ್ರಮ ಭೂ ಪರಿವರ್ತನೆ, ಒಂದೇ ಜಮೀನಿಗೆ ಎರಡು ಬಾರಿ ಪರಿಹಾರ, ಹರಾಜಿಗೆ ಸುಳ್ಳು ದಾಖಲೆ ಸೃಷ್ಟಿ ವಿಚಾರವಾಗಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನೀಡಿರುವ ನೋಟಿಸ್‌ಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಬಿಡುಗಡೆ ಮಾಡಿರುವ ಸಿಂಧೂರಿ, ‘ದಾಖಲೆಗಳನ್ನು ಪರಿಶೀಲಿಸಿದ್ದು, ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಕಂಡು ಬಂದಿದೆ. ಮಾಹಿತಿ ಪಡೆದು ಕ್ರಮಕ್ಕೆ ಸೂಚಿಸಿದ್ದೇನೆ’ ಎಂದರು.

ಇದನ್ನೂ ಓದಿ: 

‘ಸಾ.ರಾ.ಮಹೇಶ್‌ ಅವರು ನನ್ನನ್ನು ಮಾಡೆಲ್‌ ಎಂದು ಕರೆದು ವೈಯಕ್ತಿಕ ಟೀಕೆಗಿಳಿದಿದ್ದಾರೆ. ವರ್ಗಾವಣೆ ಮಾಡಿಸಿದ ಮೇಲೂ ನನ್ನ ಮೇಲೆ ಮುಗಿಬೀಳುತ್ತಿದ್ದಾರೆ. ತನಿಖೆ ನಡೆದರೆ ಅಕ್ರಮ ವ್ಯವಹಾರಗಳು ಬಯಲಾಗಲಿವೆ ಎಂಬ ಭಯವೇ ಇದಕ್ಕೆ ಕಾರಣ. ಸಾ.ರಾ.ಮಹೇಶ್‌ ಹಾಗೂ ರಾಜೀವ್‌ ವಿರುದ್ಧ ತನಿಖೆ ನಡೆಯಲಿ’ ಎಂದು ಆಗ್ರಹಿಸಿದರು.


ಸಾ.ರಾ.ಮಹೇಶ್‌

ವರ್ಗಾವಣೆ ಹಿಂದಿನ ದಿನ ನೋಟಿಸ್‌: ಮೈಸೂರು ತಾಲ್ಲೂಕು ಲಿಂಗಾಂಬುದಿ ಗ್ರಾಮದ ಸರ್ವೇ ನಂ 124/2ರಲ್ಲಿ 1.39 ಎಕರೆ ವಿಸ್ತೀರ್ಣದ ಜಮೀನನ್ನು ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಗೊಳಿಸಿ ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಸೂಚನೆ ನೀಡಿ, ಮುಡಾ ಆಯುಕ್ತರಿಗೆ ಜೂನ್‌ 4ರಂದು (ವರ್ಗಾವಣೆಗೂ ಹಿಂದಿನ ದಿನ) ಸಿಂಧೂರಿ ಪತ್ರ ಬರೆದಿದ್ದಾರೆ.

ಮುಡಾದಲ್ಲಿ ದಾಖಲೆ ಪರಿಶೀಲಿಸಿದಾಗ ಈ ಜಮೀನನ್ನು ಕೃಷಿ ಉದ್ದೇಶಕ್ಕೆ ಮೀಸಲಿಡಲಾಗಿದೆ. ಹೀಗಾಗಿ, ತಪ್ಪು ವರದಿ ಸಲ್ಲಿಸಿದವರ ವಿರುದ್ಧ ಶಿಸ್ತು ಕ್ರಮಕೈಗೊಂಡು, ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಮೈಸೂರು ತಾಲ್ಲೂಕು ದಟ್ಟಗಳ್ಳಿ ಗ್ರಾಮದ ಸರ್ವೇ ನಂ.123ರ 5.02 ಎಕರೆ ವಿಸ್ತೀರ್ಣದ ಗೋಮಾಳವನ್ನು ಹರಾಜಿನ ಮುಖಾಂತರ ಪಡೆದಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿರುವ ಆರೋಪ ಸಂಬಂಧ ಪರಿಶೀಲಿಸಿ ವಾರದಲ್ಲಿ ವರದಿ ನೀಡುವಂತೆ ಉಪವಿಭಾಗಾಧಿಕಾರಿಗೆ ಪತ್ರ ಬರೆದಿದ್ದಾರೆ.

ಲಿಂಗಾಂಬುದಿ ಕೆರೆಯ ಬಳಿ 2 ಎಕರೆ ಜಾಗದಲ್ಲಿ ರೆಸಾರ್ಟ್‌ ನಿರ್ಮಿಸಲು ಪ್ರಯತ್ನ ನಡೆಸುತ್ತಿರುವ ಬಗ್ಗೆ ದೂರು ಬಂದಿದ್ದು, ಆ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಡಾ ಆಯುಕ್ತರಿಗೆ ಸೂಚನೆ ನೀಡಿದ್ದಾಗಿ ಹೇಳಿದ್ದಾರೆ.

‘ಕೋವಿಡ್‌ ಕೇಂದ್ರದಲ್ಲೂ ತಲೆ ಹಾಕಿದರು’

‘ಮೈಸೂರು ನಗರದಲ್ಲಿನ ಖಾಸಗಿ ಕೋವಿಡ್‌ ಕೇರ್‌ ಕೇಂದ್ರದ ವಿಚಾರದಲ್ಲೂ ಸಾ.ರಾ.ಮಹೇಶ್‌ ತಲೆಹಾಕಿದರು. ಇದರಲ್ಲಿ ಅವರ ಹಿತಾಸಕ್ತಿ ಏನಿತ್ತು? ಅವರೊಂದಿಗೆ ಶಿಲ್ಪಾನಾಗ್‌ ಕೂಡ ಕೈಜೋಡಿಸಿದ್ದರು. ಹೀಗಾಗಿ, ಪಾಲಿಕೆ ಆಯುಕ್ತರಾಗಿದ್ದಾಗ ಶಿಲ್ಪಾನಾಗ್‌, ಸರ್ಕಾರಿ ಕೋವಿಡ್‌ ಕೇರ್ ಕೇಂದ್ರ ತೆರೆಯಲಿಲ್ಲ. ಖಾಸಗಿ ಕೇಂದ್ರಗಳಲ್ಲಿ ಸೋಂಕಿತರಿಗೆ ದುಬಾರಿ ಶುಲ್ಕ ವಿಧಿಸಲಾಗುತ್ತಿತ್ತು. ನಾನೇ ಖುದ್ದಾಗಿ ಅವುಗಳನ್ನು ಮುಚ್ಚಿಸಿ, ತನಿಖೆಗೆ ಆದೇಶಿಸಿದ್ದೆ’ ಎಂದು ರೋಹಿಣಿ ಸಿಂಧೂರಿ ಹೇಳಿದರು.

ಶಿಲ್ಪಾನಾಗ್‌ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು

ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾನಾಗ್‌ ವಿರುದ್ಧ ಸಿಂಧೂರಿ, ತಮ್ಮ ವರ್ಗಾವಣೆಯಾದ ಮಾರನೇ ದಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

‘ಶಿಲ್ಪಾನಾಗ್‌ ಅನುಚಿತವಾಗಿ, ಅಶಿಸ್ತಿನಿಂದ ವರ್ತಿಸಿದ್ದಾರೆ. ಪತ್ರಿಕಾಗೋಷ್ಠಿ ಕರೆದು ರಾಜೀನಾಮೆಯ ನಾಟಕವಾಡಿದ್ದಾರೆ. ನನ್ನ ವಿರುದ್ಧ ಕಿರುಕುಳ ಆರೋಪ ಮಾಡಿದ್ದು, ಅದು ಸಂಪೂರ್ಣ ಸುಳ್ಳು. ಅವರ ಉದ್ದೇಶ ನನ್ನನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿಸುವುದೇ ಆಗಿತ್ತು. ಅದರಲ್ಲಿ ಯಶಸ್ವಿಯಾಗಿರುವುದಾಗಿ ಮಾಧ್ಯಮವರ ಮುಂದೆ ನಂತರದ ದಿನಗಳಲ್ಲಿ ಹೇಳಿಕೊಂಡಿದ್ದಾರೆ. ಐಎಎಸ್‌ ಅಧಿಕಾರಿಯಾಗಿ ಈ ರೀತಿ ನಡೆದುಕೊಳ್ಳಬಾರದು. ಅವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ದಾಖಲೆ ಬಿಡುಗಡೆ ಮಾಡಲಿ: ರಾಜೀವ್‌

‘ಸಿಂಧೂರಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದಲ್ಲ’ ಎಂದು ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌ ಪ್ರತಿಕ್ರಿಯಿಸಿದರು.

‌‘ಮುಡಾ ಅಧ್ಯಕ್ಷನಾಗಿ ಕೆಲವೇ ತಿಂಗಳಾಗಿದೆ. ಯಾವುದೋ ಕಾಲದಲ್ಲಿ ಅಕ್ರಮ ನಡೆದಿದ್ದರೆ ನಾನು ಜವಾಬ್ದಾರನಲ್ಲ. ನನ್ನ ಕಾಲದಲ್ಲಿ ಏನಾದರೂ ನಡೆದಿದ್ದರೆ ಮಾತನಾಡಲಿ. ಶಾಮೀಲಾಗಿದ್ದರೆ ಯಾವುದೇ ತನಿಖೆಗೆ ಸಿದ್ಧ’ ಎಂದು ತಿರುಗೇಟು ನೀಡಿದರು.

ಆರೋಪ ಸಾಬೀತಾದರೆ ರಾಜಕೀಯ ತೊರೆಯುವೆ: ಸಾ.ರಾ. ಮಹೇಶ್

‘ನನ್ನ ಪತ್ನಿ ಹೆಸರಿನಲ್ಲಿರುವ ಸಾ.ರಾ.ಚೌಲ್ಟ್ರಿ, ರಾಜಕಾಲುವೆ ಮೇಲಿರುವುದು ಸಾಬೀತಾದರೆ ಚೌಲ್ಟ್ರಿಯನ್ನು ಸಾರ್ವಜನಿಕ ಉದ್ದೇಶಕ್ಕೆ ನೀಡಿ ರಾಜಕೀಯ ತೊರೆಯುವೆ. ಸಾಬೀತು ಆಗದಿದ್ದರೆ ಸಿಂಧೂರಿ ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿ ಅಡುಗೆ ಮಾಡಿಕೊಂಡಿರಲಿ’ ಎಂದು ಸಾ.ರಾ.ಮಹೇಶ್‌ ಸವಾಲು ಹಾಕಿದರು.

‘ಈ ಸಂಬಂಧ ಗುರುವಾರ ಬೆಳಿಗ್ಗೆ 10.30ಕ್ಕೆ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಧರಣಿ ಕೂರಲಿದ್ದೇನೆ. ಪೊಲೀಸ್‌ ಕಮೀಷನರ್‌ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಈ ಬಗ್ಗೆ ತನಿಖೆಯಾಗಲಿ’ ಎಂದು ಆಗ್ರಹಿಸಿದರು.

ಖಾಸಗಿ ಕೋವಿಡ್‌ ಕೇರ್‌ ವಿಚಾರವಾಗಿ ಪ್ರತಿಕ್ರಿಯಿಸಿ, ‘ಎಲ್ಲಿ ಅನ್ಯಾಯವಾಗುತ್ತೋ ಅಲ್ಲಿ ದನಿ ಎತ್ತುವುದು ಶಾಸಕನಾಗಿ ನನ್ನ ಕರ್ತವ್ಯ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು