ಸೋಮವಾರ, ಜೂನ್ 21, 2021
21 °C
ಹಣದ ಜತೆಗೆ ಮದ್ಯದ ಬಾಟಲಿಗಳನ್ನೂ ಹೊತ್ತೊಯ್ದ ಕಳ್ಳರು

ಪೊಲೀಸ್ ಠಾಣೆ ಸಮೀಪದಲ್ಲೇ ಸರಣಿ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಕೆ.ಆರ್.ಪೊಲೀಸ್ ಠಾಣೆಯ ಸಮೀಪದಲ್ಲೇ ಅಂಗಡಿಗಳ ಸರಣಿ ಕಳ್ಳತನ ನಡೆದಿದೆ. ಅಗ್ರಹಾರ ವೃತ್ತದಲ್ಲಿ ಮಂಗಳವಾರ ಮಧ್ಯರಾತ್ರಿ 2 ಅಂಗಡಿಗಳಲ್ಲಿ ಕಳ್ಳತನ ನಡೆಸಿರುವ ಕಳ್ಳರು, ಮತ್ತೆರಡು ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ.

ಎಂ.ಜಿ.ರಸ್ತೆಯ ಅಕ್ಷಯ ಬಾರ್ ಮತ್ತು ಸಮೀಪದ ರಾಮಣ್ಣ ಅಂಡ್ ಸನ್ಸ್ ಅಂಗಡಿಯ ಬೀಗಗಳನ್ನು ಒಡೆದು ಒಳನುಗ್ಗಿರುವ ಕಳ್ಳರು ₹ 24 ಸಾವಿರ ಹಣದ ಜತೆಗೆ ಮದ್ಯದ ಬಾಟಲಿಗಳನ್ನೂ ಹೊತ್ತೊಯ್ದಿದ್ದಾರೆ. ಸಿಗರೇಟ್‌ ಪ್ಯಾಕ್‌ಗಳನ್ನೂ ಕಳವು ಮಾಡಿದ್ದಾರೆ.

ಆ ಬಳಿಕ ಡೈಲಿ ಮಾರ್ಟ್ ಹಾಗೂ ಉಡುಪಿ ಉಪಾಹಾರ್ ಮಂದಿರಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಆದರೆ, ಇವುಗಳ ಬಾಗಿಲುಗಳನ್ನು ಮೀಟಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾ ತಿರುಗಿಸಿದ ಕಳ್ಳರು

ಸಿಸಿಟಿವಿ ಕ್ಯಾಮೆರಾಗಳಲ್ಲಿ ಚಹರೆ ಸೆರೆಯಾಗಬಹುದು ಎಂಬ ಕಾರಣಕ್ಕೆ ಕಳ್ಳರು ಸುತ್ತಮುತ್ತ ಇದ್ದ ಹಲವು ಸಿಸಿಟಿವಿ ಕ್ಯಾಮೆರಾಗಳನ್ನು ಬೇರೆಡೆ ತಿರುಗಿಸಿದ್ದಾರೆ. ಆದಾಗ್ಯೂ, ಕೆಲವು ಸಿಸಿಟಿವಿ ಕ್ಯಾಮೆರಾಗಳಲ್ಲಿ ಚಹರೆ ಸೆರೆಯಾಗಿದೆ. ಮಂಕಿಕ್ಯಾಪ್‌ ಹಾಗೂ ಕೈಗವಸುಗಳನ್ನು ಧರಿಸಿರುವುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್‌ಸ್ಪೆಕ್ಟರ್ ಶ್ರೀನಿವಾಸ್‌ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ಬೈಕ್‌ಗೆ ಗುದ್ದಿದ ಲಾರಿ; ವ್ಯಕ್ತಿ ಸಾವು

ಮೈಸೂರು: ಇಲ್ಲಿನ ಮೈಸೂರು– ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಚಲಿಸುತ್ತಿದ್ದ ಬೈಕ್‌ಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ಕಡಕೊಳದ ನಿವಾಸಿ ನಂಜಪ್ಪ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇವರು ನಂಜನಗೂಡು ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಮೈಸೂರು ದಕ್ಷಿಣ ಠಾಣೆಯಲ್ಲಿ ದಾಖಲಾಗಿದೆ.

ಗೃಹಿಣಿ ಆತ್ಮಹತ್ಯೆ

ಮೈಸೂರು: ಇಲ್ಲಿನ ಮಹದೇವಪುರದ ‘ಸಿ’ ಬ್ಲಾಕ್‌ ನಿವಾಸಿ ಎನ್.ಹೇಮಾವತಿ (36) ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು 11 ವರ್ಷಗಳ ಹಿಂದೆ ಚಂದ್ರಶೇಖರ ಎಂಬುವವರನ್ನು ವಿವಾಹವಾಗಿದ್ದರು. ಪತಿ ನಿತ್ಯವೂ ಮದ್ಯ ಸೇವಿಸಿ ಕಿರುಕುಳ ನೀಡುತ್ತಿದ್ದ. ಬೆಳಿಗ್ಗೆಯೇ ಮದ್ಯಸೇವಿಸಿ ಗಲಾಟೆ ಮಾಡಿದ್ದರಿಂದ ಮನನೊಂದ ಹೇಮಾವತಿ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಇವರ ತಂದೆ ನಟರಾಜ್ ದೂರು ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವಿದ್ಯಾರಣ್ಯಾಪುರಂ ಠಾಣೆಯಲ್ಲಿ ದಾಖಲಾಗಿದೆ.

ವ್ಯಕ್ತಿ ಆತ್ಮಹತ್ಯೆ

ಮೈಸೂರು: ಇಲ್ಲಿನ ಜೆ.ಪಿ.ನಗರದ 3ನೇ ಕ್ರಾಸ್ ನಿವಾಸಿ ಮಂಜುನಾಥಸ್ವಾಮಿ (52) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವ್ಯಾಪಾರಿಯಾಗಿದ್ದ ಇವರು ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. ಶಸ್ತ್ರಚಿಕಿತ್ಸೆಯಿಲ್ಲದೆ ಗುಣಪಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರಿಂದ ಮನನೊಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರ ಶವ ‍ಪತ್ತೆ

ಮೈಸೂರು: ನಗರದಲ್ಲಿ ಎರಡು ಕಡೆ ಗುರುತು ಸಿಗದ ಇಬ್ಬರ ಶವಗಳು ಪತ್ತೆಯಾಗಿವೆ.

ಇಲ್ಲಿನ ಲಿಂಗಾಂಬುದಿ ಕೆರೆಯಲ್ಲಿ 30ರಿಂದ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಶವವು ಕೊಳೆತ ಸ್ಥಿತಿಯಲ್ಲಿದೆ. ಪ್ರಕರಣ ಕುವೆಂಪುನಗರ ಠಾಣೆಯಲ್ಲಿ ದಾಖಲಾಗಿದೆ.

ಇಲ್ಲಿನ ಬೋಟಿ ಬಜಾರ್‌ನ ಆನೆ ಸಾರೋಟು ರಸ್ತೆಯಲ್ಲಿ 50ರಿಂದ 55 ವರ್ಷ ವಯಸ್ಸಿನ ಪುರುಷನ ಶವ ಪತ್ತೆಯಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ದೇವರಾಜ ಠಾಣೆಯಲ್ಲಿ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.