ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಾಲು ಸಾಧಕ ತಾಯೂರು ಸಿದ್ಧರಾಜು

ತೆರೆಮರೆಗೆ ಸರಿಯುತ್ತಿರುವ ಜನಪದ ಕಲೆ
Last Updated 7 ಮೇ 2019, 20:02 IST
ಅಕ್ಷರ ಗಾತ್ರ

ನಂಜನಗೂಡು: ತೆರೆಮರೆಗೆ ಸರಿಯುತ್ತಿರುವ ಜನಪದ ಕಲೆಗಳಲ್ಲಿ ಮರಗಾಲು ಸಹ ಒಂದು. ಇಂತಹ ಒಂದು ಸಾಹಸಮಯ ವಿಶಿಷ್ಟ ಕಲೆಯ ಸಾಧಕರು ಈ ಹೊತ್ತಿನಲ್ಲಿ ಅಪರೂಪದಲ್ಲಿ ಅಪರೂಪ. ಈ ಕಲೆಯ ಅಸಾಮಾನ್ಯ ಸಾಧಕ ತಾಲ್ಲೂಕಿನ ತಾಯೂರು ಗ್ರಾಮದ ಸಿದ್ಧರಾಜು.

ಕಳೆದ 10 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಇವರನ್ನು ಕಾಣದವರೇ ಇಲ್ಲ ಎನಿಸುವಷ್ಟರ ಮಟ್ಟಿಗೆ ಇವರ ಸಾಧನೆ ಇದೆ. 13 ಅಡಿ ಎತ್ತರದ ಮರಗಾಲಿನ ಮೇಲೆ ಸಮತೋಲನ ಸಾಧಿಸಿ ಹೆಜ್ಜೆ ಇಕ್ಕುತ್ತ ಇವರು ನೆರೆದಿದ್ದವರ ಗಮನವೆಲ್ಲವನ್ನೂ ತಮ್ಮ ಕಡೆಗೆ ಸೂಜಿಗಲ್ಲಿನಂತೆ ಸೆಳೆದುಬಿಡುತ್ತಾರೆ.

ಇವರ ಹಿರಿಯರು ದೊಣ್ಣೆವರಸೆ ಕಲೆಯಲ್ಲಿ ನಿಪುಣರಾಗಿದ್ದರು. ತಂದೆ 1 ಅಡಿ ಎತ್ತರದ ಮರಗಾಲನ್ನು ಕಟ್ಟಿಕೊಂಡು ದೊಣ್ಣೆವರಸೆ ಮಾಡುತ್ತಿದ್ದರು. ಇದರಿಂದ ಸ್ಪೂರ್ತಿಗೊಂಡ ಇವರು ಆರಂಭದಲ್ಲಿ 4 ಅಡಿ ಎತ್ತರದ ಮರಗಾಲನ್ನು ಕಟ್ಟಿಕೊಂಡು ಅಭ್ಯಾಸನಿರತರಾದರು. ಸತತ ಅಭ್ಯಾಸದಿಂದ ಒಂದೊಂದೇ ಅಡಿ ಎತ್ತರದ ಮರಗಾಲಿನಲ್ಲಿ ನಡೆಯುತ್ತ ಇದೀಗ 13 ಅಡಿ ಎತ್ತರದ ಮರಗಾಲನ್ನು ಕಟ್ಟಿಕೊಂಡು ನಡೆಯುವಂತಾಗಿದ್ದಾರೆ. ಇವರ ಸಾಧನೆಯ ಓಘ ಇನ್ನೂ ನಿಂತಿಲ್ಲ.‌

ಹಬ್ಬ, ಜಾತ್ರೆಗಳಲ್ಲಿ ಮರಗಾಲನ್ನು ಕಟ್ಟಿಕೊಂಡು ಓಡಾಡುವುದು ದೊಡ್ಡದ್ದಲ್ಲ. ಆದರೆ, ದಸರೆಯಂತಹ ಮೆರವಣಿಗೆಯಲ್ಲಿ ಹೆಜ್ಜೆ ಇಕ್ಕುವುದು ನಿಜಕ್ಕೂ ದೊಡ್ಡ ಸಾಧನೆ. ಅದರಲ್ಲೂ 5 ಕಿ.ಮೀ ದೂರದವರೆಗೆ ಮೆರವಣಿಗೆಯಲ್ಲಿ ಸಾಮಾನ್ಯವಾಗಿ ನಡೆದು ಹೋಗುವುದೇ ಕಷ್ಟ. ಇನ್ನು 13 ಅಡಿ ಎತ್ತರದ ಮರಗಾಲಿನಲ್ಲಿ ನಡೆಯಬೇಕು ಎಂದರೆ ಅದಕ್ಕ ಎಂಟೆದೆಯೇ ಬೇಕು. ಇದಕ್ಕೆ ಇವರ ನಿರಂತರವಾದ ಅಭ್ಯಾಸ ಕಾರಣ.

‘ಮರಗಾಲು ಕಲೆ ಕಲಿಯಲು ತಂದೆಯೇ ನನಗೆ ಸ್ಪೂರ್ತಿ. ಮರಗಾಲು ಕಲೆ ದೈಹಿಕ ಸಾಮರ್ಥ್ಯ, ಸಮತೋಲನ ಬೇಡುವ ಕ್ಲಿಷ್ಟಕರ ಕಲೆ. ಕಲೆಯನ್ನು ಸಿದ್ದಿಸಿಕೊಳ್ಳಲು ನಿಯಮಿತ ಅಭ್ಯಾಸ ಅತ್ಯಗತ್ಯ. ಮರಗಾಲನ್ನು ಕಡಿಮೆ ಭಾರ ಹೊಂದಿರುವ ತೆಳ್ಳನೆಯ ದೊದಿ ಮರ ಹುಡುಕಿ ತಯಾರಿಸಿಕೊಳ್ಳಬೇಕು. ನಮ್ಮ ಭಾಗದಲ್ಲಿ ಜನ ಮೆಚ್ಚುಗೆ ಗಳಿಸಿರುವ ವಿಶಿಷ್ಟ, ಅಪರೂಪದ ಕಲೆಯನ್ನು ಮುಂದಿನ ತಲೆಮಾರಿಗೂ ಕಲಿಸುವ ಇಚ್ಛೆ ಹೊಂದಿದ್ದೇನೆ. ಹೆಚ್ಚಿನ ಸಂಖ್ಯೆಯ ಯುವಕರು ಈ ಕಲೆಯನ್ನು ಕಲಿಯುವ ಆಸಕ್ತಿ ತೋರುತ್ತಿಲ್ಲ’ ಎಂದು ಅವರು ಹೇಳುತ್ತಾರೆ. ಸದ್ಯ, 15 ವರ್ಷದ ತಮ್ಮ ಪುತ್ರ ಶರತ್ ಅವರಿಗೆ ಈ ಮರಗಾಲು ಕಲೆಯನ್ನು ಇವರು ಕಲಿಸುತ್ತಿದ್ದಾರೆ.

‘ಮೈಸೂರು ದಸರಾ ಮೆರವಣಿಗೆಯಲ್ಲಿ ಶ್ರೀಸಾಮಾನ್ಯ, ಈಶ್ವರ, ಅರ್ಧನಾರೀಶ್ವರ, ಹನುಮಂತ, ರಾವಣ, ವೀರಭದ್ರನ ವೇಷ ಧರಿಸಿ ಜನರನ್ನು ರಂಜಿಸಿದ್ದೇನೆ. ಪ್ರತಿ ಬಾರಿ ಪಾತ್ರಗಳಿಗೆ ತಕ್ಕಂತೆ 13 ಅಡಿ ಎತ್ತರದ ವೇಷಭೂಷಣಕ್ಕೆ ₹ 10ರಿಂದ 15 ಸಾವಿರ ಖರ್ಚಾಗುತ್ತದೆ. ಮೈಸೂರು ದಸರಾ, ಸುತ್ತೂರು ಜಾತ್ರೆಗಳಿಗೆ ತಪ್ಪದೆ ಆಹ್ವಾನ ನೀಡುತ್ತಾರೆ. ಪ್ರದರ್ಶನದಿಂದ ದೊರೆಯುವ ಸಂಭಾವನೆಯಿಂದ ಜೀವನ ನಿರ್ವಹಣೆ ಸಾಧ್ಯವಿಲ್ಲ. ಕಲೆ ನನ್ನ ಮನ ಸಂತೋಷಕ್ಕಾಗಿ, ಈಶ್ವರನ ವೇಷ ಹಾಗೂ ವೀರಭದ್ರನ ವೇಷಕ್ಕಾಗಿ ದಸರಾ ಮೆರವಣಿಗೆಯಲ್ಲಿ ಕ್ರಮವಾಗಿ 2ನೇ ಹಾಗೂ 3 ನೇ ಬಹುಮಾನ ಪಡೆದಿದ್ದೇನೆ’ ಎಂದು ಇವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT