ಸೋಮವಾರ, ಸೆಪ್ಟೆಂಬರ್ 26, 2022
20 °C

ಸಿದ್ದರಾಮಯ್ಯ ಅಮೃತ ಮಹೋತ್ಸವ ‌ಬಿಜೆಪಿಯವರಲ್ಲಿ ತಲ್ಲಣ ಮೂಡಿಸಿದೆ: ಮಹದೇವಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ' ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಯಶಸ್ಸಿನಿಂದ ಬಿಜೆಪಿಯವರಿಗೆ ಉರಿ ಶುರುವಾಗಿದೆ. ಆ ಪಕ್ಷದ ಒಳಗಡೆ ತಲ್ಲಣಗಳೇ ಆರಂಭವಾಗಿವೆ' ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಇಲ್ಲಿ‌ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, 'ನಮ್ಮ ನಿರೀಕ್ಷೆಗೂ ಮೀರಿ ಕಾರ್ಯಕ್ರಮ ಯಶಸ್ವಿಯಾಗಿದೆ. ಹಣ ಕೊಟ್ಟರೂ ಅಷ್ಟು ಜನರನ್ನು ಸೇರಿಸಲು ಸಾಧ್ಯವಾಗುವುದಿಲ್ಲ. ದುಡ್ಡು ಕೊಟ್ಟು ಜನ ಕರೆಸಿದರೆ ಅರ್ಧ ಗಂಟೆಯಲ್ಲಿ ಅವರು ವಾಪಸ್ ಹೋಗುತ್ತಾರೆ. ನಮ್ಮ ಕಾರ್ಯಕ್ರಮಕ್ಕೆ ಜನರು ತಾವಾಗಿಯೇ ಬಂದರು. 15 ಲಕ್ಷಕ್ಕೂ ಹೆಚ್ಚು ಜನರು ಯಾವುದೇ ನಿರೀಕ್ಷೆ ಇಲ್ಲದೆ ಭಾಗವಹಿಸಿದರು' ಎಂದರು.

'ಅದೊಂದು ಚಾರಿತ್ರಿಕ ಕಾರ್ಯಕ್ರಮ. ಅದರ ಯಶಸ್ಸಿನಿಂದ ಕಾಂಗ್ರೆಸ್ ಮೈಮರೆಯಬಾರದು. ಎಲ್ಲರೂ ಒಗ್ಗಟ್ಟಿನಿಂದ ಮುಂಬರುವ ಚುನಾವಣೆಗೆ ಸಜ್ಜಾಗಬೇಕು' ಎಂದರು.

'ಬಿಜೆಪಿಯವರು ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಕಾರ್ಯಕ್ರಮದ ಬಗ್ಗೆ ಟೀಕೆ ಮಾಡುತ್ತಿದ್ದಾರೆ' ಎಂದು ಟೀಕಿಸಿದರು.

'ಸ್ವಾತಂತ್ರ್ಯದ ಆಶಯಗಳ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ. ಅವರಿಗೆ ಬೇಕಾಗಿರುವುದು ಸರ್ವಾಧಿಕಾರತ್ವ ಮಾತ್ರ. ಒಂದು ಧರ್ಮ, ಒಂದೇ ಭಾಷೆ ಹಾಗೂ ಒಬ್ಬರದ್ದೇ ಆಡಳಿತ ಎಂಬುದು ಪ್ರಧಾನಿ ನರೇಂದ್ರ ಮೋದಿ ನಿಲುವು. ಇಂಥವರಿಂದ ಸ್ವಾತಂತ್ರ್ಯದ ಆಶಯ ಈಡೇರಲು ಸಾಧ್ಯವಿಲ್ಲ' ಎಂದು ದೂರಿದರು.

'ರಾಷ್ಟ್ರಧ್ವಜ ತಯಾರಿಕೆಗೆ ತನ್ನದೆ ಆದ ನಿಯಮ ಹಾಗೂ ಕ್ರಮ ಇದೆ. ಅದನ್ನೆಲ್ಲಾ ಮುರಿದು ಬಿಜೆಪಿಯವರು ಬಾವುಟಕ್ಕೆ ಅವಮಾನ ಮಾಡುತ್ತಿದ್ದಾರೆ' ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು