ಬುಧವಾರ, ಜೂನ್ 3, 2020
27 °C

ಯಪ್ಪಾ.. ಏನಿದು ಸೌಂಡು!

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಅಗ್ರಹಾರದ ವಿಶಾಲಕ್ಷಮ್ಮ ದಡಬಡನೇ ಎದ್ದು ಮನೆಯಿಂದ ಹೊರ ಬಂದರು. ಆಗ ರಾತ್ರಿ 11.30 ಆಗಿತ್ತು. ಗಾಬರಿ, ಆತಂಕ ಅವರ ಮುಖದಲ್ಲಿತ್ತು. ಇದಕ್ಕೂ ಸ್ವಲ್ಪ ಹೊತ್ತು ಮುಂಚೆ ಕಿವಿಗಡಚಿಕ್ಕುವ ಸದ್ದಿನೊಂದಿಗೆ ದ್ವಿಚಕ್ರ ವಾಹನವೊಂದು ರಸ್ತೆಯಲ್ಲಿ ಹೋಗಿತ್ತು. ಇದರ ಸದ್ದಿಗೆ ನಿಲ್ಲಿಸಿದ್ದ ಕಾರುಗಳ ಸೈರನ್‌ಗಳು ಮೊಳಗಿದ್ದವು. ನಾಯಿಗಳು ವಿಚಿತ್ರವಾಗಿ ಬೊಗಳಲಾರಂಭಿಸಿದವು. ಇದರಿಂದ ಗಾಬರಿಗೊಂಡ 70 ವರ್ಷ ವಯಸ್ಸಿನ ವಿಶಾಲಕ್ಷಮ್ಮ ಭೂಕಂಪ ಆಯಿತೋ ಏನೋ ಎಂದು ಹೊರಗೆ ಓಡಿ ಬಂದಿದ್ದರು.

ಇದೇ ರೀತಿಯ ಅವಸ್ಥೆ ನಗರದ ಹಲವು ಭಾಗದ ನಾಗರಿಕರದ್ದಾಗಿದೆ. ಸೈಲೆನ್ಸರ್‌ಗಳನ್ನು ಮಾರ್ಪಾಡಿಸಿಕೊಂಡು ದೊಡ್ಡ ಶಬ್ದ ಬರುವ ಹಾಗೆ ಮಾಡಿಕೊಂಡು ಬೈಕ್ ಚಾಲನೆ ಮಾಡುವುದು ಯುವಕರ ಪರಿಪಾಠವಾಗಿಬಿಟ್ಟಿದೆ. ವಿಶೇಷವಾಗಿ ಹುಡುಗಿಯರನ್ನು ಮೆಚ್ಚಿಸುವುದಕ್ಕೋ ಏನೋ ಹುಡುಗಿಯರ ಮನೆ ಹತ್ತಿರ ಬಂದಾಗ ಒಂದು ದೊಡ್ಡ ಶಬ್ದ ಬರುವ ಹಾಗೆ ಮಾಡಿ ಹೋಗಿ ಬಿಡುತ್ತಾರೆ. ಆದರೆ, ಇವರ ಆಟಾಟೋಪ ಸಾರ್ವಜನಿಕರಿಗೆ ಎಲ್ಲಿಲ್ಲದ ಕಿರಿಕಿರಿಯನ್ನು ತಂದೊಡ್ಡಿದೆ.

ಆಸ್ಪತ್ರೆಗಳ ಬಳಿಯಂತೂ ಇಂಥವರ ಕಾಟದಿಂದ ರೋಗಿಗಳು ಹೈರಾಣಾಗಿದ್ದಾರೆ. ಇಂಥ ಸದ್ದಿನಿಂದ ಕೆಲವರು ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುವಂತಾಗಿದೆ. ತೀವ್ರತರವಾದ ಮಾನಸಿಕ ತೊಳಲಾಟಕ್ಕೆ ಒಳಗಾಗುವಂತೆ ಆಗಿದೆ.

ದ್ವಿಚಕ್ರ ವಾಹನದ ಮೂಲ ಸೈಲೆನ್ಸರ್‌ನಿಂದ 65ರಿಂದ 80 ಡೆಸಿಬಲ್‌ನಷ್ಟು ಶಬ್ದ ಹೊರಬರುತ್ತದೆ. ಅನೇಕರು ಇದನ್ನು ಬದಲಾಯಿಸುವ ಖಯಾಲಿ ಹೊಂದಿದ್ದಾರೆ. ರಸ್ತೆಯಲ್ಲಿ ಸಾಗುವ ಇತರರ ಗಮನ ಸೆಳೆಯುವುದು ಇವರ ಉದ್ದೇಶವಾಗಿದೆ.  ಮೋಜಿಗಾಗಿ ಯುವಕರು ‘ಯಮಹ’, ‘ಆರ್‌ಎಕ್ಸ್‌’, ‘ಬುಲೆಟ್‌’, ‘ಬಜಾಜ್‌ ಪಲ್ಸರ್‌’, ‘ಅವೆಂಜರ್‌’ ಬೈಕುಗಳ ಸೈಲೆನ್ಸರ್‌ಗಳನ್ನೇ ಹೆಚ್ಚಾಗಿ ಮಾರ್ಪಾಡು ಮಾಡಿಸುತ್ತಾರೆ. ಇವು ಅಂದಾಜು 110–150 ಡೆಸಿಬಲ್‌ನಷ್ಟು ಶಬ್ದ ಹೊರಹೊಮ್ಮಿಸುತ್ತವೆ. ಇದು ಶಬ್ದಮಾಲಿನ್ಯಕ್ಕೆ ಎಡೆಮಾಡಿಕೊಟ್ಟಿರುವುದಂತೂ ಸತ್ಯ.

ಇತರ ದ್ವಿಚಕ್ರ ವಾಹನಗಳಿಗಿಂತ ಬುಲೆಟ್‌ ಬೈಕಿನ ಸೈಲೆನ್ಸರ್‌ ಬದಲಾಯಿಸುವುದು ತೀರಾ ಸುಲಭ. ಸೈಲೆನ್ಸರ್‌ ಒಳಗೆ ಇರುವ ಮಫ್ಲರ್‌ ಹೊರತೆಗೆದರೆ ಶಬ್ದ ಹೆಚ್ಚಾಗುತ್ತದೆ. ಕರ್ಕಶ ಶಬ್ದ ಉಗುಳುವ ಇಂತಹ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ 52, 189 ಹಾಗೂ 190 (2) ಅನ್ವಯ ಕ್ರಮ ಕೈಗೊಳ್ಳಲು ಅವಕಾಶವಿದೆ. ಇದ್ದರೂ ಪೊಲೀಸರು ಹೆಲ್ಮೆಟ್‌ ಹಾಕದವರಿಗಷ್ಟೇ ದಂಡ ವಿಧಿಸುವ ಕಾಯಕದಲ್ಲಿ ಮಗ್ನರಾಗಿದ್ದಾರೆ.

2017ರ ನವೆಂಬರ್‌ನಲ್ಲಿ ಪೊಲೀಸರು ಇಂತಹದ್ದೊಂದು ಕಾರ್ಯಾಚರಣೆ ನಡೆಸಿದ್ದರು. ಸೈಲೆನ್ಸರ್‌ ಮಾರ್ಪಡಿಸಿಕೊಂಡು ಶಬ್ದಮಾಲಿನ್ಯ ಉಂಟು ಮಾಡಿದ ಸವಾರರಿಗೆ ₹ 1,100 ವರೆಗೂ ದಂಡ ವಿಧಿಸಿದ್ದರು. ಜತೆಗೆ, ಮೆಕ್ಯಾನಿಕ್‌ನನ್ನು ಸ್ಥಳಕ್ಕೆ ಕರೆಸಿ ಮೂಲ ಸೈಲೆನ್ಸರ್‌ ಅಳವಡಿಸುವವರೆಗೂ ಪೊಲೀಸರು ವಾಹನ ನೀಡುತ್ತಿರಲಿಲ್ಲ. ಎರಡಕ್ಕಿಂತ ಹೆಚ್ಚು ಬಾರಿ ಈ ಸಂಚಾರ ನಿಯಮ ಉಲ್ಲಂಘಿಸಿದ ಸವಾರರ ಚಾಲನ ಪರವಾನಗಿ (ಡಿಎಲ್‌) ರದ್ದುಪಡಿಸಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡುತ್ತಿದ್ದರು.

ಇದರಿಂದ ಕೆಲಕಾಲ ಈ ತೊಂದರೆಗೆ ಕಡಿವಾಣ ಬಿದ್ದಿತ್ತು. ಮತ್ತೆ ಇಂಥ ಕಾರ್ಯಾಚರಣೆ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ಕಶ ಹಾರನ್‌ಗಳು: ಇನ್ನು ಹಾರನ್‌ಗಳ ಕಥೆಯನ್ನು ಹೇಳುವುದೇ ಬೇಡ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಒಂದೊಂದು ವಾಹನಗಳಿಗೆ ನಿಗದಿತವಾದ ಹಾರನ್‌ಗಳು ಇದ್ದೇ ಇವೆ. ಆದರೆ, ಇದನ್ನು ಬಿಟ್ಟು ದೊಡ್ಡದಾದ ಶಬ್ದ ಮಾಡುವ, ಕರ್ಕಶವಾದ ದನಿಯ ಹಾರನ್‌ಗಳನ್ನು ಅಳವಡಿಸಿಕೊಳ್ಳುವ ಪಡ್ಡೆ ಹುಡುಗರು ದಾರಿಹೋಕರಿಗೆ ಕಿರಿಕಿರಿ ತಂದೊಡ್ಡಿದ್ದಾರೆ.

ವಿಶೇಷವಾಗಿ ಕಾಲೇಜುಗಳ ಬಳಿ, ಹುಡುಗಿಯರ ಮನೆಗಳ ಬಳಿ ಇಂಥವರ ಕಾಟ ಎಲ್ಲೆ ಮೀರಿದೆ. ಮತ್ತೆ ಕೆಲವರು ಕೇವಲ ಶೋಕಿಗಾಗಿ ಇಂತಹ ಹಾರನ್‌ಗಳನ್ನು ಅಳವಡಿಸಿಕೊಂಡು ವಿಚಿತ್ರ ಶಬ್ದ ಹೊಮ್ಮಿಸುತ್ತಾರೆ. ಹಿರಿಯ ನಾಗರಿಕರ ವಾಹನ ಚಾಲನೆಗೆ ಇವೆಲ್ಲವೂ ತೊಡಕಾಗಿ ಪರಿಣಮಿಸಿದೆ. ಪೊಲೀಸರು ಇಂತಹ ಹಾರನ್‌ಗಳ ಬಗ್ಗೆಯೂ ಹೆಚ್ಚಾಗಿ
ಗಮನ ಹರಿಸುತ್ತಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು