ಮೀಸಲಾತಿ ಕಿತ್ತುಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಮಾತನಾಡಿ: ಧ್ರುವನಾರಾಯಣ ಸವಾಲು

ಮೈಸೂರು: ‘ಖಾಸಗೀಕರಣದ ಮೂಲಕ ಪರಿಶಿಷ್ಟರ ಮೀಸಲಾತಿ ಕಿತ್ತುಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಬಿಜೆಪಿಯ ದಲಿತ ನಾಯಕರು ಮಾತನಾಡುವ ಧೈರ್ಯ ತೋರಲಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಸವಾಲು ಹಾಕಿದರು.
‘ದಲಿತ ಮುಖಂಡರು ಸ್ವಾರ್ಥಕ್ಕಾಗಿ ಬಿಜೆಪಿ ಸೇರಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ತಿರುಚಿ ದಲಿತರಿಗೆ ಅಗೌರವ ತೋರಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಗೊಲ್ಲರಹಟ್ಟಿಯಲ್ಲಿ ಪ್ರವೇಶ ನಿರಾಕರಿಸಿದಾಗ, ಹತ್ರಾಸ್ ಪ್ರಕರಣ ಮುಚ್ಚಿಹಾಕಲು ಯತ್ನಿಸಿದಾಗ ಬಿಜೆಪಿಯ ದಲಿತ ನಾಯಕರು ಪ್ರತಿಭಟನೆ ನಡೆಸಲಿಲ್ಲವೇಕೆ’ ಎಂದು ಶನಿವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ವರ್ಷಕ್ಕೆ 6 ಲಕ್ಷ ಉದ್ಯೋಗ ನೀಡುವ ರೈಲ್ವೆ ಸಚಿವಾಲಯ ಕಳೆದ ಮೂರು ವರ್ಷಗಳಿಂದ ನೇಮಕಾತಿ ನಡೆಸಿಲ್ಲ. ಸಾರ್ವಜನಿಕ ಉದ್ದಿಮೆಗಳ ಮಾರಾಟ ನಡೆದಿದೆ. ಖಾಸಗಿ ಕಂಪನಿ ಬೆಳೆಸಲು ಬಿಎಸ್‌ಎನ್‌ಎಲ್ ಮುಳುಗಿಸಲಾಗಿದೆ. ಇವೆಲ್ಲವೂ ಕಾಣುತ್ತಿಲ್ಲವೇ’ ಎಂದರು.
‘30 ಲಕ್ಷ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ತಡೆಹಿಡಿಯಲಾಗಿದೆ. ಪರಿಶಿಷ್ಟ ಜಾತಿ– ಪಂಗಡ ಮತ್ತು ಬುಡಕಟ್ಟು ಉಪ ಯೋಜನೆಯ (ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ) ₹ 30 ಸಾವಿರ ಕೋಟಿ ಅನುದಾನದಲ್ಲಿ ₹ 6 ಸಾವಿರ ಕೋಟಿ ನೀಡಿಲ್ಲ. ಇದರ ವಿರುದ್ಧ ಬಿಜೆಪಿ ನಾಯಕರು ಧ್ವನಿ ಎತ್ತಲಿ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.