ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಂದ ಪಂಜಿನ ಮೆರವಣಿಗೆ

ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ: ಪಂಜಿನ ಮೆರವಣಿಗೆ
Last Updated 17 ಡಿಸೆಂಬರ್ 2019, 15:14 IST
ಅಕ್ಷರ ಗಾತ್ರ

ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮಾನಸ ಗಂಗೋತ್ರಿಯಲ್ಲಿ ಮಂಗಳವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿದರು.

ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಶನ್‌ (ಎಐಡಿಎಸ್‌ಒ), ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘದ ನೇತೃತ್ವದಲ್ಲಿ ಸುಮಾರು 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮಾನಸ ಗಂಗೋತ್ರಿಯ ‘ಕ್ಲಾಕ್‌ ಟವರ್‌’ನಿಂದ ಕುವೆಂಪು ಪ್ರತಿಮೆವರೆಗೆ ‍ಪ್ರತಿಭಟನಾ ಜಾಥಾ ನಡೆಸಿದರು.

ಜಾಮೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ನಡೆಸಿದ ಲಾಠಿಪ್ರಹಾರವನ್ನು ಇದೇ ವೇಳೆ ವಿದ್ಯಾರ್ಥಿಗಳು ಖಂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ‘ನಿಜಕ್ಕೂ ನಾವೀಗ ದುರ್ಬರ ಪರಿಸ್ಥಿತಿಯಲ್ಲಿದ್ದೇವೆ. ತಪ್ಪನ್ನು ತಪ್ಪು ಎಂದು ಹೇಳಿದರೆ ಲಾಠಿ ಏಟು ತಿನ್ನುವ ಸ್ಥಿತಿ ನಮ್ಮದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಾಮಿಯ ವಿ.ವಿ ವಿದ್ಯಾರ್ಥಿಗಳು ಮಾಡಿದ ತಪ್ಪಾದರೂ ಏನು’ ಎಂದು ಪ್ರಶ್ನಿಸಿದ ಅವರು, ‘ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಲಾಯಿತು. ಗ್ರಂಥಾಲಯಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಇದ್ದ ವಿದ್ಯಾರ್ಥಿಗಳನ್ನೂ ಹೊರಗೆ ಎಳೆದುಕೊಂಡು ಬಂದು ಥಳಿಸಲಾಯಿತು’ ಎಂದು ಕಿಡಿಕಾರಿದರು.

ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯಬೇಡಿ ಎಂದು ಹೇಳುವುದು ತಪ್ಪು ಎನ್ನುವುದಾದರೇ ಬೇರೆ ಇನ್ನೇನು ಮಾಡಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಕೂಡಲೇ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳಬೇಕು. ಧರ್ಮ ಆಧಾರದ ಮೇಲೆ ಪೌರತ್ವವನ್ನು ನಿರ್ಣಯಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಎಸ್‌ಎಫ್‌ಐ ಮುಖಂಡ ವಸಂತ್, ಮೈಸೂರು ವಿ.ವಿ. ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವರು, ಮುಖಂಡ ಸೋಸ್ಲೆ ಮಹೇಶ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT