ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಬೆಂಬಲಿಸಿ; ಒಕ್ಕಲಿಗರಿಗೆ ಶಾಸಕ ಜಿ.ಟಿ.ದೇವೇಗೌಡ ಮೊರೆ

3 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕುಮಾರಸ್ವಾಮಿ–ಜಿಟಿಡಿ
Last Updated 26 ಆಗಸ್ಟ್ 2022, 14:50 IST
ಅಕ್ಷರ ಗಾತ್ರ

ಹುಣಸೂರು (ಮೈಸೂರು ಜಿಲ್ಲೆ): ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನದ ಬಳಿಕ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕಜಿ.ಟಿ.ದೇವೇಗೌಡ ಶುಕ್ರವಾರ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಜೊತೆಗೆ ಇಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡರು.

‘ಹಿಂದಿನ ವೈಮನಸ್ಸು ಮರೆತಿದ್ದೇವೆ. ಎಚ್.ಡಿ.ದೇವೇಗೌಡರ ಆಶಯದಂತೆ ಜೆಡಿಎಸ್‌ ಸಂಘಟಿಸಿ, ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಿಸಲು ಒಕ್ಕಲಿಗ ಸಮುದಾಯ ಬೆಂಬಲ ನೀಡಬೇಕು’ ಎಂದು ಜಿಟಿಡಿ ಕೋರಿದರು.

ಮೂರು ವರ್ಷದ ಬಳಿಕ ಇಬ್ಬರೂ ಒಂದೇ ವೇದಿಕೆಯಲ್ಲಿ ಜೆಡಿಎಸ್‌ ಸದೃಢಗೊಳಿಸುವ ಬಗ್ಗೆ ಮಾತನಾಡಿದರು. ಇದಕ್ಕೆ ಶಾಸಕ ಸಾ.ರಾ.ಮಹೇಶ್‌, ವಿಧಾನ ಪರಿಷತ್‌ ಸದಸ್ಯ, ಬಿಜೆಪಿಯ ಎಚ್‌.ವಿಶ್ವನಾಥ್‌ ಸಾಕ್ಷಿಯಾದರು.

‘ನನ್ನ ರಾಜಕೀಯ ಕರ್ಮಭೂಮಿ ಹುಣಸೂರು ಕ್ಷೇತ್ರದಲ್ಲಿ ಮೂರು ವರ್ಷದ ಬಳಿಕ ಕುಮಾರಸ್ವಾಮಿ ಜೊತೆ ವೇದಿಕೆಯಲ್ಲಿದ್ದೇನೆ. ಆದಿಚುಂಚನಗಿರಿ ಶ್ರೀಗಳು, ಕುಮಾರಸ್ವಾಮಿ, ನನ್ನನ್ನು ಹಾಗೂ ಪುತ್ರ ಹರೀಶ್‌ಗೌಡನನ್ನು ಆಶೀರ್ವದಿಸಿದ್ದಾರೆ’ ಎಂದು ಹೇಳಿದರು.

ಕುಮಾರಸ್ವಾಮಿ ಮಾತನಾಡಿ, ‘ಎಚ್.ವಿಶ್ವನಾಥ್, ಜಿಟಿಡಿ ಪಕ್ಷದಿಂದ ದೂರವಾಗಿದ್ದು ಅನೇಕ ಏರುಪೇರಿಗೆ ಕಾರಣವಾಯಿತು. ಚಾಮುಂಡೇಶ್ವರಿ ಪ್ರೇರಣೆಯಿಂದ ಅವರು ಮನಸ್ಸಿನ ಮಾತನಾಡಿದ್ದಾರೆ. ಕೆಲ ಕಾಣದ ಕೈಗಳು ವದಂತಿ ಹರಡಿದ್ದವು’ ಎಂದರು.

‘ಜಿಟಿಡಿ ಎಂದಿಗೂ ಎರಡು ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟಿರಲಿಲ್ಲ. ಈ ಭಾಗದಲ್ಲಿ ಜಿ.ಡಿ.ಹರೀಶ್‌ಗೌಡ ಯುವಶಕ್ತಿಯಾಗಿದ್ದು, ಪಕ್ಷಕ್ಕೆ ಆಸ್ತಿಯಾಗಿದ್ದಾರೆ. ಈ ಬೆಳವಣಿಗೆಯಿಂದ ಮೈಸೂರು ಜಿಲ್ಲೆಯ ರಾಜಕೀಯ ಬದಲಾಗುವುದು ಖಚಿತ’ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ‘ಒಕ್ಕಲಿಗ ಸಮುದಾಯವನ್ನು ಕಾಂಗ್ರೆಸ್ ಗುರುತಿಸಿ ರಾಜ್ಯದಲ್ಲಿ ನನಗೆ ಪಕ್ಷದ ಹೊಣೆ ನೀಡಿದೆ. ಪಕ್ಷ ಹಾಗೂ ನನ್ನ ಅಭಿಲಾಷೆ ಈಡೇರಿಸುವ ಶಕ್ತಿ ಸಮಾಜದ ಮತದಾರರ ಕೈಯಲ್ಲಿದೆ’ ಎಂದು ಹೇಳಿದರು.

ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಶಾಸಕರಾದ ಶರತ್ ಬಚ್ಚೇಗೌಡ, ಎಚ್.ಪಿ.ಮಂಜುನಾಥ್, ಮುಖಂಡ ಕೆ.ವೆಂಕಟೇಶ್, ಎಂಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT