ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ತೀರ್ಪು ಸಮಾಧಾನ ತಂದಿಲ್ಲ: ನಾಗಮೋಹನದಾಸ್

ಮೀಸಲಾತಿ ಮೂಲಭೂತ ಹಕ್ಕು ಮಾತ್ರವಲ್ಲ ಮಾನವ ಹಕ್ಕೂ ಹೌದು
Last Updated 10 ಫೆಬ್ರುವರಿ 2020, 12:59 IST
ಅಕ್ಷರ ಗಾತ್ರ

ಮೈಸೂರು: ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂಕೋರ್ಟ್‌ ತೀರ್ಪು ಸಮಾಧಾನ ತಂದಿಲ್ಲ ಎನ್ನುವುದು ನಿಜ. ಆದರೆ, ಅದನ್ನು ವಿಮರ್ಶಿಸಲು ಒಂದು ಚೌಕಟ್ಟು ಇದೆ ಎಂಬುದನ್ನು ಮರೆಯಬಾರದು ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್‌ ತಿಳಿಸಿದರು.

ಇಲ್ಲಿನ ಕಲಾಮಂದಿರದಲ್ಲಿ ಸೋಮವಾರ ನಡೆದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್‌ ಆಯೋಗದ ವತಿಯಿಂದ ಮೈಸೂರು ವಿಭಾಗದ ಎಲ್ಲ ಜಿಲ್ಲೆಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮುಖಂಡರು ಮತ್ತು ಸಂಘಟನೆಗಳಿಂದ ಮೀಸಲಾತಿ ಹೆಚ್ಚಳ ಕುರಿತ ಅಹವಾಲು ಸ್ವೀಕೃತಿ ಸಭೆಯಲ್ಲಿ ಅವರು ಮಾತನಾಡಿದರು.

ಮೀಸಲಾತಿ ಒಂದು ಭಿಕ್ಷೆ ಅಲ್ಲ. ಅದೊಂದು ಮೂಲಭೂತ ಹಕ್ಕು ಹೌದು ಹಾಗೂ ಮಾನವ ಹಕ್ಕೂ ಹೌದು. ಸುಪ‍್ರೀಂಕೋರ್ಟ್‌ನ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕು. ಅದನ್ನು ವಿಮರ್ಶಿಸುವ ಹಕ್ಕನ್ನು ಸಂವಿಧಾನ ದೇಶದ ಎಲ್ಲ ನಾಗರಿಕರಿಗೂ ಕೊಟ್ಟಿದೆ. ಆದರೆ, ಅದಕ್ಕೊಂದು ಚೌಕಟ್ಟು ಇದೆ. ಅದರೊಳಗೆ ನಾವು ಅದನ್ನು ವಿಮರ್ಶಿಸಬೇಕು ಎಂದು ಹೇಳಿದರು.

ವಿಮರ್ಶೆ ಯಾವಾಗಲೂ ಆರೋಗ್ಯಕರವಾಗಿರಬೇಕು, ರಚನಾತ್ಮಕವಾಗಿರಬೇಕು, ಸಂವಿಧಾನಬದ್ಧವಾಗಿರಬೇಕು, ಇನ್ನಷ್ಟು ಮೇಲ್ಮಟ್ಟಕ್ಕೆ ಕೊಂಡೊಯ್ಯುವಂತಿರಬೇಕು. ಸಂಸತ್ತಿನಲ್ಲಿ ಕಾಯ್ದೆಯಾಗಬೇಕೇ ಎನ್ನುವ ಕುರಿತೂ ಆಲೋಚಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳಲ್ಲಿ 60 ಲಕ್ಷಕ್ಕಿಂತಲೂ ಹೆಚ್ಚಿನ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಗುತ್ತಿಗೆ, ಹೊರಗುತ್ತಿಗೆ ಮೂಲಕ ಕಾರ್ಮಿಕರ ನೇಮಕಾತಿ ನಡೆಯುತ್ತಿದೆ. ಮೀಸಲಾತಿಯಡಿ ಕೆಲಸ ಪಡೆಯಬೇಕಾದವರು ಇದರಿಂದ ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲೇ 2.60 ಲಕ್ಷ ಹುದ್ದೆಗಳು ಖಾಲಿ ಇವೆ. ಅಧ್ಯಯನವೊಂದರ ಪ್ರಕಾರ ಶೇ 34ರಷ್ಟು ಹೊರಗುತ್ತಿಗೆ ಕಾರ್ಮಿಕರಿದ್ದಾರೆ. 1992ರಿಂದ ಬಂಡವಾಳ ಹೂಡಿಕೆ ಹಿಂತೆಗೆತ ನಡೆಯುತ್ತಿದ್ದು, ಸಾರ್ವಜನಿಕ ಕ್ಷೇತ್ರ ಖಾಸಗಿ ಕ್ಷೇತ್ರವಾಗಿದೆ. ಇಲ್ಲೂ ಮೀಸಲಾತಿ ಇಲ್ಲದೇ ದಲಿತರು ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ಕಿಡಿಕಾರಿದರು.

2011 ಜನಗಣತಿ ಪ್ರಕಾರ ಪರಿಶಿಷ್ಟಜಾತಿ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸುವ ಪ್ರಸ್ತಾವ ಇದೆ ಎಂದರು.

ಕಾಂಗ್ರೆಸ್‌ನ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ಶೇ 50ರಷ್ಟು ಮಹಿಳಾ ಒಳ ಮೀಸಲಾತಿಗೆ ಒತ್ತಾಯಿಸಿದರು.

ಸಭೆಯಲ್ಲಿ ಮಾತನಾಡಿದ ಹಲವರು ಪರಿಶಿಷ್ಟಜಾತಿ ಮತ್ತು ಪಂಗಡದಲ್ಲಿ ಸ್ಪೃಶ್ಯ ಮತ್ತು ಅಸ್ಪೃಶ್ಯ ಎಂದು ವಿಂಗಡಿಸಿ, ಅಸ್ಪೃಶ್ಯ ಸಮುದಾಯಗಳಿಗೆ ಹೆಚ್ಚಿನ ಒಳಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT