ಸೋಮವಾರ, ಮೇ 23, 2022
28 °C
ಸುತ್ತೂರಿನಲ್ಲಿ ಸಂಭ್ರಮದ ರಥೋತ್ಸವ, ದೂಪ ಹಾಕಿ ಕೈಮುಗಿದ ಜನ

ಮೈಸೂರು: ಸರಳವಾದರೂ ಮಾಸದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಅತ್ತ ಮಂಗಳವಾದ್ಯಗಳ ಶಬ್ದ ಅನುರಣಿಸುತ್ತಿದ್ದರೆ, ಇತ್ತ ಭಕ್ತಾದಿಗಳು ತೇರನ್ನೆಳೆದು ಸಂಭ್ರಮಿಸಿದರು. ಹರಕೆ ಹೊತ್ತವರು ಗೋಪುರದಷ್ಟು ಎತ್ತರದ ರಥಕ್ಕೆ ಹಣ್ಣು, ಜವನ ಎಸೆದು ಕೈ ಮುಗಿಯುವ ಮೂಲಕ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆಯನ್ನು ಸಂಪನ್ನಗೊಳಿಸಿದರು. ‘ಹತ್ತೂರು ಜಾತ್ರೆಗಿಂತ ಸುತ್ತೂರು ಜಾತ್ರೆ ಚೆಂದ’ ಎಂಬ ನಾಣ್ಣುಡಿ ಸುಳ್ಳಾಗದಂತೆ ನೋಡಿಕೊಂಡರು.

ಹಿಂದಿನ ವರ್ಷಗಳಷ್ಟು ವಿಜೃಂಭಣೆ, ಅದ್ಧೂರಿತನವು ಕಾಣದಿದ್ದರೂ, ಜಾತ್ರೆಯ ಕಳೆ ಮಾಸಲಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ರಥವನ್ನು ಸಿಂಗರಿಸಲಾಗಿತ್ತು. ರಥದ ಮುಂದೆ ಜನರು ಹೆಚ್ಚಿನ ಸಂಖ್ಯೆಯಲ್ಲೇ ಸೇರಿದ್ದರು. ಎಲ್ಲರೂ ತೇರಿನ ಹಗ್ಗವನ್ನು ಹಿಡಿದು ಒಂದಷ್ಟು ದೂರ ಎಳೆದು ಭಾವಪರವಶರಾದರು.

ಕಳೆದ ವರ್ಷದಂತೆ 19 ಕಲಾ ತಂಡಗಳಾಗಲಿ, 37ಕ್ಕೂ ಹೆಚ್ಚು ಕಲಾವಿದರ ಕಲಾ ಪ್ರದರ್ಶನವಾಗಲಿ ಇರಲಿಲ್ಲ. ಆದರೆ, ವೀರಗಾಸೆ, ನಂದಿಧ್ವಜ ಕುಣಿತ ಜನರ ಮನತಣಿಸುವಲ್ಲಿ ಯಶಸ್ವಿಯಾದವು.

ರಥದ ಚಕ್ರಗಳಿಗೆ ಭಕ್ತರು ನೂಕುನುಗ್ಗಲಿನಲ್ಲಿ ಸಿಲುಕಬಾರದು ಎಂದು ಸ್ವಯಂಸೇವಕರು ಮಾನವ ಸರಪಳಿ ರಚಿಸಿ ತೇರು ಸುರಕ್ಷಿತವಾಗಿ ಕ್ರಮಿಸಲು ಕಾರಣರಾದರು.

ಹಣ್ಣು, ಜವನ ಮಾರಾಟ ಮಾಡುವವರು ಜಾತ್ರೆಯ ಅಂಗಳದಲ್ಲಿ ಕಣ್ಣಿಗೆ ಬಿದ್ದರು. ದೂಪ ಹಾಕುವ ದೂಪದಾರತಿಯನ್ನು ಇಟ್ಟುಕೊಂಡ ಅನೇಕ ವಯೋವೃದ್ಧರು ಸಾಲುಗಟ್ಟಿ ಕುಳಿತ್ತಿದ್ದರು. ಇಲ್ಲೆಲ್ಲ ಸುತ್ತೂರಿನ ಜನ ದೂಪ ಹಾಕುವ ಮೂಲಕ ಜಾತ್ರೆಗೆ ಕಳೆ ತಂದರು.

ಹಿಂದಿನ ವರ್ಷದಂತೆ ಸುತ್ತೂರಿನ ಬೀದಿಗಳಲ್ಲಿ ತೇರು ಸಾಗಲಿಲ್ಲ. ಮಠದ ಮುಂದೆಯಷ್ಟೇ ಗಾಂಭೀರ್ಯದಿಂದ ಸಾಗಿತು. ಈ ಮೂಲಕ ಸಾಂಕೇತಿಕವಾದ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಜ್ಞಾನಾಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ ಸೇರಿದಂತೆ ಇತರ ಮಠಗಳ ಸ್ವಾಮೀಜಿಗಳು, ಶಾಸಕ ಯತೀಂದ್ರ ಸಿದ್ದರಾಮಯ್ಯ ರಥೋತ್ಸವದಲ್ಲಿ ಭಾಗಿಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು