ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಹಾಸ್ಟೆಲ್‌ ದುರಸ್ತಿಗೆ ಶೀಘ್ರ ಕ್ರಮ

ಮೈಸೂರು ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗೆ ಸಚಿವ ಸೋಮಶೇಖರ್‌ ಭೇಟಿ
Last Updated 10 ನವೆಂಬರ್ 2020, 5:06 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಸೇರಿದ ಪುರುಷರ ಹಾಸ್ಟೆಲ್‌ನ ನವೀಕರಣಕ್ಕೆ ಶೀಘ್ರದಲ್ಲೇ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಜೆಎಲ್‌ಬಿ ರಸ್ತೆಯಲ್ಲಿರುವ ಹಾಸ್ಟೆಲ್‌ ಕಟ್ಟಡಕ್ಕೆ ಸಚಿವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. 58 ವರ್ಷಕ್ಕೂ ಹಳೆಯದಾದ ಹಾಸ್ಟೆಲ್‌ನ ಕೋಣೆಯೊಂದರ ಚಾವಣಿಯ ಗಾರೆಯು ಕಳೆದ ವಾರ ಕುಸಿದು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಭೇಟಿ ನೀಡಿ ಹಾಸ್ಟೆಲ್‌ನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

‘ಹಾಸ್ಟೆಲ್‌ ಕಟ್ಟಡ ಶಿಥಿಲಾವಸ್ಥೆಯ ಲ್ಲಿರುವ ವಿಷಯ ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಸಂಬಂಧ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ದುರಸ್ತಿಗೆ ಬೇಕಾಗಿರುವ ಅನುದಾನ ಮಂಜೂರು ಮಾಡಿಸಲಾಗುವುದು’ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ಹಾಸ್ಟೆಲ್‌ ದುರಸ್ತಿಗೆ ₹ 7 ಕೋಟಿ ವೆಚ್ಚವಾಗಬಹುದು ಎಂದು ಈ ಹಿಂದೆ ಅಂದಾಜು ಮಾಡಲಾಗಿತ್ತು. ಈಗ ಎಲ್ಲ ವಸ್ತುಗಳ ಬೆಲೆ ಏರಿಕೆಯಾ
ಗಿರುವ ಹಿನ್ನೆಲೆಯಲ್ಲಿ ಹಿಂದಿನ ಅಂದಾಜು ವೆಚ್ಚಕ್ಕಿಂತ ಶೇ 10ರಿಂದ ಶೇ 15 ರಷ್ಟು ವೆಚ್ಚ ಹೆಚ್ಚಾಗಬಹುದು. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯ ಅಭಿವೃದ್ಧಿಗೆ ಬದ್ಧ: ‘ನಾನು ಮೈಸೂರು ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಬದ್ಧವಾಗಿದ್ದೇನೆ. ಮಾಧ್ಯಮಗಳು, ಜನಪ್ರತಿನಿಧಿಗಳು ಇಲ್ಲವೇ ಸಾರ್ವಜನಿಕರಿಂದ ಇಲ್ಲಿನ ಸಮಸ್ಯೆಗಳು ಗಮನಕ್ಕೆ ಬಂದರೆ ತಕ್ಷಣ ಸ್ಪಂದಿಸುತ್ತೇನೆ’ ಎಂದು ಹೇಳಿದರು.

ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ ₹ 18 ಕೋಟಿ ಅನುದಾನಕ್ಕೆ ಒಪ್ಪಿಗೆ ಪಡೆಯಲು ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಇಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್‌ ಡಾ.ಸಿ.ಪಿ.ನಂಜರಾಜ್, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

‘ನಿರ್ವಹಣೆಯ ಕೊರತೆ’

‘ಸೂಕ್ತ ನಿರ್ವಹಣೆ ಮಾಡದೇ ಇರುವುದರಿದ ಕಟ್ಟಡಕ್ಕೆ ಈ ಸ್ಥಿತಿ ಒದಗಿದೆ. ಮದ್ರಾಸ್‌ ತಾರಸಿಯ ಕಟ್ಟಡ ಇದಾಗಿದೆ. ಪ್ರತಿ ವರ್ಷ ನಿರ್ವಹಣೆ ಮಾಡಿದ್ದರೆ ಇನ್ನೂ 10 ರಿಂದ 12 ವರ್ಷ ಯಾವುದೇ ತೊಂದರೆ ಆಗುತ್ತಿರಲಿಲ್ಲ’ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್‌ ಡಾ.ಸಿ.ಪಿ.ನಂಜರಾಜ್ ತಿಳಿಸಿದರು.

ಕಟ್ಟಡದ ನವೀಕರಣಕ್ಕೆ 2017 ರಲ್ಲಿ ಸರ್ಕಾರಕ್ಕೆ ₹ 7.5 ಕೋಟಿ ಅಂದಾಜು ವೆಚ್ಚ ಸಲ್ಲಿಸಲಾಗಿತ್ತು. ಆದರೆ ಅದು ಬಿಡುಗಡೆ ಆಗಿಲ್ಲ. ಎಂಜಿನಿಯರುಗಳು ಮತ್ತೆ ಪರಿಶೀಲನೆ ನಡೆಸಿದ್ದಾರೆ. 8–10 ದಿನಗಳಲ್ಲಿ ಅವರು ವರದಿ ನೀಡಬಹುದು. ನವೀಕರಣಕ್ಕೆ ಎಷ್ಟು ಹಣ ಬೇಕಾಗಬಹುದು ಎಂಬುದು ಆ ಬಳಿಕ ಅಂದಾಜು ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT