ಶನಿವಾರ, ಜುಲೈ 31, 2021
23 °C
ದಾಖಲಾತಿ ಕೊಟ್ಟಿದ್ದಕ್ಕೆ ಕೇಳಿದರೂ ಸ್ವೀಕೃತಿ ಕೊಡಲ್ಲ; ಕಾಡುವ ಅನುಮಾನ

ಮೈಸೂರು | ಆನ್‌ಲೈನ್‌ ನೆಪದಲ್ಲಿ ವಿಳಂಬ; ಆಕ್ರೋಶ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಡಳಿತ ಡಿಜಿಟಲ್‌ ವಹಿವಾಟಿನತ್ತ ಹೊರಳುತ್ತಿದೆ. ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸಲು ಅನುಕೂಲವಾಗುವಂತೆ ಬದಲಾವಣೆ ತರುತ್ತಿದೆ. ಇದು ಹಲವು ತೆರಿಗೆದಾರರಿಗೆ ಕಿರಿಕಿರಿ ಸೃಷ್ಟಿಸಿದೆ.

ಮನೆ, ನಿವೇಶನದ ಕಂದಾಯ ಕಟ್ಟಲು ಪಾಲಿಕೆ ಕಚೇರಿಗೆ ಬರುವ ಬಹುತೇಕರು ಹಿರಿಯರು. ಇಂತಹವರನ್ನು ಮೂರ್ನಾಲ್ಕು ಬಾರಿ ಕಚೇರಿಗೆ ಅಲೆದಾಡಿಸುವುದು ಅಮಾನವೀಯವಲ್ಲವೇ ? ಎಂಬ ಆಕ್ರೋಶವೂ ಸ್ಥಳೀಯ ಹಿರಿಯರಿಂದ ವ್ಯಕ್ತವಾಗಿದೆ.

‘ಮೈಸೂರಿನ ರಾಮಕೃಷ್ಣನಗರದಲ್ಲಿ ನಿವೇಶನವಿದೆ. ಇದರ ತೆರಿಗೆಯನ್ನು ಶಾರದಾದೇವಿ ನಗರದಲ್ಲಿರುವ ಪಾಲಿಕೆಯ ವಲಯ ಕಚೇರಿಯಲ್ಲಿ ಪ್ರತಿ ವರ್ಷವೂ ಪಾವತಿಸುತ್ತಿದ್ದೆ. ಅದರಂತೆ ಈ ವರ್ಷವೂ ಸಹ ಕೋವಿಡ್‌–19 ಸಂಕಷ್ಟದ ಕಾಲದಲ್ಲೂ ತೆರಿಗೆ ಕಟ್ಟಲು ಹೋಗಿದ್ದೆ. ಆದರೆ ಸಿಬ್ಬಂದಿ ಸಹಕರಿಸಲಿಲ್ಲ’ ಎಂದು ಬೆಂಗಳೂರಿನ ನಿವಾಸಿ ಪ್ರದೀಪ್ ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

‘ತೆರಿಗೆ ಪಾವತಿಸಲಿಕ್ಕಾಗಿಯೇ ಬೆಂಗಳೂರಿನಿಂದ ಬಂದಿದ್ದೆ. ವಲಯ ಕಚೇರಿ ಸಿಬ್ಬಂದಿ ವಿಚಾರಿಸಿದಾಗ ಹಿಂದಿನ ವರ್ಷದ ರಸೀದಿ ಕೇಳಿದರು. ಜೆರಾಕ್ಸ್ ಪ್ರತಿ ಕೊಟ್ಟೆ. ಈ ವರ್ಷದ ತೆರಿಗೆ ತುಂಬಲು ಬ್ಯಾಂಕ್‌ನ ಚಲನ್ ಪ್ರತಿ ಕೇಳಿದೆ. ನಿಮ್ಮ ಮೊಬೈಲ್ ನಂಬರ್ ಕೊಡಿ. ಆನ್‌ಲೈನ್‌ ಅಪ್‌ಡೇಟ್‌ ನಡೆದಿದೆ. ನಾವೇ ಫೋನ್ ಮಾಡಿ ಹೇಳುತ್ತೇವೆ’ ಎಂದರು.

‘ನಿಮಗೆ ದಾಖಲೆ ಕೊಟ್ಟಿದ್ದಕ್ಕೆ ಸ್ವೀಕೃತಿ ಪತ್ರ ಕೊಡಿ ಎಂದು ಕೇಳಿದೆ. ಕೊಡಲಿಲ್ಲ. ಬೆಂಗಳೂರಿನಿಂದ ಇದಕ್ಕಾಗಿಯೇ ಬಂದಿರುವೆ ಎಂದರೂ ಸ್ಪಂದಿಸಲಿಲ್ಲ. ಮತ್ತೆ ಪ್ರಶ್ನಿಸಿದಾಗ ಕರೆಂಟ್ ಇಲ್ಲ ಅಂದರು. ಆರು ದಿನ ಕಳೆದರೂ ಫೋನ್ ಬರಲಿಲ್ಲ. ತೆರಿಗೆ ಕಟ್ಟಲು ಮತ್ತೊಮ್ಮೆ ಮೈಸೂರಿಗೆ ಬರಬೇಕು ಅಂದರೇ ಅಷ್ಟೇ ದುಡ್ಡು ಖರ್ಚಾಗಲಿದೆ. ಇದನ್ನು ಭರಿಸುವರು ಯಾರು? ಇದು ನನ್ನೊಬ್ಬನ ಸಮಸ್ಯೆಯಲ್ಲ. ಇಂತಹ ಸಹಸ್ರ ಜನರಿದ್ದೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಡಾ ವ್ಯಾಪ್ತಿಯಲ್ಲಿನ ನಿವೇಶನಕ್ಕೆ ತೆರಿಗೆ ತುಂಬಿದೆ. ಆದರೆ ಶ್ರೀರಾಂಪುರದಲ್ಲಿನ ಮನೆಯ ತೆರಿಗೆ ತುಂಬಲು ಜಯನಗರದಲ್ಲಿನ ಪಾಲಿಕೆಯ ವಲಯ ಕಚೇರಿಗೆ ಹೋದಾಗ, ಜೆರಾಕ್ಸ್ ಪ್ರತಿ ಪಡೆದು ವಾರ ಬಿಟ್ಟು ಬರಲು ಹೇಳಿದರು. ನಾವು ಕೊಟ್ಟ ಪ್ರತಿಯನ್ನು ಅವರು ಜೋಪಾನ ಮಾಡುತ್ತಾರಾ? ಮತ್ತೊಮ್ಮೆ ಹೋದಾಗ ತೆರಿಗೆ ಕಟ್ಟಲು ಅನುವಾಗುತ್ತದೆಯಾ? ಎಂಬ ಅನುಮಾನ ಕಾಡುತ್ತಿದೆ' ಎಂದು ಸುರೇಶ್ ಆತಂಕ ವ್ಯಕ್ತಪಡಿಸಿದರು.

ಅತಿ ಕೆಟ್ಟ ವಿಧಾನ: ಲಂಚಕ್ಕೆ ಬೇಡಿಕೆ
‘ಆಸ್ತಿ ತೆರಿಗೆ ಕಟ್ಟುವ ಈ ಬಾರಿಯ ವಿಧಾನ ಅತಿ ಕೆಟ್ಟದಾಗಿದೆ. ಒಂದೇ ದಿನ ನಡೆಯುತ್ತಿದ್ದ ಕೆಲಸ ಇದೀಗ 20 ದಿನವಾದರೂ ಪೂರ್ಣಗೊಳ್ಳದಾಗಿದೆ. ಈ ಹಿಂದೆ ಕಚೇರಿಯಲ್ಲಿ ₹ 50 ಪಡೆದು, ಆಗಲೇ ಬರೆದು ಕೊಡುತ್ತಿದ್ದರು. ಇದೀಗ ಹಿಂದಿನ ವರ್ಷದ ರಸೀದಿಯ ಜೆರಾಕ್ಸ್ ಪ್ರತಿ ಕೊಟ್ಟು, ಜೊತೆಗೆ ₹ 200 ಕೊಟ್ಟರೇ ಮಾತ್ರ ಆಗಲೇ ಬರೆದುಕೊಡುತ್ತೇವೆ ಎಂದು ಸಿಬ್ಬಂದಿ ರಾಜಾರೋಷವಾಗಿ ಕೇಳುತ್ತಿದ್ದಾರೆ’ ಎಂದು ಡಾ.ಟಿ.ರಘುನಾಥ್ ದೂರುತ್ತಾರೆ.

‘ಈ ರೀತಿಯ ಹಗಲು ದರೋಡೆ ಯಾವ ನ್ಯಾಯ? ಈಚೆಗೆ ಪಾಲಿಕೆ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಕಷ್ಟು ಸಮಯವಿದೆ: ಹೆಗಡೆ
‘ಇದೂವರೆಗೂ ಕೈನಲ್ಲೇ ಬರೆದುಕೊಡುವ ಪದ್ಧತಿಯಿತ್ತು. ಮುಂದಿನ ವರ್ಷದಿಂದ ಸಂಪೂರ್ಣ ಆನ್‌ಲೈನ್‌. ಕೋವಿಡ್‌ನಿಂದ ಮೇ 20ರವರೆಗೂ ತೆರಿಗೆ ಪಾವತಿಸಲು ಅವಕಾಶವಾಗಿರಲಿಲ್ಲ. ನಮ್ಮ ಕಚೇರಿಗಳಿಗೆ ದಾಖಲಾತಿ ಕೊಟ್ಟರೇ ಸಾಕು. ಸಿಬ್ಬಂದಿ ಅಪ್‌ಲೋಡ್ ಮಾಡಲಿದ್ದಾರೆ’ ಎಂದು ಪಾಲಿಕೆಯ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು.

‘ಕರ್ನಾಟಕ ಒನ್ ಕೇಂದ್ರಗಳಲ್ಲೂ ಸಂಜೆ 7ರವರೆಗೂ ಆಸ್ತಿ ತೆರಿಗೆ ಪಾವತಿಸಬಹುದು. ತೆರಿಗೆ ಪಾವತಿದಾರರು ಸಹಕರಿಸಬೇಕು. ಇನ್ನೂ ಒಂದೂವರೆ ತಿಂಗಳು ರಿಯಾಯಿತಿ ಸಿಗಲಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು