ಶುಕ್ರವಾರ, ಏಪ್ರಿಲ್ 10, 2020
19 °C
ತಗಡೂರು ಗ್ರಾಮದ ಸಪ್ತ ದೇವಾಲಯಗಳ ಟ್ರಸ್ಟ್‌ ಹಾಗೂ ಪೂಜಾರಿಗಳ ನಡುವಣ ತಿಕ್ಕಾಟ

ಹುಂಡಿ ವಿವಾದ: ಹಲ್ಲೆಯ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮೈಸೂರು: ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ಸಪ್ತ ದೇವಾಲಯಗಳ ಟ್ರಸ್ಟ್ ಹಾಗೂ ದೇವಾಲಯದ ಪೂಜಾರಿಗಳ ನಡುವಿನ ದೇವಸ್ಥಾನದ ಹುಂಡಿ ವಿಚಾರದ ಸಂಘರ್ಷ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆಯುತ್ತಿದೆ.

ಎರಡೂ ಬಣದ ನಡುವಿನ ಕಿತ್ತಾಟದಿಂದ ಶಿವರಾತ್ರಿಯಂದು ದೇಗುಲಗಳಲ್ಲಿ ಪೂಜೆ ಸಲ್ಲಿಸಲು ಭಕ್ತರಿಗೆ ಅವಕಾಶವೇ ಸಿಕ್ಕಿರಲಿಲ್ಲ. ತಹಶೀಲ್ದಾರ್ ದೇಗುಲಕ್ಕೆ ತೆರಳಿ ಬೀಗ ತೆರೆಸಿ, ಸಮಸ್ಯೆ ಪರಿಹಾರಕ್ಕೆ ಯತ್ನಿಸಿದರೂ ವಿವಾದ ಜಟಿಲಗೊಂಡಿದೆ.

ಟ್ರಸ್ಟ್‌ ಸದಸ್ಯರು–ಪೂಜಾರಿಗಳ ನಡುವಿನ ಕಿತ್ತಾಟ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ಸಹ ದಾಖಲಾಗಿದೆ. ಈಗಾಗಲೇ ಹುಂಡಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಆದೇಶವನ್ನು ನೀಡಿದೆ ಎಂಬುದು ತಿಳಿದು ಬಂದಿದೆ.

ಹಲ್ಲೆ; ದೂರು: ‘ದೇವಸ್ಥಾನದಲ್ಲಿ ಹುಂಡಿ ಪ್ರತಿಷ್ಠಾಪಿಸಲು ಮುಂದಾದ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಅಧ್ಯಕ್ಷೆಯಾದ ನನ್ನ ಮೇಲೆ ಹಲ್ಲೆ ನಡೆಸಿದ ಪೂಜಾರಿಗಳ ಸಮೂಹ, ಅವಾಚ್ಯವಾಗಿ ನಿಂದಿಸಿದೆ. ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ತಗಡೂರು ಗ್ರಾಮದ ಸಪ್ತ ದೇಗುಲಗಳ ಟ್ರಸ್ಟ್‌ ಅಧ್ಯಕ್ಷೆ ಶಾಂತಲಾ ಒತ್ತಾಯಿಸಿದರು.

‘ಟ್ರಸ್ಟ್ ನೋಂದಣಿಯಾದ ನಂತರ ಪೂಜಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂದರ್ಭ ದೇವಸ್ಥಾನದ ಹುಂಡಿಯನ್ನು ಯಾರೂ ಮುಟ್ಟಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಆದರೆ ಪೂಜಾರಿಗಳು ಹುಂಡಿಯನ್ನು ದೇವಸ್ಥಾನದಲ್ಲಿ ಇಡಲು ಬಿಡುತ್ತಿಲ್ಲ’ ಎಂದು ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ತಹಶೀಲ್ದಾರ್ ಸಮ್ಮುಖವೇ ಪೂಜಾರಿ ಹಾಗೂ ಮಹಿಳೆಯರ ನಡುವೆ ವಾಗ್ವಾದ ನಡೆದಿದೆ. ಈ ನಡುವೆ ಕೆಲ ಮಹಿಳೆಯರ ಮೇಲೆ ಪೂಜಾರಿಗಳು ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹಲ್ಲೆ ಮಾಡಿದ ಪೂಜಾರಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಿ ಕೊಡಬೇಕು. ಇದರ ಜತೆಯಲ್ಲೇ ದೇವಸ್ಥಾನದ ಹುಂಡಿಯನ್ನು ದೇವಸ್ಥಾನದೊಳಗೆ ಇರಿಸಬೇಕು’ ಎಂದು ಶಾಂತಲಾ ಒತ್ತಾಯಿಸಿದರು.

ಟ್ರಸ್ಟ್‌ನ ಉಪಾಧ್ಯಕ್ಷ ಜಯಶಂಕರ್, ದೊಡ್ಡಬಸವೇಗೌಡ, ಅನ್ನಪೂರ್ಣಮ್ಮ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)