ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ–ಕುಶಾಲನಗರ ಚತುಷ್ಪಥ ರಸ್ತೆ ಕಾಮಗಾರಿಗೆ ಡಿಸೆಂಬರ್‌ನಲ್ಲಿ ಟೆಂಡರ್‌

Last Updated 15 ಜುಲೈ 2021, 4:20 IST
ಅಕ್ಷರ ಗಾತ್ರ

ಮೈಸೂರು: ಶ್ರೀರಂಗಪಟ್ಟಣ–ಕುಶಾಲನಗರ ನಡುವೆ ರಾಷ್ಟ್ರೀಯ ಹೆದ್ದಾರಿ–275ರ ಚತುಷ್ಪಥ ರಸ್ತೆ ನಿರ್ಮಾಣ ಪ್ರಕ್ರಿಯೆಗೆರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚುರುಕು ನೀಡಿದೆ.

₹ 3,100 ಕೋಟಿ ವೆಚ್ಚದಲ್ಲಿ 115 ಕಿ.ಮೀ.ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ, ರೈತರಿಂದ ಅವಶ್ಯವಿರುವ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೂ ಚಾಲನೆ ನೀಡಿದೆ. ಅದಕ್ಕಾಗಿಯೇ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧ್ಯಕ್ಷತೆಯಲ್ಲಿ ರೈತರ ಮನವೊಲಿಕೆಗಾಗಿ ಸೋಮವಾರ (ಜುಲೈ 12) ರೈತ ಮುಖಂಡರ ಸಭೆಯೂ ನಡೆದಿದೆ.

‘ಎರಡು ಪ್ಯಾಕೇಜ್‌ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಶ್ರೀರಂಗಪಟ್ಟಣ–ಹುಣಸೂರು, ಹುಣಸೂರು–ಕುಶಾಲನಗರದವರೆಗೆ ಎರಡು ಹಂತದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ. ಮೊದಲ ಹಂತದ ಶ್ರೀರಂಗಪಟ್ಟಣ–ಹುಣಸೂರು ನಡುವಿನ ಕಾಮಗಾರಿಗೆ ಡಿಸೆಂಬರ್‌ನಲ್ಲಿ ಟೆಂಡರ್ ಕರೆಯಲಾಗುವುದು. ಎರಡನೇ ಹಂತದ ಕಾಮಗಾರಿಗೆ 2022ರ ಮಾರ್ಚ್‌ನಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಭೂ ಸ್ವಾಧೀನಕ್ಕೆ ₹ 1,500 ಕೋಟಿ: ‘ಮೊದಲ ಹಂತದ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ 2022ರ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಲಿದೆ. ರೈತರ ಭೂಮಿ ಸ್ವಾಧೀನಕ್ಕಾಗಿಯೇ ₹ 1,500 ಕೋಟಿ ಮೀಸಲಿಡಲಾಗಿದೆ. ಶ್ರೀರಂಗಪಟ್ಟಣ, ಮೈಸೂರು, ಹುಣಸೂರು, ಪಿರಿಯಾಪಟ್ಟಣ, ಕುಶಾಲನಗರ ತಾಲ್ಲೂಕಿನ ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬೆಲೆ ನೀಡಲಾಗುವುದು’ ಎಂದು ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಮಾಹಿತಿ ನೀಡಿದರು.

‘ಶ್ರೀರಂಗಪಟ್ಟಣ–ಕುಶಾಲನಗರ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 2025ರೊಳಗೆ ಪೂರ್ಣಗೊಳ್ಳಲಿದೆ. ಈ ರಸ್ತೆ ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ. ನಾಗರಹೊಳೆ ಉದ್ಯಾನ ಹಾಗೂ ಕೇರಳ ಸಂಪರ್ಕಕ್ಕೂ ಸಹಕಾರಿಯಾಗಲಿದೆ. ಮೈಸೂರಿಗೆ ಬಂದು ಮಡಿಕೇರಿಗೆ ಹೋಗುವುದು ಇನ್ಮುಂದೆ ತಪ್ಪಲಿದೆ. ಇದರಿಂದ ಮೈಸೂರಿನಲ್ಲಿ ವಾಹನ–ಜನ ದಟ್ಟಣೆ ತಗ್ಗಲಿದೆ’ ಎಂದು ತಿಳಿಸಿದರು.

‘ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕೆಲವೊಂದು ಕಡೆ ರೈತರಿಗೆ ಪ್ರತಿ ಎಕರೆಗೆ ಗರಿಷ್ಠ ₹ 1 ಕೋಟಿ ಸಿಕ್ಕರೆ; ಉಳಿದೆಡೆ ಕನಿಷ್ಠ ₹ 30 ಲಕ್ಷ ಸಿಗಲಿದೆ. ಆಯಾ ಪ್ರದೇಶದ ಮಾರುಕಟ್ಟೆ ದರದ ಆಧಾರದಲ್ಲಿ ಇದು ನಿರ್ಧಾರವಾಗಲಿದೆ. ರಸ್ತೆ ನಿರ್ಮಾಣದಿಂದ ಪ್ರಯಾಣಿಕರಿಗೆ ಸಮಯ ಹಾಗೂ ಸಂಚಾರದ ಸುತ್ತಾಟವೂ ಕಡಿಮೆಯಾಗಲಿದೆ’ ಎಂದು ಪ್ರತಾಪ ಸಿಂಹ ಹೇಳಿದರು.

ವಾರದೊಳಗೆ ಸಭೆ: ನಿರ್ಧಾರ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗೆ ಚುರುಕು ನೀಡುತ್ತಿದ್ದಂತೆ; ರೈತ ಸಂಘವೂ ಸಕ್ರಿಯವಾಗಿದೆ. ಈ ಕಾಮಗಾರಿಯಿಂದ ಪರಿಸರ, ರೈತರಿಗಾಗುವ ನಷ್ಟದ ಬಗ್ಗೆ ಚರ್ಚಿಸಲು ಸಭೆ ನಡೆಸಲಿದೆ.

‘ಸಾರ್ವಜನಿಕರ ಅಹವಾಲು ಆಲಿಸಿಲ್ಲ. ಭೂಸ್ವಾಧೀನಕ್ಕೊಳಪಡುವ ಜಮೀನು ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಗೆ ಒಳಪಡಲಿದೆ. ಬಾಗಾಯ್ತು, ನೀರಾವರಿ ಜಮೀನು ಬರಲಿದೆ. ಪರಿಸರಕ್ಕಾಗುವ ಹಾನಿಯನ್ನು ಗಮನಿಸಿಲ್ಲ. ಮೈಸೂರು, ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕಿನ ರೈತರಿಗೆ ಅನುಕೂಲವಾಗುವ ಸ್ಥಳದಲ್ಲಿ ವಾರದೊಳಗೆ ಸಭೆ ನಡೆಸುತ್ತೇವೆ’ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT