ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ರೈತನನ್ನು ರೈತೋದ್ಯಮಿ ಆಗಿಸುವ ಗುರಿ– ಕೃಷಿ ಸಚಿವ ಬಿ.ಸಿ.ಪಾಟೀಲ

ಸಿಎಫ್‌ಟಿಆರ್‌ಐನಲ್ಲಿ ಮಾರ್ಚ್ 31ರವರೆಗೆ 500 ರೈತರಿಗೆ ತರಬೇತಿ
Last Updated 20 ಜನವರಿ 2021, 3:56 IST
ಅಕ್ಷರ ಗಾತ್ರ

ಮೈಸೂರು: ರೈತರನ್ನು ರೈತೋದ್ಯಮಿಗಳನ್ನಾಗಿ ಮಾಡುವುದೇ ಕೇಂದ್ರ ಸರ್ಕಾರದ ಆತ್ಮನಿರ್ಭರ್ ಯೋಜನೆಯ ಗುರಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಇಲ್ಲಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಯಲ್ಲಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯದ ಸಹಯೋಗದಲ್ಲಿ ನಡೆದ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಪರಿಕಲ್ಪನೆಯಡಿಯ ರೈತರ ತರಬೇತಿ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ರೈತರನ್ನು ಕೇವಲ ಬೆಳೆ ಬೆಳೆಯುವುದಕ್ಕೆ ಮಾತ್ರವೇ ಸೀಮಿತ
ವಾಗಿಡಲಾಗಿದೆ. ತಿಂಗಳುಗಟ್ಟಲೆ ಕಾಲ ರೈತ ಬೆಳೆದ ಬೆಳೆಯಿಂದ ಅರ್ಧ ಗಂಟೆಯಲ್ಲೆ ಮಧ್ಯವರ್ತಿ ಲಾಭ ಮಾಡಿಕೊಳ್ಳುತ್ತಾನೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಆತ್ಮನಿರ್ಭರ್ ಯೋಜನೆಯನ್ನು ಜಾರಿಗೊಳಿಸಿದ್ದು, ರೈತರೇ ತಾವು ಬೆಳೆದ ಉತ್ಪನ್ನಗಳನ್ನು ಸಂಸ್ಕರಿಸಿ ಉದ್ಯಮಿಗಳಾಗುವ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ರೈತರು ತಾವು ಬೆಳೆದ ಬೆಳೆಯನ್ನು ತಾವೇ ಸಂಸ್ಕರಿಸಿ ಮಾರಾಟ ಮಾಡಿದರೆ ಅವರ ಆದಾಯ ದ್ವಿಗುಣವಾಗುತ್ತದೆ. ಇದಕ್ಕೆಂದೇ ಕೇಂದ್ರ ಸರ್ಕಾರ ರಾಜ್ಯಕ್ಕೆ ₹ 493 ಕೋಟಿ ನೀಡಿದೆ. ಈ ಹಣದಲ್ಲಿ ರೈತರಿಗೆ ತರಬೇತಿ ನೀಡಿ, ಅವರನ್ನು ಉದ್ಯಮಿಗಳನ್ನಾಗಿ ಮಾಡುವ ಪ್ರಯತ್ನ ಇದಾಗಿದೆ ಎಂದು ಮಾಹಿತಿ ನೀಡಿದರು.

ಜ. 23ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬರಗಿ ಗ್ರಾಮದಲ್ಲಿ ರೈತರೊಂದಿಗೆ ಸಂವಾದ ನಡೆಸಲಾಗುವುದು. ಸಮೀಪದ ಮುಂಟಿಪುರ ಗ್ರಾಮದ ರೈತ ರಾಜಶೇಖರ್ ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಬೆಳೆದ ಬೆಳೆಯನ್ನು ವೀಕ್ಷಿಸಿ ಅವರನ್ನು ಪ್ರೋತ್ಸಾಹಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಿಎಸ್ಐಆರ್-ಸಿಎಫ್‌ಟಿಆರ್‌ಐ ನಿರ್ದೇಶಕರಾದ ಡಾ.ಶ್ರೀದೇವಿ ಅನ್ನಪೂರ್ಣಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT