ಬುಧವಾರ, ನವೆಂಬರ್ 25, 2020
25 °C
ಸಾರ್ವಜನಿಕ ಸ್ಥಳಗಳಲ್ಲಿ ದೂಮಪಾನ, ಮದ್ಯಪಾನದ ವಿರುದ್ಧ ಶಿಸ್ತುಕ್ರಮ– ಎಡಿಸಿ

ಇಂದಿನಿಂದಲೇ ತಪಾಸಣೆ, ದಂಡ ಜಾರಿ

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ, ಧೂಮಪಾನ, ಮದ್ಯಪಾನ ಮಾಡುವವರ ವಿರುದ್ಧ ಗುರುವಾರದಿಂದಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಹಾಗೂ ಅನಧಿಕೃತ ಮಾರಾಟದ ಬಗ್ಗೆ ಹಲವು ದೂರುಗಳು ಬರುತ್ತಿವೆ. ಎಂಟು ತಿಂಗಳಿಂದ ಕೋವಿಡ್‌ನಿಂದಾಗಿ ದಂಡ ವಿಧಿಸುವುದು, ತಪಾಸಣೆ ತಂಡಗಳು ಭೇಟಿ ನೀಡುವುದು ಕಡಿಮೆಯಾಗಿತ್ತು. ಆದರೆ, ಇನ್ನು ಮುಂದೆ ತಪಾಸಣೆ ತಂಡಗಳು ಭೇಟಿ ನೀಡಿ, ದಂಡ ವಿಧಿಸಬೇಕು ಎಂದು ಹೇಳಿದರು.

ಪೊಲೀಸ್ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ಕೆಎಸ್ಆರ್‌ಟಿಸಿ, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು, ನಗರಸಭೆ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಕಚೇರಿ ಆವರಣಗಳಲ್ಲಿ ತಂಬಾಕು ಸೇವನೆ, ಮದ್ಯಪಾನ ಮಾಡಿದವರಿಗೆ ದಂಡ ವಿಧಿಸುವಂತೆ ತಿಳಿಸಿದರು.

ಜಿಲ್ಲಾ ತಂಬಾಕು ಸಲಹೆಗಾರ ಶಿವಕುಮಾರ್ ಮಾತನಾಡಿ, ಪಂಚಾಯತ್ ಇಲಾಖೆಯ ವತಿಯಿಂದ ಪ್ರತಿ ಪಂಚಾಯಿತಿ ಅಧಿಕಾರಿಯು ಮಾಸಿಕ 20 ಕೋಟ್ಪಾ ಪ್ರಕರಣಗಳನ್ನು ದಾಖಲಿಸುವಂತೆ ಸರ್ಕಾರದ ಅಧಿಸೂಚನೆ ಇದ್ದು, ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಕೋಟ್ಪಾ ಕಾಯ್ದೆಯಡಿಯಲ್ಲಿ ಸೆಕ್ಷನ್ 5 ಹಾಗೂ 7, 8,9 ರ ಅಡಿಯಲ್ಲಿ ಪ್ರತಿ ತಿಂಗಳು ಪ್ರತಿ ಠಾಣೆಯಿಂದ ಪ್ರಕರಣಗಳನ್ನು ದಾಖಲಿಸಿ, ಮಾಸಿಕ ವರದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶಕ್ಕೆ ಸಲ್ಲಿಸುವಂತೆ ಅವರು ಸೂಚಿಸಿದರು.

ನಿರ್ದಿಷ್ಟ ಆರೋಗ್ಯ ಸೂಚನಾ ಫಲಕಗಳಿಲ್ಲದ ಹಾಗೂ ಕಾಳಸಂತೆಯಲ್ಲಿ ಮಾರಾಟವಾಗುವ ತಂಬಾಕು ಉತ್ಪನ್ನಗಳ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಶಿವಪ್ರಸಾದ್ ಮಾತನಾಡಿ, ಚಾಮುಂಡಿಬೆಟ್ಟವನ್ನು ತಂಬಾಕು ಮುಕ್ತವನ್ನಾಗಿಸಲು ಮುಂದಾಗಬೇಕು. ಬೆಟ್ಟಕ್ಕೆ ತಂಬಾಕು, ಮದ್ಯಪಾನ ಹಾಗೂ ಪ್ಲಾಸ್ಟಿಕ್ ತೆಗೆದುಕೊಂಡು ಹೋಗದಂತೆ ಕ್ರಮವಹಿಸಲು, ಬೆಟ್ಟಕ್ಕೆ ಮೆಟ್ಟಿಲು ಮೂಲಕ ಹಾಗೂ ವಾಹನಗಳಲ್ಲಿ ಬರುವವರನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಲಕ್ಷ್ಮಿನಾರಾಯಣ, ಬಿ.ಸಂತೋಷ್, ಬಿಇಒ ಮರಿಸ್ವಾಮಿ ಹಾಗೂ ಆರೋಗ್ಯ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.