ಬುಧವಾರ, ಜನವರಿ 20, 2021
17 °C
ಎಲೆಕೋಸು, ಮಂಗಳೂರು ಸೌತೆ ಬೆಲೆ ಕುಸಿತ, ದಪ್ಪಮೆಣಸಿನಕಾಯಿ ಬೆಲೆ ಏರಿಕೆ

ಮೈಸೂರು: ಸಾವಿರಕ್ಕೂ ಅಧಿಕ ಕ್ವಿಂಟಲ್‌ ಟೊಮೆಟೊ ಆವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮೈಸೂರು: ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ 1,030 ಟನ್‌ನ್ನಷ್ಟು ಟೊಮೆಟೊ ಆವಕವಾಗಿತ್ತು. ಕನಿಷ್ಠ ಧಾರಣೆ ಕೆ.ಜಿಗೆ ₹ 4 ಇದ್ದರೆ, ಗರಿಷ್ಠ ₹ 6 ಇತ್ತು. ಇದರಿಂದ ಬೆಲೆ ಚೇತರಿಕೆ ಪಡೆಯಲು ಸಾಧ್ಯವಾಗಲಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ದಪ್ಪಮೆಣಸಿನಕಾಯಿ ಬೆಲೆಯು ಕೆ.ಜಿಗೆ ₹ 23ಕ್ಕೆ ಏರಿಕೆ ಕಂಡು ಬೆಳೆಗಾರರಲ್ಲಿ ಹರ್ಷ ತರಿಸಿತು. 'ಇದುವರೆಗೂ ಇದು ಕೆ.ಜಿಗೆ ₹ 19ಕ್ಕೆ ಮಾರಾಟವಾಗುತ್ತಿತ್ತು. 65 ಕ್ವಿಂಟಲ್‌ನಿಂದ 43 ಕ್ವಿಂಟಲ್‌ಗೆ ಆವಕ ಕುಸಿದಿರುವುದರಿಂದ ಬೇಡಿಕೆಗೆ ತಕ್ಕಷ್ಟು ದಪ್ಪಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ, ದರ ಏರಿಕೆ ಕಂಡಿದೆ’ ಎಂದು ವ್ಯಾಪಾರಿ ರಾಜು ತಿಳಿಸಿದರು.

ಬೀನ್ಸ್‌ಗೂ ಕೇರಳ ವ್ಯಾಪಾರಸ್ಥರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಕೆ.ಜಿಗೆ ಬೀನ್ಸ್ ದರ ₹ 45ಕ್ಕೆ ಏರಿಕೆ ಕಂಡಿದ್ದು, ಬೆಳೆಗಾರರು ಸಮಾಧಾನಪಡುವಂತೆ ಮಾಡಿದೆ. ತಿಂಗಳ ಆರಂಭದಿಂದಲೂ ಇದೇ ದರವನ್ನು ಬೀನ್ಸ್ ಕಾಯ್ದುಕೊಂಡಿದೆ.

ತಮಿಳುನಾಡಿನಿಂದ ಹೆಚ್ಚಾಗಿ ಕ್ಯಾರೆಟ್‌ ಬರುತ್ತಿದ್ದು, ಬೇಡಿಕೆ ಸೃಷ್ಟಿಯಾಗದೇ ಇರುವುದರಿಂದ ದರ ಈ ವಾರವೂ ಚೇತರಿಕೆ ಪಡೆಯಲು ಸಾಧ್ಯವಾಗಿಲ್ಲ. ಕೆ.ಜಿಗೆ ₹ 18ಕ್ಕೆ ಕಡಿಮೆಯಾಗಿದ್ದು, ತಮಿಳುನಾಡಿನ ವ್ಯಾಪಾರಸ್ಥರಿಗೆ ನಷ್ಟವಾಗುತ್ತಿದೆ.

ಇನ್ನುಳಿದಂತೆ, ಸಿಹಿಗುಂಬಳ 650 ಕ್ವಿಂಟಲ್‌ನಷ್ಟು ಮಾರುಕಟ್ಟೆಗೆ ಬಂದಿದ್ದು, ಕನಿಷ್ಠ ಧಾರಣೆ ಕೆ.ಜಿಗೆ ₹ 1 ಹಾಗೂ ಗರಿಷ್ಠ ಧಾರಣೆ ₹ 2 ಇತ್ತು. ಎಲೆಕೋಸು ₹ 2ರಿಂದ ₹ 4ಕ್ಕೆ ಮಾರಾಟವಾಗಿತ್ತು. ಬದನೆಕಾಯಿ ₹ 3ರಿಂದ ₹ 5ಕ್ಕೆ ಮಾರಾಟವಾಗಿತ್ತು. ಮಂಗಳೂರು ಸೌತೆ ₹ 1ರಿಂದ ₹ 2ಕ್ಕೆ ಮಾರಾಟವಾಗಿ ಬೆಳೆಗಾರರಿಗೆ ಅತೀವ ನಷ್ಟ ತರಿಸಿತು.

ಈರುಳ್ಳಿಯ ದರವೂ ಕುಸಿತದ ಹಾದಿಯಲ್ಲಿದೆ. ಎಪಿಎಂಸಿಯಲ್ಲಿ ಕೆ.ಜಿಗೆ ಈರುಳ್ಳಿ ₹ 10ಕ್ಕೆ ಮಾರಾಟವಾಗಿದೆ. ಇನ್ನುಳಿದ ಚಿಲ್ಲರೆ ಮಾರುಕಟ್ಟೆಗಳಲ್ಲೂ ದರ ₹ 15ರ ಆಸುಪಾಸಿನಲ್ಲಿದೆ.

ಮಾವಿನ ಆವಕ ಈ ವಾರವೂ ಉತ್ತಮಗೊಂಡಿಲ್ಲ. ಹಾಪ್‌ಕಾಮ್ಸ್‌ನಲ್ಲಿ ಕೆ.ಜಿಗೆ ರಸಪೂರಿ ₹ 55, ಬಾದಾಮಿ ₹ 68, ತೋತಾಪುರ ₹ 32ಕ್ಕೆ ಮಾರಾಟವಾಗುತ್ತಿದೆ. ಇನ್ನುಳಿದ ಮಾರುಕಟ್ಟೆಗಳಲ್ಲೂ ಇದರ ಆಸುಪಾಸಿನಲ್ಲೇ ದರ ಇದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು