ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೈನಿ ಸ್ಟಾಫ್‌ ನರ್ಸ್‌ಗಳ ಪ್ರತಿಭಟನೆ: ಕಪ್ಪು ಪಟ್ಟಿ ಧರಿಸಿ ಕರ್ತವ್ಯ

ಕೆ.ಆರ್.ಆಸ್ಪತ್ರೆ
Last Updated 8 ಜುಲೈ 2020, 9:51 IST
ಅಕ್ಷರ ಗಾತ್ರ

ಮೈಸೂರು: ಕೆ.ಆರ್.ಆಸ್ಪತ್ರೆಯಲ್ಲಿ ನಡೆಯುತ್ತಿರುವ ಟ್ರೈನಿ ಸ್ಟಾಫ್‌ ನರ್ಸ್‌ಗಳ ಪ್ರತಿಭಟನೆ ಬುಧವಾರವೂ ಮುಂದುವರಿದಿದೆ. ಆಸ್ಪತ್ರೆಯ ಆವರಣದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ ಸುಮಾರು 150 ಮಂದಿ ನಂತರ ಕಪ್ಪುಪಟ್ಟಿ ಧರಿಸಿಕೊಂಡು ತಮ್ಮ ತಮ್ಮ ಕರ್ತವ್ಯಕ್ಕೆ ಹಾಜರಾದರು.

‘ಕಳೆದ ಮೂರು ದಿನಗಳಿಂದ ಮಾಡುತ್ತಿರುವ ಸಾಂಕೇತಿಕ ಪ್ರತಿಭಟನೆಗಳನ್ನು ನಿಲ್ಲಿಸಬೇಕು, ಈ ರೀತಿ ಒತ್ತಡ ಹೇರಬಾರದು ಎಂದು ಕೆಲವು ಹಿರಿಯ ಶುಶ್ರೂಷಕರು ಹಾಗೂ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಟ್ರೈನಿ ಸ್ಟಾಫ್ ನರ್ಸ್‌ವೊಬ್ಬರು ತಿಳಿಸಿದರು.

‘ಕಳೆದ ಹಲವು ವರ್ಷಗಳಿಂದ ಶಿಷ್ಯವೇತನದ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನಮ್ಮನ್ನು ಕಾಯಂ ಆಗಿ ಅಥವಾ ಕನಿಷ್ಠ ಗುತ್ತಿಗೆ ನೌಕರರನ್ನಾಗಿ ಪರಿಗಣಿಸಬೇಕು ಎಂದು ಕೇಳುತ್ತಿದ್ದೇವೆ. ಇದೇನು ರಾಜ್ಯದಲ್ಲಿ ಹೊಸತಲ್ಲ. ಈಗಾಗಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಕ್ರಮವನ್ನು ಜಾರಿಗೊಳಿಸಲಾಗಿದೆ. ಈ ಕುರಿತು ಸರ್ಕಾರದ ಆದೇಶವೂ ಇದೆ. ಇದನ್ನು ಪಾಲನೆ ಮಾಡಿ ಎಂದು ಕೇಳುವುದು ತಪ್ಪೇ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್ ಶಂಕಿತ ರೋಗಿಗಳ ಆರೈಕೆಗೆ ನಮ್ಮನ್ನು ನಿಯೋಜಿಸಲಾಗುತ್ತಿದೆ. ತಿಂಗಳಿಗೆ ಕೇವಲ ₹ 10 ಸಾವಿರವಷ್ಟೇ ಸಂಬಳ ನೀಡಲಾಗುತ್ತಿದೆ. ಇತರೆ ಶುಶ್ರೂಷಕರಿಗೆ ಇರುವಂತಹ ಕ್ವಾರಂಟೈನ್, ವಿಮೆ ಮೊದಲಾದ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ. ಇದು ಸರಿಯೇ’ ಎಂದು ಪ್ರಶ್ನಿಸಿದರು.

‘ಕೋವಿಡ್‌ ಸಂಕಷ್ಟದಲ್ಲಿ ನಾವು ಕರ್ತವ್ಯವನ್ನು ನಿರ್ವಹಿಸುವುದಿಲ್ಲ ಎಂದು ಹೇಳುತ್ತಿಲ್ಲ. ನಾವು ಯಾವುದೇ ಕರ್ತವ್ಯ ಕೊಟ್ಟರೂ ನಿಭಾಯಿಸಲು ಸಿದ್ಧ. ಆದರೆ, ನಮ್ಮನ್ನು ಕಾಯಂಗೊಳಿಸಬೇಕು, ಇಲ್ಲವೇ ಗುತ್ತಿಗೆ ಆಧಾರದ ಸಿಬ್ಬಂದಿಯನ್ನಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

‘ಜುಲೈ 10ರಂದು ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಭರವಸೆ ನೀಡಲಾಗಿದೆ. ಅಲ್ಲಿಯವರೆಗೆ ನಾವು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತೇವೆ. ನಂತರ, ಮುಖ್ಯಮಂತ್ರಿ, ವೈದ್ಯಕೀಯ ಸಚಿವರಿಗೆ ಏಕಕಾಲಕ್ಕೆ ಟ್ವಿಟ್‌ ಮಾಡುವ ಮೂಲಕ ಅವರ ಗಮನ ಸೆಳೆಯುತ್ತೇವೆ’ ಎಂದು ಹೇಳಿದರು.

ಲಾಕ್‌ಡೌನ್‌ ಅವಧಿಯ ವೇತನ ನೀಡಲು ಆಗ್ರಹ

ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌, ವಸತಿ ಶಾಲೆಗಳ ಹೊರಗುತ್ತಿಗೆ ಕಾರ್ಮಿಕರು ಲಾಕ್‌ಡೌನ್‌ ಅವಧಿಗೆ ವೇತನ ಮತ್ತು ಜೂನ್‌ ತಿಂಗಳಿನಿಂದ ಕೆಲಸ ನೀಡುವಂತೆ ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಮುಂದೆ ಸೇರಿದ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು.

ಕಳೆದ 18 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಲಾಕ್‌ಡೌನ್‌ ಅವಧಿಯ ಸಂಬಳ ನೀಡಿಲ್ಲ. ಇವರ ಬದುಕು ಶೋಚನೀಯವಾಗಿದೆ ಎಂದು ಆಳಲು ತೋಡಿಕೊಂಡರು.

ಕಾರ್ಮಿಕರಿಗೆ ಇಪಿಎಫ್‌ ಪಾವತಿ ಕುರಿತು ಮಾಹಿತಿ ನೀಡಬೇಕು, 4 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಹಿಂಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಕಾರ್ಯದರ್ಶಿ ಎನ್.ಮುದ್ದುಕೃಷ್ಣ, ಮುಖಂಡರಾದ ಚಂದ್ರಶೇಖರ್‌ ಮೇಟಿ, ರವಿ, ಲೋಕೇಶ್, ಮಹದೇವಮ್ಮ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT