ಭಾನುವಾರ, ಜನವರಿ 19, 2020
28 °C
‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ ಸಹಯೋಗದಲ್ಲಿ ‘ನವೋ–ಪ್ರಮತಿ’ ನಾಗರಿಕ ಸೇವಾ ಪರೀಕ್ಷಾ ತರಬೇತಿ ಉಚಿತ ಕಾರ್ಯಾಗಾರ

ಸಾಧಕರ ಮಾರ್ಗದರ್ಶನ; ತದೇಕಚಿತ್ತದಲ್ಲಿ ತಲ್ಲೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕಾರ್ಯಾಗಾರ ಆರಂಭಕ್ಕೂ ಮುನ್ನವೇ ಕಿಕ್ಕಿರಿದು ತುಂಬಿದ್ದ ಕಲಾಮಂದಿರದ ಸಭಾಂಗಣ. ಸಾಧಕರ ಮಾರ್ಗದರ್ಶನ, ಸಲಹೆಗೆ ಕಿವಿಗೊಟ್ಟ ಯುವ ಸಮೂಹ. ಪ್ರಮುಖ ಸೂಚನೆಗಳನ್ನು ಬರೆದುಕೊಂಡ ಪರೀಕ್ಷಾಕಾಂಕ್ಷಿಗಳು...

ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಅವರ ಸ್ಫೂರ್ತಿಯ ನುಡಿಮುತ್ತುಗಳನ್ನು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೊ ಚಿತ್ರೀಕರಿಸಿಕೊಂಡ ಯುಪಿಎಸ್‌ಸಿ/ಕೆಪಿಎಸ್‌ಸಿ ಪರೀಕ್ಷಾಕಾಂಕ್ಷಿಗಳು, 2020ನೇ ಸಾಲಿನ ಪರೀಕ್ಷೆಯಲ್ಲಿ ಯಶಸ್ಸು ಪಡೆಯುವ ಸಂಕಲ್ಪತೊಟ್ಟರು.

ಈ ದೃಶ್ಯಾವಳಿ ಗೋಚರಿಸಿದ್ದು ನವೋದಯ ಫೌಂಡೇಷನ್, ಪ್ರಮತಿ ಹಿಲ್‌ ವ್ಯೂ ಅಕಾಡೆಮಿ, ‘ಪ್ರಜಾವಾಣಿ–ಡೆಕ್ಕನ್‌ಹೆರಾಲ್ಡ್‌’ ಸಹಯೋಗದಲ್ಲಿ ಗುರುವಾರ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ‘ನವೋ–ಪ್ರಮತಿ’ ನಾಗರಿಕ ಸೇವಾ ಪರೀಕ್ಷಾ ತರಬೇತಿಯ ಒಂದು ದಿನದ ಉಚಿತ ಕಾರ್ಯಾಗಾರದಲ್ಲಿ.

ಎರಡು ಸಹಸ್ರಕ್ಕೂ ಹೆಚ್ಚು ಯುವಕ–ಯುವತಿಯರು ಕಲಾಮಂದಿರದ ಆವರಣದಲ್ಲಿ ಜಮಾಯಿಸಿದ್ದರು. ಸಾಧಕರ ಸ್ಫೂರ್ತಿಯ ನುಡಿಗಳನ್ನು ಕುಳಿತು ಆಲಿಸಲು ಅವಕಾಶ ಸಿಗದಿದ್ದರೂ ನಿರಾಶರಾಗದೆ, ನಿಂತುಕೊಂಡೇ ಪ್ರಮುಖ ಅಂಶಗಳನ್ನು ನೋಟ್ಸ್‌ ಮಾಡಿಕೊಂಡರು. ಹೊರಭಾಗದಲ್ಲಿ ಹಾಕಿದ್ದ ಪರದೆ ಮೂಲಕವೇ ಕಾರ್ಯಾಗಾರ ಕಣ್ತುಂಬಿಕೊಂಡರು. ಪರೀಕ್ಷಾ ಪೂರ್ವ ತಾಲೀಮಿಗೆ ಸಜ್ಜುಗೊಂಡರು.

ಮೈಸೂರು ನಗರ/ಜಿಲ್ಲೆ, ನೆರೆಹೊರೆಯ ಚಾಮರಾಜನಗರ, ಮಂಡ್ಯ, ಹಾಸನ, ಮಡಿಕೇರಿ ಸೇರಿದಂತೆ ದೂರದ ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಯಲ್ಲಿನ ಪರೀಕ್ಷಾಕಾಂಕ್ಷಿಗಳು ಕಾರ್ಯಾಗಾರಕ್ಕಾಗಿಯೇ ಬಂದಿದ್ದರು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ಯುಪಿಎಸ್‌ಸಿ/ಕೆಪಿಎಸ್‌ಸಿ ಪರೀಕ್ಷೆಗಳಿಗೆ ಯಾವ ರೀತಿ ತಯಾರಿ ನಡೆಸಬೇಕು ಎಂಬ ಉಪಯುಕ್ತ ಮಾಹಿತಿ ನೀಡಿದರೆ, ಕೇಂದ್ರ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ.ಗೋಪಿನಾಥ್ ಪರೀಕ್ಷೆಗೆ ತಯಾರಿಯಿಂದ ಹಿಡಿದು ಸಂದರ್ಶನವನ್ನು ಹೇಗೆ ಎದುರಿಸಬೇಕು. ಯಾವ್ಯಾವ ದೃಷ್ಟಿಕೋನದ ಪ್ರಶ್ನೆಗಳು ಎದುರಾಗುತ್ತವೆ. ಅವಕ್ಕೆ ಯಾವ ರೀತಿಯ ಉತ್ತರ ನೀಡಬೇಕು ಎಂಬ ಸೂಕ್ಷ್ಮತೆಯನ್ನು ಎಳೆ ಎಳೆಯಾಗಿ ನೆರೆದಿದ್ದ ಯುವ ಸಮೂಹದ ಮನಸ್ಸಿಗೆ ನಾಟುವಂತೆ ತಿಳಿಸಿದರು.

ಸಹಸ್ರ, ಸಹಸ್ರ ಯುವಕರು ಒಂದೆಡೆ ಜಮಾಯಿಸಿದ್ದರೂ ಮಾತಿನ ಗದ್ದಲವಿರಲಿಲ್ಲ. ಇಡೀ ಸಭಾಂಗಣ ನಿಶಬ್ಧವಾಗಿತ್ತು. ಸಾಧಕರು, ಹಿರಿಯರು ನೀಡಿದ ಸಲಹೆ, ಮಾರ್ಗದರ್ಶನವನ್ನು ಯುವ ಮನಸ್ಸುಗಳು ಗಂಭೀರ ವದನರಾಗಿ ಆಲಿಸಿದರು. ತಾಸುಗಟ್ಟಲೇ ಕೂತರು. ಹೊರಗೆ–ಒಳಗೆ ಎದ್ದು ಓಡಾಡಲೇ ಇಲ್ಲ. ಸಂಘಟಕರು ಕುಳಿತಲ್ಲಿಗೆ ನೀಡಿದ ಬಿಸ್ಕೆಟ್‌ಗಳನ್ನು ತಿಂದು ತಮ್ಮ ಹಸಿವನ್ನು ತಾತ್ಕಾಲಿಕವಾಗಿ ಇಂಗಿಸಿಕೊಂಡರು. ಹೊರಗೆ ಊಟ ಬಡಿಸಲಾರಂಭಿಸಿದರೂ, ಕಾರ್ಯಾಗಾರ ಸಂಪೂರ್ಣಗೊಳ್ಳುವ ತನಕವೂ ಕದಲಿಲ್ಲ.

ಕಾರ್ಯಾಗಾರ ಆರಂಭಕ್ಕೂ ಮುನ್ನ, ನಂತರವೂ ಕಾಲೇಜು ವಿದ್ಯಾರ್ಥಿಗಳು ತಂಡೋಪ ತಂಡವಾಗಿ ಕಲಾಮಂದಿರದ ಸಭಾಂಗಣಕ್ಕೆ ಬಂದಿದ್ದು ವಿಶೇಷವಾಗಿತ್ತು. ಐದು ಕೌಂಟರ್‌ಗಳಲ್ಲಿ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು. ಭಾಗಿಯಾಗಿದ್ದ ಎಲ್ಲರಿಗೂ ನಾಲ್ಕು ಕೌಂಟರ್‌ಗಳಲ್ಲಿ ಊಟ ಬಡಿಸಲಾಯಿತು. ಈಗಾಗಲೇ ಪರೀಕ್ಷೆ ಬರೆದಿದ್ದವರು ಕಾರ್ಯಾಗಾರಕ್ಕೆ ಬಂದಿದ್ದರು.

ತಾಯಿಯಾದ ಬಳಿಕ ಅಧಿಕಾರಿಯಾದೆ..!

‘ಮದುವೆಯಾಗಿ, ಮಗುವಿಗೆ ತಾಯಿಯಾದ ಬಳಿಕ ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಆರಂಭಿಸಿದೆ. 1998, 1999ರಲ್ಲಿ ಸಂದರ್ಶನಕ್ಕೂ ಆಯ್ಕೆಯಾಗಿದ್ದೆ. ಕೆಲಸ ಸಿಗಲಿಲ್ಲ. ಈ ನಡುವೆ ಅಬಕಾರಿ ಇನ್ಸ್‌ಪೆಕ್ಟರ್‌ ಆಗಿ ನೇಮಕಗೊಂಡೆ.

ನಾಲ್ಕು ತಿಂಗಳು ರಜೆ ಹಾಕಿ ತಯಾರಿ ನಡೆಸಿದೆ. ಮೂರನೇ ಯತ್ನದಲ್ಲಿ 2004ರಲ್ಲಿ ಉಪವಿಭಾಗಾಧಿಕಾರಿಯಾಗಿ ನೇಮಕಗೊಂಡೆ. ಆತ್ಮವಿಶ್ವಾಸ, ಸತತ ಪ್ರಯತ್ನವಿದ್ದರೆ ಸಾಧನೆ ಸುಲಭ. ಇದಕ್ಕೆ ವಯಸ್ಸಿನ ಪರಿಮಿತಿಯಿಲ್ಲ. ನಾನು ಅಧಿಕಾರಿಯಾಗಿ ನೇಮಕಗೊಂಡಾಗ ನನ್ನ ಮಗಳು ಮೂರನೇ ತರಗತಿಯಲ್ಲಿ ಓದುತ್ತಿದ್ದಳು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಕಾರ್ಯಾಗಾರದಲ್ಲಿ ತಮ್ಮದೇ ಯಶೋಗಾಥೆ ಮೂಲಕ ನೆರೆದಿದ್ದ ಯುವ ಸಮೂಹಕ್ಕೆ ಸ್ಫೂರ್ತಿ ತುಂಬಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು