ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಇದೆಯಾ? ಸತ್ತು ಹೋಗಿದೆಯಾ? : ವಾಟಾಳ್ ನಾಗರಾಜ್

ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ವಾಗ್ದಾಳಿ
Last Updated 13 ಸೆಪ್ಟೆಂಬರ್ 2020, 13:43 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯ ಸರ್ಕಾರ ಅಸ್ತಿತ್ವದಲ್ಲಿದೆಯಾ? ಇಲ್ಲವೇ ಸತ್ತು ಹೋಗಿದೆಯಾ?’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಭಾನುವಾರ ಇಲ್ಲಿ ವಾಗ್ದಾಳಿ ನಡೆಸಿದರು.

‘ಬಿ.ಎಸ್.ಯಡಿಯೂರಪ್ಪ ಅವರೇ ನಿಮ್ಮ ನೇತೃತ್ವದ ಸರ್ಕಾರಕ್ಕೆ ಹೃದಯವೇ ಇಲ್ವಾ? ಕೊರೊನಾ ಸೋಂಕಿಗೆ ನಿತ್ಯವೂ ಸರಾಸರಿ ನೂರರಿಂದ ನೂರೈವತ್ತು ಜನರು ಸಾಯುತ್ತಿದ್ದರೂ, ಆ ಕುಟುಂಬಗಳ ನೋವು ನಿಮಗೆ ಅರಿವಾಗುತ್ತಿಲ್ಲವೇ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಆರು ಗೇಟ್‌ ವೃತ್ತದಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಬೆಂಬಲಿಗರೊಂದಿಗೆ ಪ್ರತಿಭಟಿಸಿದ ವಾಟಾಳ್ ನಾಗರಾಜ್, ಮಾಧ್ಯಮದವರ ಜೊತೆ ಮಾತನಾಡಿದರು.

‘ಸಚಿವ ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ಮತ್ತೊಮ್ಮೆ ಮುಂದಾಗಿದ್ದಾರೆ. ಮೊದಲು ಈ ನಾಟಕ ನಿಲ್ಲಿಸಿ. ನಿಮ್ಮ ಸರ್ಕಾರಕ್ಕೆ ಕೋವಿಡ್ ತಗುಲಿದೆಯಾ?’ ಎಂದು ಕಿಡಿಕಾರಿದ ವಾಟಾಳ್, ‘ಕೊರೊನಾ ವೈರಸ್ ಸೋಂಕಿತರಿಗೆ ಇಂದಿಗೂ ಸಮರ್ಪಕ ಚಿಕಿತ್ಸೆ ಸಿಗ್ತಿಲ್ಲ. ಗಂಭೀರ ಪರಿಸ್ಥಿತಿಯಲ್ಲಿ ಇರೋರಿಗೆ ವೆಂಟಿಲೇಟರ್ ಲಭ್ಯವಿಲ್ಲ. ಇನ್ನಾದರೂ ಹುಷಾರಾಗಿ, ಗಂಭೀರರಾಗಿ ಆಡಳಿತ ನಡೆಸಿ. ನಿಮ್ಮ ಸಲಹೆಗಾರರು ಯಾರು? ಕೊರೊನಾಗೆ ಸಂಬಂಧಿಸಿದಂತೆ ಶ್ವೇತಪತ್ರ ಪ್ರಕಟಿಸಿ’ ಎಂದು ಆಗ್ರಹಿಸಿದರು.

‘ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಕೊರೊನಾ ಸೋಂಕಿತರ ಪಾಲಿಗೆ ಯಮನ ಅರಮನೆಯಾದರೆ; ಕರ್ನಾಟಕ ಸಾವಿನ ಅರಮನೆಯಾಗಿದೆ. ಸಚಿವರು ಎಲ್ಲಿ ಹೋಗಿದ್ದಾರೆ? ಎಂಬುದೇ ಗೊತ್ತಾಗುತ್ತಿಲ್ಲ. ಕೋವಿಡ್‌ನಿಂದ ಮೃತಪಟ್ಟವರ ಪ್ರತಿ ಕುಟುಂಬಕ್ಕೂ ತಲಾ ₹ 5 ಲಕ್ಷ ಪರಿಹಾರ ನೀಡಬೇಕು’ ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

‘ಕೊರೊನಾ ವೈರಸ್ ಸೋಂಕು ನಿಯಂತ್ರಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುವ ಅರ್ಹತೆ ಇಲ್ಲ. ತಕ್ಷಣವೇ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಾಗಬೇಕು’ ಎಂದರು.

ಮೂಗೂರು ನಂಜುಂಡಸ್ವಾಮಿ, ಚಂದ್ರಶೇಖರ್, ಜಿ.ರಾಮು, ಬಾಲಾಜಿ ಕೃಷ್ಣಮೂರ್ತಿ, ಪಾರ್ಥಸಾರಥಿ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT