ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ದಾರಿಯಲ್ಲಿ- 14: ‘ವಿವಿದ್‌’ ಓದುವ ಮನೆಯಲ್ಲಿ ಕನ್ನಡದ ಬೆಳಕು

Last Updated 19 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಕನಸು ಹೊತ್ತ, ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳಿಗೆ, 2017ರಲ್ಲಿ ‘ಓದುವ ಕೊಠಡಿ’ ತೆರೆದ ನಗರದ ಉಪನ್ಯಾಸಕರೊಬ್ಬರು 2 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಅಧ್ಯಯನಕ್ಕೆ ಉಚಿತವಾಗಿ ನೀಡುತ್ತಿದ್ದಾರೆ!

ಬಿಜಿಎಸ್‌ ಬಿ.ಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಬಿ.ಬೆಟ್ಟಸ್ವಾಮಿ, ಕುವೆಂಪುನಗರದ ‘ಎನ್‌’ ಬ್ಲಾಕ್‌ನಲ್ಲಿ ‘ವಿವಿದ್‌ ಓದುವ ಮನೆ’ಯನ್ನು ತೆರೆದವರು. ಓದಲು ಉಚಿತ ಸ್ಥಳಾವಕಾಶ ನೀಡುವುದಲ್ಲದೆ, ಇಲ್ಲಿನ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಬಹುದು.

ಎಸ್‌ಬಿಎಂ ಬಡಾವಣೆಯಲ್ಲಿರುವ ಅವರ ಮನೆಯಲ್ಲಿಯೂ 10 ಸಾವಿರಕ್ಕೂ ಹೆಚ್ಚು ಕನ್ನಡ ಸಾಹಿತ್ಯದ ಪುಸ್ತಕಗಳಿವೆ. ಓದುವ ಅಭಿರುಚಿಯನ್ನು ವಿದ್ಯಾರ್ಥಿಗಳಲ್ಲಿ ರೂಢಿಸುವುದಕ್ಕೆ ಅವು ಮೀಸಲು. ವಿದ್ಯಾರ್ಥಿಗಳಿಗೆ ಕೇಳಿದ ಪುಸ್ತಕಗಳನ್ನು ನೀಡುವುದಷ್ಟೇ ಅಲ್ಲ, ಆ ಪುಸ್ತಕದ ಕುರಿತು ಅವರು ಸಂವಾದ ಏರ್ಪಡಿಸುತ್ತಾರೆ. ಕನ್ನಡ ಸಾಹಿತ್ಯ ಓದುತ್ತಿರುವ ಪದವಿ ವಿದ್ಯಾರ್ಥಿಗಳಿಗೆ ಕೆ–ಸೆಟ್‌, ನೆಟ್‌ ಪರೀಕ್ಷೆ ತಯಾರಿಯ ಪೂರಕ ಪುಸ್ತಕಗಳು ಓದುವ ಮನೆಯಲ್ಲಿ ಲಭ್ಯ.

‘ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪುಸ್ತಕ ಸಿಗುತ್ತಿದ್ದರೂ, ಹೊಸ ಪುಸ್ತಕಗಳು ದೊರೆಯುವುದು ತಡವಾಗಿ. ಸಿಕ್ಕರೂ ಎಲ್ಲರಿಗೂ ಲಭ್ಯವಾಗದು. ಪರಾಮರ್ಶನ ಗ್ರಂಥಗಳ ಜೊತೆಗೆ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನದ ಜ್ಞಾನ ಅಗತ್ಯ. ಹೀಗಾಗಿಯೇ ಪುಸ್ತಕಗಳೊಂದಿಗೆ ಪರೀಕ್ಷೆಗಳಿಗಾಗಿಯೇ ಇರುವ ನಿಯತಕಾಲಿಕೆಗಳು, ವೃತ್ತ ಪತ್ರಿಕೆಗಳು ಓದುವ ಮನೆ ಲಭ್ಯವಿವೆ’ ಎಂದು ಬೆಟ್ಟಸ್ವಾಮಿ ತಿಳಿಸಿದರು.

‘ನಾನು ವಿದ್ಯಾರ್ಥಿಯಾಗಿದ್ದಾಗ ಮಾರ್ಗದರ್ಶನ ನೀಡುವವರು ಯಾರೂ ಇರಲಿಲ್ಲ. ಇಂಥ ಪುಸ್ತಕ ಈ ಪರೀಕ್ಷೆಗೆ ಸಹಾಯಕ ಎಂಬುದನ್ನು ತಿಳಿಸುವವರೂ ಇರಲಿಲ್ಲ. ಹೀಗಾಗಿಯೇ ವಿವಿದ್‌ ಓದುವ ಮನೆಯನ್ನು ತೆರೆಯಲಾಗಿದೆ. ವಿವಿದ್‌ ಎಂದರೆ ಬೆಳಕು. ಯಾರೂ ಬೇಕಾದರೂ ಬಂದು ಓದಿನ ಬೆಳಕು ಕಾಣಬಹುದು. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉದ್ಯೋಗ ಕಂಡುಕೊಂಡರಷ್ಟೇ ಸಾಕು. ಇದೀಗ ಉದ್ಯೋಗ ಕಂಡುಕೊಂಡವರು ನೆರವಾಗುತ್ತಿದ್ದಾರೆ. ಪುಸ್ತಕಗಳನ್ನು ನೀಡುತ್ತಿದ್ದಾರೆ. ಹೀಗೆ ಪುಸ್ತಕ ಹಂಚುವ ಕೆಲಸ ಮುಂದುವರಿದಿದೆ’ ಎಂದು ಹೇಳಿದರು.

‘ವಿವಿದ್‌ ಓದುವ ಮನೆ’ಯಲ್ಲಿ ಓದಿದ ಬಹುತೇಕರು ಕೆಪಿಎಸ್‌ಸಿ,ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಪೊಲೀಸ್, ಎಸ್‌ಡಿಎ, ಎಫ್‌ಡಿಎ, ಶಿಕ್ಷಕ, ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

‘ಬೇಕಾದ ಪುಸ್ತಕಗಳನ್ನು ಪ್ರತಿ ತಿಂಗಳೂ ಓದುವ ಮನೆಯಲ್ಲಿ ಸೇರ್ಪಡೆ ಆಗುತ್ತಿದ್ದವು. 2017ರಿಂದಲೂ ಇಲ್ಲಿಯೇ ಎಲ್ಲ ಪರೀಕ್ಷೆಗಳಿಗೆ ತಯಾರಿನಡೆಸಿದೆ. 2020ರಲ್ಲಿ ನಡೆದ ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಡಿವೈಎಸ್‌ಪಿ ಆಗುವುದು ನನ್ನ ಕನಸು. ಇದಕ್ಕೆ ತಯಾರಿ ಮುಂದುವರಿಸಿದ್ದೇನೆ’ ಎಂದು ಬಡಗಲಪುರದ ಬಿ.ಜೆ.ಪ್ರಸನ್ನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT