ಶನಿವಾರ, ಸೆಪ್ಟೆಂಬರ್ 25, 2021
22 °C
ಅಧಿಕಾರಿಗಳ ಸಭೆ, ಪರ್ಯಾಯ ಕ್ರಮ ಕೈಗೊಳ್ಳುವಂತೆ ಶಾಸಕ ಎಚ್‌.ಪಿ.ಮಂಜುನಾಥ್ ಸೂಚನೆ

33 ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ತಾಲ್ಲೂಕಿನ 41 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಶಾಸಕ ಎಚ್‌.ಪಿ.ಮಂಜುನಾಥ್ ಹೇಳಿದರು.

ನಗರದಲ್ಲಿ ಪಿಡಿಒ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿ ಮಾತನಾಡಿದ ಅವರು, ‘ತಾಲ್ಲೂಕಿನ 41 ಗ್ರಾಮ ಪಂಚಾಯಿತಿಗಳಲ್ಲಿ ಮುಂದಿನ 2 ತಿಂಗಳಿಗೆ ಆಗುವಷ್ಟು ನೀರು ಲಭ್ಯವಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವ ದಿಕ್ಕಿನಲ್ಲಿ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ತಾಲ್ಲೂಕಿನ 33 ಗ್ರಾಮಗಳಲ್ಲಿ ಭವಿಷ್ಯದಲ್ಲಿ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳೆಂದು ಗುರುತಿಸಿದ್ದು, ಈ ಗ್ರಾಮಗಳಲ್ಲಿ ಪರಿಹಾರ ಕ್ರಮ ಕುರಿತು ಚರ್ಚಿಸಲಾಗುತ್ತಿದೆ ಎಂದರು.

ಕೊಳಾಯಿ ನೀರು ಸರಬರಾಜು ಯೋಜನೆಯಲ್ಲಿ 328 ಕಾಮಗಾರಿಗಳು ಚಾಲ್ತಿಯಲ್ಲಿವೆ. ಈ ಪೈಕಿ 16 ಯೋಜನೆ ಗಳು ವಿವಿಧ ಕಾರಣಗಳಿಂದ ಸ್ಥಗಿತ ಗೊಂಡಿವೆ. ಕಿರು ನೀರಿನ ಸರಬರಾಜು ಯೋಜನೆ ಅಡಿಯಲ್ಲಿ 314 ಕಾಮಗಾರಿ ಗಳು ಜಾರಿಗೊಂಡಿದ್ದು, ಈ ಪೈಕಿ 18 ಗ್ರಾಮಗಳಲ್ಲಿ ಯೋಜನೆ ಸ್ಥಗಿತಗೊಂಡಿವೆ. ಕೈಪಂಪ್ ನೀರಿನ ಯೋಜನೆಯಲ್ಲಿ 1,387 ಕೊಳವೆಬಾವಿಗಳಿಗೆ ಕೈ ಪಂಪ್ ಅಳವಡಿಸಲಾಗಿತ್ತು. ಆದರೆ, ಈ ಪೈಕಿ 176 ಯುನಿಟ್‌ಗಳು ಸ್ಥಗಿತಗೊಂಡಿವೆ ಎಂದರು.

ಜಾಬಗೆರೆ ಗ್ರಾಮ ಪಂಚಾಯಿತಿ ಪಿಡಿಒ ಮಹೇಶ್‌ ಮಾತನಾಡಿ, ‘ಕೆ.ಆರ್‌.ನಗರದಿಂದ ಹುಣಸೂರಿಗೆ ಕಾವೇರಿ ಕುಡಿಯುವ ನೀರು ಯೋಜನೆಯಲ್ಲಿ ಮಾರ್ಗ ಮಧ್ಯೆ ಜಾಬಗೆರೆಗೆ ಸಂಪರ್ಕ ಕಲ್ಪಿಸಲಾಗಿದೆ. ಈ ಪೈಪ್‌ಲೈನ್‌ನಲ್ಲಿ ವಾಲ್ವ್ 4 ತಿಂಗಳ ಹಿಂದೆ ಕೆಟ್ಟಿದ್ದು, ದುರಸ್ತಿಗೊಳಿಸಲು ಹುಣಸೂರು ನಗರಸಭೆ ಸ್ಪಂದಿಸುತ್ತಿಲ್ಲ. ಹೀಗಾಗಿ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದೆ’ ಎಂದು ದೂರಿದರು.

ಶಾಸಕ ಎಚ್‌.ಪಿ.ಮಂಜುನಾಥ್, ಹುಣಸೂರು ನಗರಸಭೆ ಅಧಿಕಾರಿಗಳು ಶೀಘ್ರ ಸಮಸ್ಯೆಗೆ ಸ್ಪಂದಿಸಿ ಕಾಮಗಾರಿ ನಡೆಸಲು ಸೂಚಿಸಿದರು.

ಸಭೆಯಲ್ಲಿ ಜಿ.ಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಜಿ.ಪಂ ಸದಸ್ಯ ಕಾಟನಾಯಕ, ತಾ.ಪಂ ಅಧ್ಯಕ್ಷೆ ಪದ್ಮಮ್ಮ, ನಗರಸಭೆ ಸದಸ್ಯರು ಮತ್ತು ಅಧಿಕಾರಿಗಳಿದ್ದರು.

140 ಕೊಳವೆಬಾವಿ ಮಂಜೂರು

ಹುಣಸೂರು ತಾಲ್ಲೂಕಿಗೆ ಸರ್ಕಾರದಿಂದ 140 ಕೊಳವೆಬಾವಿಗಳು ಮಂಜೂರಾಗಿದ್ದು, ಎರಡು ಏಜೆಸ್ಸಿಗಳನ್ನು ನೇಮಿಸಿ ಕೊಳವೆಬಾವಿ ಕೊರೆಯಲು ಆದೇಶ ನೀಡಲಾಗಿದೆ. ಆದರೆ, ಯಾವ ಯೋಜನೆಯಲ್ಲಿ ಈ ಕೆಲಸ ನಡೆದಿದೆ ಎಂದು ತಿಳಿದಿಲ್ಲ. ಕೊಳವೆಬಾವಿ ಕೊರೆಯುವವರಿಗೆ ಎಲ್ಲಿ ಕೊರೆಯಬೇಕು ಎಂದು ಸೂಚಿಸುವವರಿಲ್ಲವಾಗಿದೆ ಎಂದು ಎಚ್‌.ಪಿ.ಮಂಜುನಾಥ್‌ ಹೇಳಿದರು.

ಪಂಚಾಯಿತಿಗಳಲ್ಲಿ ಕುಡಿಯುವ ನೀರು ಸಮಸ್ಯೆಗೆ ಅನುದಾನ ಕಾದಿಡುವ ವ್ಯವಸ್ಥೆಯನ್ನು ಕೈಬಿಡಲಾಗಿದೆ. ಇದರಿಂದ ಬೇಸಿಗೆಯಲ್ಲಿ ತ್ವರಿತವಾಗಿ ಕ್ರಮ ತೆಗೆದುಕೊಳ್ಳುವುದು ಕಷ್ಟಸಾಧ್ಯವಾಗಿದೆ. ಬೇಸಿಗೆಯಲ್ಲಿ ಕೊಳವೆಬಾವಿ ನೀರು ಪೂರೈಸುವವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕಿದೆ. ತಹಶೀಲ್ದಾರ್ ಟೆಂಡರ್ ಕರೆದು ನೀರು ಸರಬರಾಜು ಮಾಡುವವರನ್ನು ನಿಯೋಜಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು