ಶನಿವಾರ, ಡಿಸೆಂಬರ್ 14, 2019
24 °C

ಪ್ರಜಾವಾಣಿ ‘ದೀಪಾವಳಿ ಕಥೆ, ಕವನ’ ಸ್ಪರ್ಧೆ: ಗುಟ್ಟು ಬಿಚ್ಚಿಟ್ಟ ದೇವನೂರು ಮಹಾದೇವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  2019ನೇ ಸಾಲಿನ ಪ್ರತಿಷ್ಠಿತ ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ ಮತ್ತು ‘ಪ್ರಜಾವಾಣಿ ದೀಪಾವಳಿ ಕವನಸ್ಪರ್ಧೆ’ಗಳ ವಿಜೇತರಿಗೆ ಕತೆಗಾರ ದೇವನೂರು ಮಹಾದೇವ ಮಂಗಳವಾರ ಬಹುಮಾನ ವಿತರಿಸಿದರು.

ಕಥಾಸ್ಪರ್ಧೆಯಲ್ಲಿ ಗುರುಪ್ರಸಾದ್ ಕಂಟಲಗೆರೆ, ಕವನ ಸ್ಪರ್ಧೆಯಲ್ಲಿ ಪ್ರವೀಣ ಕೆ. ಪ್ರಥಮ ಬಹುಮಾನ ಪಡೆದರು. ಮಾಧವಿ ಭಂಡಾರಿ ಮತ್ತು ಜಿ.ಆರ್‌.ಚಂದ್ರಶೇಖರ್ ಅವರು ಕಥಾ ಸ್ಪರ್ಧೆಯಲ್ಲಿ ಕ್ರಮವಾಗಿ ಎರಡನೆಯ ಮತ್ತು ಮೂರನೆಯ ಬಹುಮಾನಕ್ಕೆ ಪಾತ್ರವಾದವು. ಎಂ.ಡಿ. ಒಕ್ಕುಂದ ಮತ್ತು ಪ್ರಕಾಶ ಪೊನ್ನಾಚಿ ಕವನ ಸ್ಪರ್ಧೆಯಲ್ಲಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು. ಕೇಶವ ಮಳಗಿ ಮತ್ತು ಸುನಂದಾ ಕಡಮೆ ಅವರು ಕಥಾಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಇದನ್ನೂ ಓದಿ: ಪ್ರಜಾವಾಣಿ ‘ದೀಪಾವಳಿ ಕಥೆ, ಕವನ’ ಸ್ಪರ್ಧೆ: ಗುರುಪ್ರಸಾದ್, ಪ್ರವೀಣ ಪ್ರಥಮ

ಮಕ್ಕಳ ವರ್ಣಚಿತ್ರ ಸ್ಪರ್ಧೆಯಲ್ಲಿ ಪೃಥ್ವಿರಾಜ್ ಎಂ.ಆರ್. ಆಳ್ವ (ಮಡಿಕೇರಿ), ಬಂದೇನವಾಜ್ (ಕುರುಕುಂದ, ಮಾನ್ವಿ ತಾಲ್ಲೂಕು), ಪ್ರತೀಕ್ಷಾ ಮರಕಿಣಿ (ಬೆಂಗಳೂರು), ಅಭಿನವ್ ಎಸ್. ರಾವ್ (ಬೆಂಗಳೂರು), ಕೆ. ಪ್ರಥಮ್ ಕಾಮತ್ (ಕಟಪಾಡಿ, ಉಡುಪಿ ಜಿಲ್ಲೆ), ಸಾನಿಯಾ ಐ. ಯಲಿಗಾರ (ಗಜೇಂದ್ರಗಡ, ಗದಗ ಜಿಲ್ಲೆ), ಕಾರ್ತೀಕ್ ಎಂ.ಎಸ್. (ಭರಮಸಾಗರ, ಚಿತ್ರದುರ್ಗ ಜಿಲ್ಲೆ), ಪ್ರಗತಿ ಡಿ.ಕೆ. (ಜಿಗಳಿ, ಹರಿಹರ ತಾಲ್ಲೂಕು) ಅವರ ಬಿಡಿಸಿದ ವರ್ಣಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಕಲಾವಿದ ಜೆ.ಎಂ.ಎಸ್. ಮಣಿ ಅವರು ವರ್ಣಚಿತ್ರ ಸ್ಪರ್ಧೆಯ ತೀರ್ಪುಗಾರ ಆಗಿದ್ದರು.

ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಮೊದಲ ಮೂರು ಕಥೆಗಳಿಗೆ ಕ್ರಮವಾಗಿ ₹ 20 ಸಾವಿರ, ₹ 15 ಸಾವಿರ ಹಾಗೂ ₹ 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ, ಕವನ ಸ್ಪರ್ಧೆ ವಿಭಾಗದ ಮೊದಲ ಮೂರು ಕವನಗಳಿಗೆ ಕ್ರಮವಾಗಿ ₹ 5,000, ₹ 3,000 ಹಾಗೂ ₹ 2,500 ನಗದು, ಪ್ರಶಸ್ತಿ ಪತ್ರ, ಮಕ್ಕಳ ವರ್ಣಚಿತ್ರ ಸ್ಪರ್ಧೆಯ ವಿಜೇತರಿಗೆ ತಲಾ ₹ 2,500 ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ದೇವನೂರು ಮಹಾದೇವ ಭಾಷಣ | ಬಹುಮಾನ ನೀಡುತ್ತ ಹಿಂದೆ ಇಂದು ಮುಂದೆ ನೋಡಿದಾಗ

ಪ್ರಜಾವಾಣಿ ದೀಪಾವಳಿ ಸಂಚಿಕೆಯ ಕಥಾ ಕವನ ಸ್ಪರ್ಧಾ ವಿಜೇತರಿಗೆ ನಾನೀಗ ಬಹುಮಾನ ವಿತರಣೆ ಮಾಡಬೇಕಾಗಿ ಬಂದಿದೆ. ಇಲ್ಲೊಂದು ಗುಟ್ಟು ಹೇಳುವೆ. ಆದರೆ ಒಂದು ಕಂಡೀಷನ್ನು. ಕೇಳಿದ ಮೇಲೆ ಬಹುಮಾನಿತರಾದ ನೀವು- ಎಂಥವನ ಕೈಯಲ್ಲಿ ಪ್ರೈಜ್ ಪಡೆಯಬೇಕಾಗಿ ಬಂತು ಎಂದು ಪರಿತಪಿಸಬಾರದು! ಗುಟ್ಟು ಏನೆಂದರೆ- ನಾನೂ ಈ ಹಿಂದೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಗೆ ಎರಡು ಸಲ ಕತೆ ಕಳಿಸಿದ್ದೆ. ಪ್ರೈಜ್ ಇರಲಿ, ಮೆಚ್ಚುಗೆಯೂ ಬರಲಿಲ್ಲ. ಆದರೆ ಒಂದು ಕತೆ ಸ್ವಲ್ಪ ದಿನಗಳಾದ ಮೇಲೆ ವಾರದ ಪುರವಣಿಯಲ್ಲಿ ಪ್ರಕಟವಾಯ್ತು. ತಲೆಬರಹವೇನೋ- ‘ವೃತ್ತದಾಚೆ’ ಎಂದು ಇರಬೇಕು. ಆ ಕತೆ ಹೆಚ್ಚೂಕಮ್ಮಿ ದ್ಯಾವನೂರು ಸಂಕಲನದಲ್ಲಿನ ‘ಒಂದು ದಹನದ ಕತೆ’ ಇದೆಯಲ್ಲಾ, ಅಂಥದು.

ಅದಿರಲಿ, ಕನ್ನಡದ ಕಥಾ ಕ್ಷೇತ್ರದಲ್ಲಿನ ಸೂಕ್ಷ್ಮತೆ ಮತ್ತು ಸಂವೇದನಾಶೀಲತೆಯ ಸ್ತರ ಹೆಚ್ಚಾಗುವಂತಾಗಲು ಪ್ರಜಾವಾಣಿಯ ಕಥಾಸ್ಪರ್ಧೆಯ ಪಾತ್ರ ದೊಡ್ಡದು ಎಂದೆನಿಸುತ್ತದೆ. ಕಥಾಸ್ಪರ್ಧೆಗೆ ಸಾಮಾನ್ಯವಾಗಿ ನೂರಾರು ಕತೆಗಳು ಬರುತ್ತವೆ. 1ನೇ ರೌಂಡ್‍ನಲ್ಲಿ ಉಪಸಂಪಾದಕರೊಬ್ಬರು, ಪರಿಗಣಿಸಬಹುದಾದ ಕಥೆಗಳನ್ನು ಆಯ್ಕೆ ಮಾಡಿ ಸಂಪಾದಕರಿಗೆ ನೀಡುವುದು ಮಾಮೂಲಿ. ಹೀಗೊಂದು ಸಲ, ಉಪಸಂಪಾದಕರು ರಿಜೆಕ್ಟ್ ಮಾಡಿದ ಕತೆಯನ್ನು ಓದೇ ಬಿಡುವ ಎಂಬ ಕುತೂಹಲಕ್ಕೋ ಏನೋ ಸಂಪಾದಕರು ಆ ಕತೆ ತರಿಸಿಕೊಂಡು ಓದುತ್ತಾರೆ. ಓದಿ ಬೆರಗಾಗುತ್ತಾರೆ. ಅದೊಂದು ಅತ್ಯುತ್ತಮ ಕತೆಯಾಗಿರುತ್ತದೆ. ಎಂಥಾ ಅನ್ಯಾಯವಾಗಿ ಬಿಡ್ತು ಎಂದು ಹಣೆ ಚಚ್ಚಿಕೊಳ್ಳುತ್ತಾರೆ. ನಂತರ ಆ ಕತೆಯನ್ನು ಆಯ್ಕೆ ಸಮಿತಿಯ ಗಮನಕ್ಕೆ ಕಳಿಸಿಕೊಡುತ್ತಾರೆ. ಕತೆ ಹೆಸರು- ಹಾಲು ಕುಡಿದ ಹುಡುಗ, ಬರೆದವರು- ಅಬ್ದುಲ್ ರಷೀದ್. ಈ ಕಥೆ ಎನ್ನುವುದು ಬೆಂಕಿಪೊಟ್ಟಣದಲ್ಲಿ ಇಡಬಹುದಾಗಿದ್ದಂತಹ ಸೂಕ್ಷ್ಮ ನೇಯ್ಗೆಯ ಢಾಕಾದ ನವಿರು ಮಸ್ಲಿನ್ ಸೀರೆಯಂತೆ. ಮುಷ್ಟಿಗೆ ಸಿಗದ ಈ ಕತೆಯನ್ನು ಗುರುತಿಸುವುದು ಸಾಮಾನ್ಯ ವಿಷಯವಲ್ಲ. ಅದಕ್ಕೇ ಸೂಕ್ಷ್ಮತೆ, ಸಂವೇದನಾಶೀಲತೆ ಸ್ತರ ಹೆಚ್ಚಿಸುವಲ್ಲಿ ಪ್ರಜಾವಾಣಿ ಕಥಾಸ್ಪರ್ಧೆ ವೇಗವರ್ಧಕದಂತೆ ಎಂದದ್ದು.

ಅಂದು ಅಂಥ ಕತೆ ಬರೆದ ರಷೀದ್ ಈ ಕಾಲದ ಇಪ್ಪತ್ತು ವರ್ಷದ ಯುವಕನಾಗಿದ್ದರೆ, ಇಂದಿನ ವಾಟ್ಸಪ್, ಫೇಸ್‍ಬುಕ್ ಗೀಳಿನ ನಡುವೆ ಅಂಥ ಕತೆ ಬರೆಯುತ್ತಿದ್ದನೆ? ರಷೀದ್‍ನಂತಹ ಪ್ರತಿಭಾವಂತರು ಈ ಕಾಲದಲ್ಲಿ ವಾಟ್ಸಪ್, ಫೇಸ್‍ಬುಕ್‍ನಲ್ಲಿ ಮುಳುಗೇಳುತ್ತ ಕಳೆದು ಹೋಗುತ್ತಿರಬಹುದೆ? ಇಂದಿನ ವಾಟ್ಸಪ್, ಫೇಸ್‍ಬುಕ್‍ಗಳ ಕಡೆ ಕಣ್ಣಾಡಿಸಿದರೆ ಬಹುತೇಕ ಸ್ವಯ ಇಲ್ಲದ ಬಯಲು ಶೌಚಾಲಯದಂತೆ ಕಂಡುಬರುತ್ತದೆ. ಇದು ಸ್ನಾನಗೃಹವಾಗಿದ್ದರೆ ಚೆನ್ನಾಗಿತ್ತು ಅನಿಸುತ್ತದೆ. ಇದನ್ನು ಯಾಕೆ ಹೇಳಿದೆನೆಂದರೆ- ಸೂಕ್ಷ್ಮತೆ, ಸಂವೇದನಾಶೀಲತೆಯ ಅಭಿರುಚಿ ಉಂಟಾಗಲು ತನ್ನ ಕಾಣ್ಕೆ ನೀಡುತ್ತಿರುವ ಪ್ರಜಾವಾಣಿಗೆ ಒಂದು ಸಾಧ್ಯತೆಯ ಬಗ್ಗೆ ಗಮನ ಸೆಳೆಯುವುದಕ್ಕಾಗಿ.

ಇಂದು ನಮ್ಮ ಯವಜನತೆ ಅಭಿವ್ಯಕ್ತಗೊಳ್ಳಬೇಕಾಗಿದೆ. ಸಮುದಾಯದ ಧ್ವನಿಯಾಗಬೇಕಾಗಿದೆ. ಭಾರತದಲ್ಲಿ ಸುಮಾರು 137 ಕೋಟಿ ಬಾಯಿಗಳಿವೆ. 137 ಕೋಟಿ ಹೊಟ್ಟೆಗಳಿವೆ. 374 ಕೋಟಿ ಕೈಗಳಿವೆ. ಈ ಕೈಗಳಿಗೆ ಕೆಲಸ ಸಿಗುವಂತಾಗಿ ಅವುಗಳ ಹೊಟ್ಟೆ ತುಂಬಿಸಬೇಕಾಗಿದೆ. ಇಂದು ಉದ್ಯೋಗ ಕುಸಿತವಾಗುತ್ತ ಜನರು ಉದುರಿ ಹೋಗುತ್ತಿದ್ದಾರೆ. ಇಂಥಲ್ಲಿ ಜೀವಗಳನ್ನು ಉಳಿಸುವ ಯೋಜನೆ ರೂಪಿಸಬೇಕಾಗಿದೆ. ಆದರೆ ಹೊಟ್ಟೆಗೆ ಹೊಡೆಯುವುದನ್ನೆ ಆಳ್ವಿಕೆಯು ಅಭಿವೃದ್ಧಿ ಎಂದುಕೊಂಡಿದೆ. ಇದಕ್ಕೆ ಉದಾಹರಣೆ- ಇಂದು ಇಲ್ಲಿ ಚರ್ಚಿತವಾಗುತ್ತಿರುವ ಮುಕ್ತ ವ್ಯಾಪಾರ ಒಪ್ಪಂದ- ಇಂಥವು. ಎಷ್ಟಂತ ಹೇಳುವುದು?

ಇಂದು ಭೂಮಿಯೇ ಮನುಷ್ಯನ ದಾಹಕ್ಕೆ ಸಿಲುಕಿ ದಹಿಸುತ್ತಿದೆ. ಭೂಮಿ ಬಾಯಾರಿಕೆಯನ್ನು ನೀಗಿಸಬಹುದು, ದಾಹವನ್ನಲ್ಲ. ಇಂದಿನ ಮನುಷ್ಯನ ದಾಹದಿಂದಾಗಿ ತಾಪಮಾನ ಹೆಚ್ಚಾಗಿ- ಹಿಮಗಡ್ಡೆ ಕರಗುತ್ತಿವೆ; ಸಮುದ್ರದ ಮಟ್ಟ ಏರುತ್ತಿದೆ. ಸೈಕ್ಲೋನ್‍ಗಳು ಅಪ್ಪಳಿಸುತಿವೆ. ಹುಚ್ಚು ಮಳೆ ಬರುತ್ತಿದೆ. ಭೂಮಿ ಕುಸಿಯುತ್ತಿದೆ. ಎಲ್ಲವೂ ಕೊಚ್ಚಿಹೋಗುತ್ತಿದೆ. ಭೂಮಿತಾಯಿಯೇ ಸ್ವೀಡನ್‍ನ ಹದಿನಾರು ವರ್ಷದ ಬಾಲೆ ಗ್ರೆಟಾ ತನ್ಬರ್ಗ್‍ಳ ಮೈಮೇಲೆ ಬಂದು ನುಡಿಸಿದಂತೆ ಗ್ರೆಟಾ ನುಡಿಯುತ್ತಿದ್ದಾಳೆ. ಈ ಅನಾಹುತಗಳಿಗೆಲ್ಲಾ ಕಾರಣರಾದ ಜಗತ್ತಿನ ನಾಯಕರಿಗೆ ‘how dare you are‘ ಎಂದು ಕೇಳುತ್ತಿದ್ದಾಳೆ. ಹೀಗೆ ಕೇಳಬಹುದಾದ ಬಾಲಕ-ಬಾಲಕಿಯರು ಇಲ್ಲೂ ಇರಬಹುದು. ಎಲ್ಲೆಲ್ಲೂ ಇರಬಹುದು. ಅವರೀಗ ಮಾತಾಡಬೇಕಾಗಿದೆ. ಯಾಕೆಂದರೆ ಅವರು ಉಳಿಯಬೇಕಾಗಿದೆ.

ಪ್ರತಿಕ್ರಿಯಿಸಿ (+)