ಗುರುವಾರ , ಆಗಸ್ಟ್ 18, 2022
24 °C
ಫೇಸ್‌ಬುಕ್‌ ಖಾತೆಯಲ್ಲಿನ ಕಾಮೆಂಟ್‌ ಬಾಕ್ಸ್‌ ಬಂದ್‌ ಏಕೆ? ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಲೇವಡಿ

ಪ್ರತಾಪ ಸಿಂಹ–ರಾಮದಾಸ್‌ ಎಲ್ಲಿದ್ದೀರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಐಎಎಸ್‌ ಅಧಿಕಾರಿಗಳಿಬ್ಬರ ಎತ್ತಂಗಡಿ ಬಳಿಕ ಸಂಸದ ಪ್ರತಾಪ ಸಿಂಹ ನಾಪತ್ತೆಯಾಗಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಲೇವಡಿ ಮಾಡಿದರು.

‘ಅಧಿಕಾರಿಗಳಿಬ್ಬರ ನಡುವೆ ಜಗಳ ತಂದಿಟ್ಟ ಪ್ರತಾಪ ಸಿಂಹ, ಆಗ ನಿತ್ಯವೂ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದರು. ಇಬ್ಬರೂ ಅಧಿಕಾರಿಗಳ ವರ್ಗವಾದ ಬಳಿಕ 15 ದಿನಗಳಿಂದ ಕಾಣೆಯಾಗಿದ್ದಾರೆ’ ಎಂದು ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ವ್ಯಂಗ್ಯವಾಡಿದರು.

‘ಶಾಸಕ ಜಿ.ಟಿ.ದೇವೇಗೌಡರ ಸವಾಲು ಸ್ವೀಕರಿಸಿ ಅಧಿಕಾರಿಗಳಿಬ್ಬರನ್ನು ಎತ್ತಂಗಡಿ ಮಾಡಿಸುವಲ್ಲಿ ಯಶಸ್ವಿಯಾದಿರಿ. ಆ ನಂತರ ಶಾಸಕರು ಏನು ಮಾತನಾಡಲಿಲ್ಲ. ನೀವೂ ಕಾಣಿಸುತ್ತಿಲ್ಲ. ಹೊರಗೆ ಬನ್ನಿ. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ನಿಮ್ಮ ಖಾತೆಯ ಕಾಮೆಂಟ್‌ ಬಾಕ್ಸ್‌ ಅನ್ನೇ ತೆಗೆದಿರುವುದು ಯಾಕೆ ಸಂಸದರೇ?’ ಎಂದು ಲಕ್ಷ್ಮಣ್‌ ಲೇವಡಿ ಮಾಡಿದರು.

ಜಿಲ್ಲಾಧಿಕಾರಿ ಶಿಖಾ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಾಪ ಸಿಂಹ ಆರೋಪಕ್ಕೆ ತಿರುಗೇಟು ನೀಡಿದ ಎಂ.ಲಕ್ಷ್ಮಣ್, ‘ಸಂಸದರು ಮಾಹಿತಿ ಪಡೆದು ಮಾತನಾಡಲಿ. ಶಿಖಾ ಪ್ರಕರಣದಲ್ಲಿ ಆರೋಪಿಯಾಗಿದ್ದ ಮರಿಗೌಡ ಅಂದು ಜೈಲು ಪಾಲಾದರು. ಆ ತಕ್ಷಣಕ್ಕೆ ಸಿದ್ದರಾಮಯ್ಯ ಶಿಖಾ ಅವರನ್ನು ವರ್ಗಾಯಿಸಿರಲಿಲ್ಲ. ಈ ಘಟನೆಯ ನಂತರವೂ ಒಂದು ಕಾಲು ವರ್ಷ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದರು ಎಂಬುದು ನೆನಪಿನಲ್ಲಿರಲಿ’ ಎಂದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಿದ್ದಾಗಲೇ ಕುರುಬಾರಹಳ್ಳಿ ಸರ್ವೆ ನಂಬರ್‌ ನಾಲ್ಕರ ಭೂ ತಕರಾರನ್ನು ಬಗೆಹರಿಸಿದ್ದರು. ಆದರೆ ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ವ್ಯಾಪ್ತಿಯ ಬಡಾವಣೆಗಳ ನಿವಾಸಿಗಳಿಗೆ ಖಾತೆ ಮಾಡಿಕೊಡದಿದ್ದರಿಂದ; ತಮಗೆ ಎದುರಾದ ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಸುಪ್ರೀಂಕೋರ್ಟ್‌ಗೆ ಎಸ್‌ಎಲ್‌ಪಿ ಸಲ್ಲಿಸಿದ್ದಾರೆ.’

‘ನಿಮ್ಮದೇ ಸರ್ಕಾರದ ಜಿಲ್ಲಾಧಿಕಾರಿಯ ತಪ್ಪು ನಿರ್ಧಾರದಿಂದ ನಿಮ್ಮ ಕ್ಷೇತ್ರದ ಜನರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾಸಕ ರಾಮದಾಸ್‌ ಎಲ್ಲಿದ್ದೀರಿ? ಈಗಲಾದರೂ ಮತದಾರರ ನೆರವಿಗೆ ಮುಂದಾಗಿ. ಭೂ ತಕರಾರಿನ ಸಮಸ್ಯೆ ಬಗೆಹರಿಸಿ. ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿರುವ ಎಸ್‌ಎಲ್‌ಪಿ ವಾಪಸ್‌ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿ. ಅಲ್ಲಿನ ಜನರಿಗೆ ಖಾತೆ ಮಾಡಿಸಿಕೊಡಿ’ ಎಂದು ಕೆಪಿಸಿಸಿ ವಕ್ತಾರರು ಆಗ್ರಹಿಸಿದರು.

‘ಕೋವಿಡ್‌ನಿಂದ ಮೃತರಾದ, ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ 30 ಸಾವಿರ ಕುಟುಂಬಗಳಿಗೆ ತಲಾ ₹ 1 ಲಕ್ಷ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಆದರೆ ಇದೂವರೆಗೂ ರಾಜ್ಯ ಸರ್ಕಾರ ಘೋಷಿಸಿದ ಪಟ್ಟಿಯಲ್ಲಿ 1900 ಮೃತರ ಕುಟುಂಬಗಳಷ್ಟೇ ಬಿಪಿಎಲ್‌ ಪಡಿತರ ಚೀಟಿ ಹೊಂದಿವೆ. ನಿಮ್ಮ ಲೆಕ್ಕಾಚಾರದಂತೆಯೇ ಉಳಿದವರ ಸಾವಿನ ಪಟ್ಟಿಯನ್ನು ಪ್ರಕಟಿಸಿ’ ಎಂದು ಲಕ್ಷ್ಮಣ್‌ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು