ಬಿಜೆಪಿಯಲ್ಲಿ ಹೆಚ್ಚು ಮಾತನಾಡುವವರಿಗೆ ಬುದ್ಧಿ ಕಲಿಸುತ್ತೇವೆ: ಈಶ್ವರಪ್ಪ

ಮೈಸೂರು: ಬಿಜೆಪಿಯಲ್ಲಿ ಹೆಚ್ಚಾಗಿ ಮಾತನಾಡುತ್ತಿರುವ ಬಸನಗೌಡಪಾಟೀಲ ಯತ್ನಾಳ್, ಸಿ.ಪಿ.ಯೋಗೇಶ್ವರ್, ರೇಣುಕಾಚಾರ್ಯ ಹಾಗೂ ಇತರರಿಗೆ ಯಾವಾಗ, ಹೇಗೆ ಬುದ್ಧಿ ಕಲಿಸಬೇಕು ಎಂಬುದು ಗೊತ್ತಿದೆ. ಖಂಡಿತ ಬುದ್ಧಿ ಕಲಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
‘ನಮ್ಮ ಪಕ್ಷದಲ್ಲಿ ಅಪ್ಪ ಅಮ್ಮ ಇದ್ದಾರೆ. ಅದಕ್ಕಾಗಿಯೇ ವರಿಷ್ಠರು ಎಲ್ಲರ ಅಭಿಪ್ರಾಯ ಆಲಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಕುರಿತು ಅನೇಕರು ಹೇಳಿಕೆ ನೀಡಿದಾಗ್ಯೂ, ಆ ಪಕ್ಷದ ಹೈಕಮಾಂಡ್ ಬಂದು ಸಮಸ್ಯೆ ಆಲಿಸಿಲ್ಲ’ ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಸ್ವಪಕ್ಷಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಳನಾಯಕರಿದ್ದಂತೆ. ಪಕ್ಷದೊಳಗೆ ಇದ್ದುಕೊಂಡು ಸಿದ್ದರಾಮಯ್ಯ ಆಟ ಆಡುತ್ತಿದ್ದಾರೆ. ಇದೆ ಛಾಯೆ ವಿಶ್ವನಾಥ್ ಅವರಲ್ಲು ಉಳಿದುಕೊಂಡಿದೆ ಎಂದು ವ್ಯಂಗ್ಯವಾಡಿದರು.
ಪರಸ್ಪರ ಸೋಲಿಸಲು ಪ್ರಯತ್ನಪಟ್ಟಿಲ್ಲ ಎಂದು ಸಿದ್ದರಾಮಯ್ಯ ಹಾಗೂ ಡಾ.ಜಿ.ಪರಮೇಶ್ವರ ಅವರು ದಲಿತ ವ್ಯಕ್ತಿಯೊಬ್ಬರ ಮೇಲೆ ಪ್ರಮಾಣ ಮಾಡಲಿ ಎಂದು ಸವಾಲೆಸೆದರು.
‘ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ತಾನು ಸೊಸೆ ಕೀಲಿ ಕೈ ನನ್ನ ಕೈಯಲ್ಲಿ ಇದೆ ಎನ್ನುತ್ತಾರೆ. ಹಾಗಾದರೆ, ಅವರು ಯಾವ ಪಕ್ಷಕ್ಕೆ ಮಗ ಎಂದು ಪ್ರಶ್ನಿಸಿದ ಈಶ್ವರಪ್ಪ, ನಾವು ಪಕ್ಷವನ್ನು ತಾಯಿ ಅಂದುಕೊಂಡಿದ್ದೇವೆ. ನಮ್ಮ ತಾಯಿಗೆ ಕಿಂಚಿತ್ ತೊಂದರೆಯಾದರೂ ನಾವು ವಿರೋಧಿಸಿ ನಿಲ್ಲುತ್ತೇವೆ. ಸಿದ್ದರಾಮಯ್ಯ ತಾವು ಯಾವ ಪಕ್ಷಕ್ಕೆ ನಿಷ್ಠಾವಂತ ಎಂದು ತಿಳಿಸಬೇಕು’ ಎಂದು ಒತ್ತಾಯಿಸಿದರು.
ಕಾಂಗ್ರೆಸ್‌ನಲ್ಲಿ 5 ಜಾತಿಗೆ 5 ಜನ ಸ್ವಯಂಘೋಷಿತ ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ, ಅವರು ಮುಂದಿನ ಚುನಾವಣೆಯಲ್ಲಿ ವಿರೋಧ ಪಕ್ಷದ ಸ್ಥಾನದಲ್ಲೂ ಕೂರುವುದಿಲ್ಲ. ಕಾಂಗ್ರೆಸ್‌ನಿಂದ ಹೊರಬಂದವರು ಯಾರೂ ಮುಳುಗುತ್ತಿರುವ ಹಡಗಾದ ಕಾಂಗ್ರೆಸ್ ಪಕ್ಷವನ್ನು ಮೂಸಿಯೂ ನೋಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಸಿದರು.
‘ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಮೀಸಲಾತಿ ಘೋಷಣೆ ಮಾಡಿದ್ದರ ಕುರಿತು ಎಲ್ಲ ಪಕ್ಷದವರಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಇಷ್ಟು ಮುಂಚಿತವಾಗಿ ಘೋಷಿಸಿದ ಕುರಿತು ನಮಗೂ ಒಪ್ಪಿಗೆ ಇಲ್ಲ. ಸೌಜನ್ಯಕ್ಕಾದರೂ ನಮ್ಮನ್ನು ಕೇಳಬೇಕಿತ್ತು. ಆದರೆ, ಮರುಪರಿಶೀಲನೆ ಮಾಡಿ ಎಂದು ಸರ್ಕಾರ ಮನವಿ ಮಾಡುವುದಿಲ್ಲ. ಯಾರಿಗೆ ಅಸಮಾಧಾನ ಇದೆಯೋ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ಇದೆ’ ಎಂದರು.
ಸಂಸದರಾದ ಸುಮಲತಾ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಬಳಸುವ ಭಾಷೆ ಸರಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.